ರಾಮನಗರ: ಹಣ ದುಪ್ಪಟ್ಟು ಮಾಡುವ ಆಮಿಷ, ಯುವತಿಗೆ 12 ಲಕ್ಷ ಪಂಗನಾಮ ಹಾಕಿದ ಖದೀಮರು..!
ಹಣ ವಾಪಸ್ ಬರದೇ ಇದ್ದಾಗ ತಾನು ಮೋಸ ಹೋಗಿರುವುದು ಗೊತ್ತಾಗಿದ್ದು ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಯುವತಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಕನಕಪುರ(ಫೆ.29): ಹೂಡಿಕೆ ಮಾಡಿದ ಹಣ ದುಪ್ಪಟ್ಟು ಆಗುತ್ತದೆ ಎಂದು ವಂಚಕರು ಕಳುಹಿಸಿದ ಟೆಲಿಗ್ರಾಂ ಮೆಸೇಜ್ ಹಿಂದೆ ಬಿದ್ದ ಯುವತಿ ಬರೋಬ್ಬರಿ 12.59 ಲಕ್ಷ ಕಳೆದುಕೊಂಡು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬಸವೇಶ್ವರನಗರದ ನಿವಾಸಿ ಕೆ.ಎಂ.ನಯನಶ್ರೀ ಹಣ ಕಳೆದುಕೊಂಡ ಬಿಕಾಂ ವಿದ್ಯಾರ್ಥಿನಿ. ಕಳೆದ ಫೆ.18ರಂದು ಯುವತಿ ಮೊಬೈಲ್ ಟೆಲಿಗ್ರಾಂಗೆ ಮೈಂತ್ರಾ ಎಂಬ ಶಾಪಿಂಗ್ ಕಂಪನಿಯಿಂದ 100 ರು. ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಹಣ ನೀವು ಪಡೆಯುತ್ತೀರಿ ಎಂಬ ಸಂದೇಶದ ಲಿಂಕ್ ಕ್ಲಿಕ್ ಮಾಡಿ ಆರಂಭದಲ್ಲಿ 100 ರು. ಹಣ ಹೂಡಿಕೆ ಮಾಡಿದ್ದಾಳೆ. ಬಳಿಕ ಅವರ ಖಾತೆಗೆ 160 ರುಪಾಯಿ ಜಮೆ ಮಾಡಿದ್ದಾರೆ.
ಗ್ರಾಹಕನ ಅಕೌಂಟ್‌ನಲ್ಲಿದ್ದ 16 ಕೋಟಿ ಎಗರಿಸಿದ ಐಸಿಐಸಿಐ ಬ್ಯಾಂಕ್ ಮ್ಯಾನೇಜರ್!
ಹೀಗೆ ಹೂಡಿಕೆ ಮಾಡಿದ ಹಣ ದುಪ್ಪಟ್ಟು ಮಾಡಿಕೊಳ್ಳಬಹುದು ಎಂದು ನಂಬಿಸಿದ ವಂಚಕರ ಜಾಲಕ್ಕೆ ಬಿದ್ದು ಯುವತಿ ತನ್ನ ಯೂನಿಯನ್ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನೆಲ್ಲಾ ವಂಚಕರ ಖಾತೆಗೆ ಜಮೆ ಮಾಡಿ ಹಣ ದುಪ್ಪಟ್ಟು ಮಾಡಿಕೊಳ್ಳಬಹುದು ಎಂಬ ದುರಾಸೆಯಿಂದ ಸ್ನೇಹಿತರು, ಸಹೋದರ, ಸಂಬಂಧಿಕರ ಬಳಿ ಸಾಲ ಪಡೆದು ಹಂತಹಂತವಾಗಿ ವಂಚಕರು ಹೇಳಿದ ಬೇರೆ ಬೇರೆ ಖಾತೆಗಳಿಗೆ ಬರೋಬ್ಬರಿ 12,59,175 ರು.ಗಳನ್ನು ಹೂಡಿಕೆ ಮಾಡಿದ್ದಾಳೆ.
ಬಳಿಕ ಅ ಹಣ ವಾಪಸ್ ಬರದೇ ಇದ್ದಾಗ ತಾನು ಮೋಸ ಹೋಗಿರುವುದು ಗೊತ್ತಾಗಿದ್ದು ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಯುವತಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.