ಬಿಎಂಟಿಸಿ ಗುಜರಿ ವಸ್ತು ಮಾರಾಟದಲ್ಲಿ 10 ಕೋಟಿ ರೂ. ಭ್ರಷ್ಟಾಚಾರ..!: ನೋಟಿಸ್ ನೀಡಿ ಸುಮ್ಮನಾದ ನಿಗಮ
ಸಿಲಿಕಾನ್ ಸಿಟಿಯಲ್ಲಿ ಭ್ರಷ್ಟಾಚಾರ ಕೇಂದ್ರಗಳಾದ ಸಾರ್ವಜನಿಕ ಸೇವಾ ಸಂಸ್ಥೆಗಳು
ಬಿಎಂಟಿಸಿ ಗುಜರಿ ವಸ್ತುಗಳಿಂದಲೇ ಕೋಟಿ ಕೋಟಿ ಭ್ರಷ್ಟಾಚಾರ ಮಾಡಿದ ಅಧಿಕಾರಿಗಳು
ಗುಜರಿ ವಸ್ತುಗಳ ಮಾರಾಟದ ವೇಳೆ ಚಿತ್ರೀಕರಣ ಆಫ್ ಮಾಡಿ ನಿಗಮಕ್ಕೆ ವಂಚನೆ
ಬೆಂಗಳೂರು (ಫೆ.05): ಸಿಲಿಕಾನ್ ಸಿಟಿಯ ಸಾರ್ವಜನಿಕ ಸೇವಾ ಸಂಸ್ಥೆಗಳಾದ ಬಿಬಿಎಂಪಿ, ಬಿಡಿಎ, ಬಿಎಂಟಿಸಿಗಳಲ್ಲಿ ಭ್ರಷ್ಟಾಚಾರದ ತವರು ಕೇಂದ್ರಗಳಾಗಿ ನಿರ್ಮಾಣವಾಗಿವೆ. ಆಗಿಂದಾಗ್ಗೆ ಕೋಟ್ಯಂತರ ರೂ. ಮೌಲ್ಯದ ಭ್ರಷ್ಟಾಚಾರ ಪ್ರಕರಣ ಹೊರಬರುತ್ತಲೇ ಇರುತ್ತವೆ. ಈಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯಲ್ಲಿ ಗುಜರಿ ವಸ್ತುಗಳನ್ನು ಮಾರಾಟ ಮಾಡು ಮೂಲಕವೇ 10 ಕೋಟಿ ರೂ.ಗಿಂತ ಹೆಚ್ಚಿನ ಭ್ರಷ್ಟಾಚಾರ ಮಾಡಿರುವುದು ಬಯಲಿಗೆ ಬಂದಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇರು ಎಲ್ಲ ಸಾರ್ವಜನಿಕ ಸೇವಾ ಸಂಸ್ಥೆಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಇಲ್ಲಿನ ಅಧಿಕಾರಿಗಳು ಎಲ್ಲೆಲ್ಲಿ ಸಾಧ್ಯವೋ ಎಲ್ಲ ಕಡೆಗಳಲ್ಲಿಯೂ ಸರ್ಕಾರಕ್ಕೆ ತಪ್ಪು ಲೆಕ್ಕ ತೋರಿಸಿ ಕೋಟ್ಯಂತರ ರೂ. ಭ್ರಷ್ಟಾಚಾರ ಮಾಡುತ್ತಿರುವ ಘಟನೆಗಳು ಆಗಿಂದಾಗ್ಗೆ ಹೊರಬರುತ್ತಲೇ ಇರುತ್ತವೆ. ಆದೇ ರೀತಿ ಈಗಲೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯಲ್ಲಿ ಮತ್ತೊಂದು ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆ ಬಂದಿದೆ. ಸಾರಿಗೆ ಸಚಿವ ಬಿ. ಶ್ರೀರಾಮುಲು ಮತ್ತು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಎಂ.ಡಿ ಸತ್ಯವತಿ ಅವರು ಬೇಲಿಯೇ ಎದ್ದು ಹೊಲಮೇಯ್ದ ಈ ಸ್ಟೋರಿಯನ್ನೊಮ್ಮೆ ನೋಡಲೇಬೇಕು.
ಇದನ್ನೂ ಓದಿ: ಮಿತಿ ಮೀರಿದ ಬಿಎಂಟಿಸಿ ಅಧಿಕಾರಿಗಳ ಕಿರುಕುಳ: ಮೊನ್ನೆ ಕಂಡಕ್ಟರ್ ಇಂದು ಡ್ರೈವರ್ ಆತ್ಮಹತ್ಯೆಗೆ ಯತ್ನ
ಗುಜರಿ ವಸ್ತು ಮಾರಾಟದ ವೇಳೆ ಚಿತ್ರೀಕರಣ ಬಂದ್: ಬಿಎಂಟಿಸಿ ನಿಗಮದ ಗುಜರಿ ವಸ್ತುಗಳ ಮಾರಾಟದ ವೇಳೆ ಭಾರೀ ಅಕ್ರಮ ಮಾಡಿರುವ ಆರೋಪ ಕೇಳಿಬಂದಿದೆ. ನಿಗಮದಲ್ಲಿ ಗುಜರಿ ವಸ್ತುಗಳ ಮಾರಾಟದ ವೇಳೆ ವೀಡಿಯೋ ಚಿತ್ರೀಕರಣ ಕಡ್ಡಾಯ ಮಾಡಲಾಗಿದೆ. ಆದರೆ, ಇಲ್ಲಿ ಗುಜರಿ ವಸ್ತುಗಳ ತೂಕದ ವೇಳೆ ಅರ್ಧ ವೀಡಿಯೋ ಚಿತ್ರೀಕರಣ ಮಾಡಿದ ಅಧಿಕಾರಿಗಳು ನಿಗಮದ ಬೊಕ್ಕಸಕ್ಕೆ ಭಾರಿ ಪ್ರಮಾಣದ ಆರ್ಥಿಕ ನಷ್ಟವನ್ನುಂಟು ಮಾಡಿದ್ದಾರೆ. ಸಿ.ಸಿ.ಕ್ಯಾಮರಾಗಳನ್ನು ಆಫ್ ಮಾಡಿ ಗುಜರಿ ವಸ್ತುಗಳನ್ನು ಕದ್ದು ಮಾರಾಟ ಮಾಡಿರುವ ಖದೀಮರು ಈಗ ಸಿಕ್ಕಿಬಿದ್ದಿದ್ದಾರೆ.
ತೂಕದಲ್ಲಿ ಭಾರಿ ಪ್ರಮಾಣದ ಗೋಲ್ಮಾಲ್: ಬಿಎಂಟಿಸಿಯ ಗೋದಾಮಿನಲ್ಲಿರುವ ಗುಜರಿ ವಸ್ತುಗಳನ್ನು ಮಾರಾಟ ಮಾಡುವಾಗ ಭದ್ರತಾ ಜಾಗೃತ ದಳ ವಿಭಾಗದ ಭೂತರಾಜು, ಉಪಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ಪಾಪಣ್ಣ ಸೇರಿ ಹಲವರು ತೂಕದಲ್ಲಿ ಗೋಲ್ಮಾಲ್ ಮಾಡಿ ಕೋಟ್ಯಾಂತರ ರೂಪಾಯಿ ಅಕ್ರಮ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಳೆಯ ಕಬ್ಬಿಣ, ತಾಮ್ರ, ಯರಕ ಮಾರಾಟದ ವೇಳೆ ಗೋಲ್ಮಾಲ್ ಮಾಡಿದ್ದಾರೆ. ಗುಜರಿಗೆ ವಸ್ತುಗಳನ್ನು ಚಿತ್ರೀಕರಣ ಮಾಡಬೇಕೆಂಬ ನಿಯಮವಿದ್ದರೂ ತಪ್ಪು ಲೆಕ್ಕ ನೀಡುವ ದೃಷ್ಟಿಯಿಂದ ತೂಕ ಮಾಡುವಾಗ ವೀಡಿಯೋ ಚಿತ್ರೀಕರಣ ಮಾಡದೇ ವಂಚನೆ ಮಾಡಲಾಗಿದೆ. ಈ ಮೂಲಕ ಗುಜರಿ ವಸ್ತುಗಳ ತೂಕದ ಲೆಕ್ಕವನ್ನ ಅಧಿಕಾರಿಗಳು ಯಾಮಾರಿಸಿದ್ದಾರೆ.
ಕೋಟ್ಯಾಂತರ ರೂ. ಮೊತ್ತದ ಭ್ರಷ್ಟಾಚಾರ: ಅರ್ಧ ವಿಡಿಯೋ ಚಿತ್ರೀಕರಣ ಮಾಡಿದಾಗ ನಿಗಮಕ್ಕೆ 32,89,052 ರೂ ಆದಾಯವನ್ನು ಅಧಿಕಾರಿಗಳು ತೋರಿಸಿದ್ದರು. ಆದರೆ, ಚಿತ್ರೀಕರಣ ಆಫ್ ಮಾಡಿದಾಗ ಬಿಎಂಟಿಸಿಗೆ 13,89,785 ರೂ ಆದಾಯವಾಗಿದೆ ಎಂದು ಅಧಿಕಾರಿಗಳು ಲೆಕ್ಕ ನೀಡಿದ್ದಾರೆ. ಹಾಗಾದರೆ, ಬಿಎಂಟಿಸಿ ಸಂಸ್ಥೆಗೆ ಸುಲಭವಾಗಿ ಯಮಾರಿಸಿ ಕೋಟ್ಯಾಂತರ ರೂಪಾಯಿ ಲಪಟಾಯಿಸಿದ್ದಾರಾ ಎಂಬ ಅನುಮಾನ ಕೇಳಿಬಂದಿದೆ. ಈ ಪ್ರಕರಣದ ಬಗ್ಗೆ ಸಾಕ್ಷಿ ಸಮೇತ ಅಧಿಕಾರಿಗಳ ಮೇಲೆ ದೂರು ನೀಡಲಾಗಿದ್ದರೂ ಈ ಬಗ್ಗೆ ಅಧಿಕಾರಿಗಳಿಗೆ ಕೇವಲ ನೋಟೀಸ್ ನೀಡಿ ಬಿಎಂಟಿಸಿ ಹಿರಿಯ ಅಧಿಕಾರಿಗಳು ಸುಮ್ಮನಾಗಿದ್ದಾರೆ.
ಬಿಎಂಟಿಸಿಯಲ್ಲಿ ಮಹಿಳಾ ಅಧಿಕಾರಿಗಳದ್ದೇ ದರ್ಬಾರ್! ಪುರುಷ ಕಾರ್ಮಿಕರ ಸಮಸ್ಯೆ ಆಲಿಸೋರೇ ಇಲ್ವಾ?
ಗುತ್ತಿಗೆ ಸಿಬ್ಬಂದಿ ನಿಯೋಜನೆಯಲ್ಲೂ ಲಕ್ಷಾಂತರ ರೂ. ಲೂಟಿ: ಗುಜರಿಯಲ್ಲೇ ಐಟಮ್ಸ್ ನಲ್ಲೇ ಅಧಿಕಾರಿಗಳು ಕೋಟಿ ಕೋಟಿ ಕೊಳ್ಳೆ ಹೊಡೆದಿದ್ದಾರೆ. ಅಷ್ಟೇ ಅಲ್ಲ ಹೊರಗುತ್ತಿಗೆ ನೌಕರರ ವಿಚಾರದಲ್ಲೂ ಗೋಲ್ಮಾಲ್ ಮಾಡಲಾಗಿದೆ. ಹೊರಗುತ್ತಿಗೆಗೆ ಬಂದ ಸಿಬ್ಬಂದಿ ಸಂಖ್ಯೆ ನಮೂದು ಮಾಡೋದ್ರಲ್ಲೂ ಅಕ್ರಮ ಮಾಡಲಾಗಿದೆ. ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿ ಲೆಕ್ಕ ತಪ್ಪು ತೋರಿಸಿ ಲಕ್ಷ ಲಕ್ಷ ಪೀಕಿದ್ದಾರೆ. ಸಾಮಾನ್ಯ ಅಧಿಕಾರಿಗಳಿಂದಲೇ ಲಕ್ಷಾಂತರ ರೂಪಾಯಿ ಗೋಲ್ಮಾಲ್ ಮಾಡುತ್ತಿದ್ದಾರೆ. ಈ ಬಗ್ಗೆಯೂ ಕೇವಲ ನೋಟಿಸ್ ಜಾರೊಗೊಳಿಸಿ ಬಿಎಂಟಿಸಿ ಸುಮ್ಮನಾಗಿದೆ. ಬಿಎಂಟಿಸಿ ಸಿಬ್ಬಂದಿಗಳಾದ ಭೂತರಾಜು, ಪಾಪಣ್ಣ, ಬಸವರಾಜಪ್ಪ, ಸೌಮ್ಯಾ, ಉಮಾ, ಮಂಜುನಾಥ್, ಕಿಶೋರ್ ಕುಮಾರ್ ಗೆ ನೋಟೀಸ್ ನೀಡಿದ್ದು, ಈ ಅಕ್ರಮದ ಬಗ್ಗೆ ವಿವರಣೆ ಕೊಡಲು ಬಿಎಂಟಿಸಿ ಸೂಚನೆ ನೀಡಿದೆ.
ತಪ್ಪು ಮಾಡಿದರೆ ಕಠಿಣ ಶಿಕ್ಷೆಯೇ ಇಲ್ಲ: ಬಿಎಂಟಿಸಿಯಲ್ಲಿ ಚಾಲಕ ಅಥವಾ ನಿರ್ವಾಹಕ ತಪ್ಪು ಮಾಡಿದರೆ ಕೂಡಲೇ ಅವರನ್ನು ಮುಲಾಜಿಲ್ಲದೇ ಸಸ್ಪೆಂಡ್ ಮಾಡಲಾಗುತ್ತದೆ. ಆದರೆ, ಅಧಿಕಾರಿಗಳು ತಪ್ಪು ಮಾಡಿದರೆ ಕೇವಲ ಅವರಿಗೆ ನೋಟಿಸ್ ಜಾರಿಗೊಳಿಸಿ ಯಾವುದೇ ಕ್ರಮ ಕೈಗೊಳ್ಳದೇ ವರ್ಗಾವಣೆ ಮಾಡಿ ಕೈಬಿಡಲಾಗುತ್ತದೆ. ಇನ್ನು ಸರ್ಕಾರದಿಂದ ಇಂತಹ ಭ್ರಷ್ಟ ಅಧಿಕಾರಿಗಳ ಮೇಲೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳದೇ ಐದಾರು ತಿಂಗಳು ಅಮಾನತ್ತಿನಲ್ಲಿಟ್ಟು ಪುನಃ ಮತ್ತೊಂದೆ ಕಡೆಗೆ ವರ್ಗಾವಣೆ ಮಾಡಿ ಕೆಲಸ ಮಾಡುವಂತೆ ಸೂಚಿಸುತ್ತದೆ. ಮತ್ತದೇ ಬ್ರಹ್ಮಾಂಡ ಭ್ರಷ್ಟಾಚಾರ ಕಾರ್ಯಗಳು ಇಂತಹ ಅಧಿಕಾರಿಗಳಿಂದ ನಡೆಯುತ್ತಲೇ ಇರುತ್ತವೆ.