ವಿಶೇಷ ಚೇತನ ಮಗುವನ್ನು ಬಾವಿಗೆ ಎಸೆದ ಪಾಪಿಗಳು, ನಾಲ್ವರು ಅಂದರ್
ವಿಶೇಷ ಚೇತನ ಹೆಣ್ಣು ಮಗುವನ್ನು ಬಾವಿಗೆಸೆದು ಕೊಂದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ರಾಮನಗರ, (ಮಾ.10): ಮಹಿಳಾ ದಿನಾಚರಣೆಯಂದೇ ಪೋಷಕರೆ ತಮ್ಮ ಹೆಣ್ಣು ಮಗುವನ್ನು ಬಾವಿಗೆ ಎಸೆದು ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಕನಕಪುರ ತಾಲೂಕಿನ ಯಡಮಾರನಹಳ್ಳಿ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.
ತಾಲೂಕಿನ ಮರಳೆಬೇಕುಪ್ಪೆ ಗ್ರಾಮದ ಶಂಕರ ಹಾಗೂ ಮನಸಾ ದಂಪತಿಯ ಮಹಾದೇವಿ(2) ಮೃತ ಕಂದಮ್ಮ. ಡಮಾರನಹಳ್ಳಿ ಗ್ರಾಮದ ಹೊರ ವಲಯದ ಮಹದೇಶ್ವರ ದೇಗುಲದ ಸಮೀಪದ ಪಾಳು ಬಾವಿಯಲ್ಲಿ ಮಗುವಿನ ಶವ ತೇಲುತ್ತಿತ್ತು. ಇದನ್ನು ಕಂಡ ದೇಗುಲದ ಅರ್ಚಕರು ಕೂಡಲೇ ಸಾತನೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಬಾವಿಯಿಂದ ಮಗುವಿನ ಮೃತದೇಹವನ್ನು ಹೊರ ತೆಗೆದಿದ್ದಾರೆ.
ಆರೋಪಿಗಳು ಅಂದರ್
ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದ್ದು, ಮಗು ಅಂಗವೈಕಲ್ಯದಿಂದ ಬಳಲುತ್ತಿತ್ತು. ಇದರಿಂದ ಮಗುವನ್ನು ಸಾಕಲು ಸಾಧ್ಯವಾಗದೆ ಪೊಷಕರೇ ಕಂದಮ್ಮನನ್ನು ಬಾವಿಯಲ್ಲಿ ಎಸೆದಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ.
ಮೃತ ಹೆಣ್ಣು ಮಗುವಿನ ಪಾಲಕರು ಹಾರೋಹಳ್ಳಿಯ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಎರಡು ವರ್ಷ ಕಳೆದರೂ ಕೂಡ ಮಗುವಿಗೆ ಬಾಯಿ ಮತ್ತು ಕೈ ಕಾಲುಗಳು ಸ್ವಾಧೀನವಿರಲಿಲ್ಲ. ಇಂತಹ ಮಗುವನ್ನು ಸಾಕಲು ಸಾಧ್ಯವಿಲ್ಲ ಎಂದು ಸಾಯಿಸಲು ನಿರ್ಧರಿಸಿದ ಕುಟುಂಬ ಮಗುವನ್ನು ಬಾವಿಗೆ ಎಸೆದು ಹೋಗಿದ್ದಾರೆಂದು ತಿಳಿದು ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಜ್ಜಿ ಭದ್ರಮ್ಮ, ಸಂಬಂಧಿಕರಾದ ಜಯರತ್ನಮ್ಮ, ತಂದೆ ಶಂಕರ, ತಾಯಿ ಮಾನಸ ಬಂಧಿಸಲಾಗಿದೆ. ಸಾತನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವಿಚಾರಣೆ ಮುಂದುವರೆದಿದೆ