ಬೆಂಗಳೂರು: ಟ್ರಕ್‌ನಲ್ಲಿತ್ತು 1 ಕೋಟಿಯ ಗಾಂಜಾ..!
ಒಡಿಶಾದಿಂದ ನಗರಕ್ಕೆ ಗಾಂಜಾ ತಂದಿದ್ದ ರಾಜಸ್ಥಾನದ ನಿವಾಸಿಗಳು| ಗ್ರಾಹಕರ ಸೋಗಿನಲ್ಲಿ ಪೊಲೀಸರ ಕಾರ್ಯಾಚರಣೆ| 500 ಕೇಜಿ ಗಾಂಜಾ ವಶ| ಹಣ ತೋರಿಸಿದ ಮೇಲೆಯೇ ವ್ಯವಹಾರ ನಡೆಸಲು ಒಪ್ಪಿದ ಗ್ಯಾಂಗ್| ಆರಂಭದಲ್ಲಿ ಸಿಗದ ಟ್ರಕ್‌ನಲ್ಲಿ ಸಿಗದ ಗಾಂಜಾ, ಪೊಲೀಸರು ತಬ್ಬಿಬ್ಬು|
ಬೆಂಗಳೂರು(ಮಾ.27): ಒಡಿಶಾದಿಂದ ನಗರಕ್ಕೆ ಟ್ರಕ್‌ನಲ್ಲಿ ಗಾಂಜಾ ಸಾಗಿಸುತ್ತಿದ್ದ ಮೂವರು ಅಂತಾರಾಜ್ಯ ಡ್ರಗ್ಸ್ ಪೆಡ್ಲರ್‌ಗಳನ್ನು ಬೆಂಗಳೂರಿನ ಕೆ.ಆರ್.ಪುರಂ ಠಾಣೆ ಪೊಲೀಸರು ಬಂಧಿಸಿ, ಅವರಿಂದ 1 ಕೋಟಿ ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದಾರೆ.
ರಾಜಸ್ಥಾನ ಜೋಧಪುರದ ದಯಾಲ್‌ರಾಮ (38), ಪೂನರಾಮ (24) ಹಾಗೂ ಬುದ್ದಾರಾಮ (23) ಬಂಧಿತರು. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು 500 ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳು ಒಡಿಶಾದಲ್ಲಿರುವ ದಂಧೆಕೋರರಿಂದ ಕಡಿಮೆ ಮೊತ್ತಕ್ಕೆ ಅಲ್ಲಿಂದ ಗಾಂಜಾವನ್ನು ಖರೀದಿಸಿ ಬೆಂಗಳೂರಿಗೆ ತರುತ್ತಿದ್ದರು. ಬಳಿಕ ಬೆಂಗಳೂರು ಹಾಗೂ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಿಗೆ ಪೂರೈಕೆ ಮಾಡುತ್ತಿದ್ದರು.
ಆರೋಪಿಗಳು ರಾಜಸ್ಥಾನ ನೋಂದಣಿ ಸಂಖ್ಯೆಯ ಟ್ರಕ್‌ನಲ್ಲಿ ಗಾಂಜಾ ಇಟ್ಟುಕೊಂಡು ದೇವನಹಳ್ಳಿ, ಹೊಸಕೋಟೆ, ಹಳೇ ಮದ್ರಾಸ್ ರಸ್ತೆ ಮೂಲಕ ಕೆ.ಆರ್.ಪುರ ಕಡೆಗೆ ಬರುತ್ತಿದ್ದರು. ಈ ಬಗ್ಗೆ ಕೆ.ಆರ್.ಪುರಂ ಪೊಲೀಸರಿಗೆ ಮಾಹಿತಿ ಲಭ್ಯವಾದ ನಂತರ ಅವರನ್ನು ಹಿಡಿಯಲು ಯೋಜನೆ ರೂಪಿಸಿದ್ದಾರೆ.
ರೈಲಿನಲ್ಲಿ 45 ಕೇಜಿ ಗಾಂಜಾ ಸಾಗಾಟ: ಇಬ್ಬರ ಬಂಧನ
ಗ್ರಾಹಕರ ಸೋಗಿನಲ್ಲಿ ಸಂಪರ್ಕ:
ಕೆ.ಆರ್.ಪುರಂ ಪೊಲೀಸರು ಗ್ರಾಹಕರ ಸೋಗಿನಲ್ಲಿ ದಂಧೆಕೋರರನ್ನು ಸಂಪರ್ಕ ಮಾಡಿದ್ದರು. ಕೆ.ಆರ್.ಪುರ ಹಳೇ ಮದ್ರಾಸ್ ರಸ್ತೆ ಟಿನ್ ಫ್ಯಾಕ್ಟರಿ ಬಳಿ ಹಣ ತರುವಂತೆ ಆರೋಪಿಗಳು ಹೇಳಿದ್ದರು. ಹಣ ನೋಡಿದ ಬಳಿಕ ಆರೋಪಿಗಳ ವ್ಯವಹಾರ ಕುದುರಿಸಲು ಒಪ್ಪಿದ್ದರು. ಈ ವೇಳೆ ಗ್ರಾಹಕರ ಸೋಗಿನಲ್ಲಿ ನೇರವಾಗಿ ದಂಧೆಕೋರರನ್ನು ಸಂಪರ್ಕಿಸಿದ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ಗಾಂಜಾ ಇಡಲು ಪ್ರತ್ಯೇಕ ಕ್ಯಾಬಿನ್
ಆರಂಭದಲ್ಲಿ ಟ್ರಕ್‌ನಲ್ಲಿ ಶೋಧಿಸಿದಾಗ ಗಾಂಜಾ ಪತ್ತೆ ಆಗಲಿಲ್ಲ. ಇದರಿಂದ ಪೊಲೀಸರು ಅಚ್ಚರಿಗೆ ಒಳಗಾಗಿದ್ದರು. ಇನ್ನೊಮ್ಮೆ ಸೂಕ್ಷ್ಮವಾಗಿ ತಪಾಸಣೆ ನಡೆಸಿದಾಗ ಚಾಲಕನ ಆಸನದ ಹಿಂಭಾಗದಲ್ಲಿ ಪ್ರತ್ಯೇಕ ಕ್ಯಾಬಿನ್ ಪತ್ತೆಯಾಗಿದೆ. ಇದಕ್ಕೆಂದು ಪ್ರತ್ಯೇಕವಾಗಿ ಕ್ಯಾಬಿನ್ ಮಾಡಿಸಿದ್ದ ಆರೋಪಿಗಳು ಅಲ್ಲಿಯೇ 82 ಬಂಡಲ್‌ಗಳಲ್ಲಿ ಗಾಂಜಾ ಬಚ್ಚಿಟ್ಟು ಸಾಗಿಸುತ್ತಿದ್ದರು. ಅದನ್ನು ಪತ್ತೆ ಮಾಡಿ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದರು.
ಆರೋಪಿಗಳು ಬೆಂಗಳೂರನ್ನು ಗುರಿಯಾಗಿಸಿಕೊಂಡಿದ್ದು, ಕೆಲ ವರ್ಷಗಳಿಂದ ದಂಧೆಯಲ್ಲಿ ತೊಡಗಿದ್ದಾರೆ. ಬೆಂಗಳೂರಿನಲ್ಲಿ ತಾತ್ಕಾಲಿಕವಾಗಿ ಮನೆ ಮಾಡಿಕೊಳ್ಳುತ್ತಿದ್ದರು. ಡೀಲರ್‌ಗಳಿಗೆ ಗಾಂಜಾ ಪೂರೈಸಿ ವಾಪಸ್ ರಾಜಸ್ಥಾನಕ್ಕೆ ಹೋಗುತ್ತಿದ್ದರು. ಇದರಿಂದ ಕೋಟ್ಯಂತರ ರುಪಾಯಿ ಹಣ ಸಂಪಾದಿಸುತ್ತಿದ್ದರು. ಈ ಹಣದಲ್ಲಿ ಮೋಜು ಮಾಡುತ್ತಿದ್ದರು. ಇವರ ಆಸ್ತಿ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಇನ್ನು ಗಾಂಜಾ ಸಾಗಣೆ ಹಾಗೂ ಮಾರಾಟ ಜಾಲ ಭೇದಿಸಿದ ಪೊಲೀಸರಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್ ಅವರು .80 ಸಾವಿರ ಬಹುಮಾನ ಘೋಷಿಸಿದ್ದಾರೆ.
ನಕಲಿ ನೋಟು ಬಳಕೆ?
ಆರೋಪಿಗಳು ಏಕಾಏಕಿ ವ್ಯವಹಾರ ಮಾತನಾಡಲು ಸಿದ್ಧರಿರಲಿಲ್ಲ. ಹಣ ತೋರಿಸಿದರೆ ಮಾತ್ರ ನೇರವಾಗಿ ಮಾತನಾಡಲು ಸಾಧ್ಯ ಎಂದು ದಂಧೆಕೋರರು ಹೇಳಿದ್ದರು. ಹೀಗಾಗಿ ಪೊಲೀಸರು ಸಿನಿಮಾ ಚಿತ್ರೀಕರಣಲ್ಲಿ ಬಳಸುವ ನಕಲಿ ನೋಟುಗಳನ್ನು ಸೂಟ್‌ಕೇಸ್‌ನಲ್ಲಿ ತಂದು, ಆರೋಪಿಗಳ ಕೈಗೆ ಇಟ್ಟಿದ್ದರು ಎನ್ನಲಾಗಿದೆ.