Asianet Suvarna News Asianet Suvarna News

ಬೆಂಗಳೂರು: ಪೊಲೀಸ್‌ ಹೆಸರಲ್ಲಿ ಕರೆ ಮಾಡಿ 1.52 ಕೋಟಿ ವಂಚನೆ..!

ಮೈಕೋ ಲೇಔಟ್‌ನ ಎಲ್‌ ಆ್ಯಂಡ್ ಟಿ ಸೌತ್ ಸಿಟಿಯ ನಿವಾಸಿ ದೇಬಾಶಿಸ್ ದಾಸ್ ಮೋಸ ಹೋಗಿದ್ದು, ಇತ್ತೀಚೆಗೆ ದಾಸ್ ಅವರನ್ನು ಫೆಡೆಕ್ಸ್ ಕೋರಿಯರ್ ನೌಕರ ಕಾರ್ತಿಕೇಯ ಹೆಸರಿನಲ್ಲಿ ಪರಿಚಯಿಸಿಕೊಂಡು ಕಿಡಿಗೇಡಿಗಳು ವಂಚಿಸಿದ್ದಾರೆ. ಈ ಸಂಬಂಧ ದಕ್ಷಿಣ ವಿಭಾಗದ ಸಿಇಎನ್‌ ಠಾಣೆಯಲ್ಲಿ ಪ್ರಕರಣ ದಾಖಲು 

1.52 crore Fraud by calling in the name of Police in Bengaluru grg
Author
First Published Nov 20, 2023, 4:14 AM IST

ಬೆಂಗಳೂರು(ನ.20):  ವಿದೇಶಕ್ಕೆ ಡ್ರಗ್ಸ್ ರಫ್ತು ಮಾಡುತ್ತಿರುವುದಾಗಿ ಮುಂಬೈ ಸೈಬರ್ ಕ್ರೈಂ ಪೊಲೀಸರ ಸೋಗಿನಲ್ಲಿ ವ್ಯಕ್ತಿಯೊಬ್ಬರಿಗೆ ಬೆದರಿಸಿ ₹1.52 ಕೋಟಿಯನ್ನು ದುಷ್ಕರ್ಮಿಗಳು ಸುಲಿಗೆ ಮಾಡಿರುವ ಘಟನೆ ನಡೆದಿದೆ.

ಮೈಕೋ ಲೇಔಟ್‌ನ ಎಲ್‌ ಆ್ಯಂಡ್ ಟಿ ಸೌತ್ ಸಿಟಿಯ ನಿವಾಸಿ ದೇಬಾಶಿಸ್ ದಾಸ್ ಮೋಸ ಹೋಗಿದ್ದು, ಇತ್ತೀಚೆಗೆ ದಾಸ್ ಅವರನ್ನು ಫೆಡೆಕ್ಸ್ ಕೋರಿಯರ್ ನೌಕರ ಕಾರ್ತಿಕೇಯ ಹೆಸರಿನಲ್ಲಿ ಪರಿಚಯಿಸಿಕೊಂಡು ಕಿಡಿಗೇಡಿಗಳು ವಂಚಿಸಿದ್ದಾರೆ. ಈ ಸಂಬಂಧ ದಕ್ಷಿಣ ವಿಭಾಗದ ಸಿಇಎನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ನಡಾ, ಇಸ್ರೇಲ್‌ನಿಂದ ನಿಮಗೂ ಕಾಲ್‌ ಬರ್ತಿದ್ಯಾ? ಲಕ್ಷಾಂತರ ರೂ. ಹಣ ಕಳ್ಕೋಬೋದು ಹುಷಾರ್!

ಸೈಬರ್ ಕ್ರೈಂ ಡಿಸಿಪಿ ಹೆಸರು ಬಳಕೆ:

ದಾಸ್‌ ಅವರಿಗೆ ನ.೧೦ರಂದು ಮಾಡಿದ ಅಪರಿಚಿತ, ತನ್ನನ್ನು ಫೆಡೆಕ್ಸ್ ಕೋರಿಯರ್ ಕಂಪನಿಯ ನೌಕರ ಕಾರ್ತಿಕೇಯ ಎಂದು ಪರಿಚಯಸಿಕೊಂಡಿದ್ದ. ಬಳಿಕ ತಾನು ಕಂಪನಿಯ ಮುಂಬೈ ಕಚೇರಿಯಿಂದ ಮಾತನಾಡುತ್ತಿರುವುದಾಗಿ ಹೇಳಿದ ಆತ, ನಿಮ್ಮ ಹೆಸರಿನಲ್ಲಿ ತೈವಾನ್ ದೇಶದ ಝಂಗ್ ಲೀನ್ ಎಂಬಾತನಿಂದ ಪಾರ್ಸೆಲ್ ಬುಕ್ ಆಗಿದೆ. ಆ ಪಾರ್ಸೆಲ್‌ನಲ್ಲಿ 5 ಹಳೆಯ ಪಾರ್ಸ್‌ಪೋರ್ಟ್‌ಗಳು, 6 ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳು, 950 ಗ್ರಾಂ ಎಂಡಿಎಂಎ ಡ್ರಗ್ಸ್ ಇದೆ. ಈ ಬಗ್ಗೆ ಮಾಹಿತಿ ಪಡೆದ ಮುಂಬೈ ಎನ್‌ಸಿಬಿ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿದ್ದಾರೆ. ಮುಂಬೈನ ಅಂಧೇರಿ ಸೈಬರ್ ಕ್ರೈಂ ವಿಭಾಗಕ್ಕೆ ಆನ್‌ಲೈನ್‌ನಲ್ಲಿ ದೂರು ದಾಖಲಿಸುವಂತೆ ದಾಸ್‌ಗೆ ಆತ ಸಲಹೆ ಕೊಟ್ಟಿದ್ದ.
ಈ ಮಾತು ನಂಬಿದ ದಾಸ್‌, ಕೂಡಲೇ ಆರೋಪಿ ನೀಡಿದ ಆ್ಯಪ್ ಬಳಸಿ ವಿಡಿಯೋ ಕಾಲ್ ಮಾಡಿದ್ದಾರೆ. ಆಗ ಕರೆ ಸ್ವೀಕರಿಸಿದ ಮತ್ತೊಬ್ಬ ಅಪರಿಚಿತ, ತನ್ನನ್ನು ಅಂಧೇರಿ ಸೈಬರ್ ಕ್ರೈಂ ಠಾಣೆಯ ಇನ್‌ಪೆಕ್ಟರ್ ಪ್ರದೀಪ್ ಸಾವಂತ್ ಎಂದು ಹೇಳಿಕೊಂಡಿದ್ದ. ಇದಕ್ಕೆ ಪುರಾವೆ ಎನ್ನುವಂತೆ ತನ್ನನ್ನು ನಕಲಿ ಗುರುತಿನ ಪತ್ರವನ್ನು ಸಹ ಆತ ತೋರಿಸಿದ್ದ. ಬಳಿಕ ದಾಸ್‌ ಅವರಿಗೆ ಸಹಾಯ ಮಾಡುವುದಾಗಿ ನಂಬಿಸಿ ಆಧಾರ್ ಕಾರ್ಡ್ ಮತ್ತು ವೈಯಕ್ತಿಕ ದಾಖಲೆಗಳನ್ನು ಕೂಡಾ ಆರೋಪಿ ಪಡೆದುಕೊಂಡಿದ್ದ.

ತರುವಾಯ ನಿಮ್ಮ ಹೆಸರಿನಲ್ಲಿ ಇಸ್ಲಾಮ್ ಮಲ್ಲಿಕ್ ಎಂಬಾತ 3 ಬ್ಯಾಂಕ್ ಖಾತೆಗಳನ್ನು ತೆರೆದು ಹವಾಲ ಹಣ ದಂಧೆ ನಡೆಸುತ್ತಿದ್ದಾನೆ. ಇದರಿಂದ ನಿಮ್ಮ ವಿರುದ್ಧ ಮನಿ ಲ್ಯಾಂಡರಿಂಗ್ ಪ್ರಕರಣ ಸಹ ದಾಖಲಾಗಿದೆ. ಈ ಪ್ರಕರಣದಿಂದ ನಿಮಗೆ ನಿರಪರಾಧಿ ಎನ್ನುವಂತೆ ಪ್ರಮಾಣ ಪತ್ರ ಕೊಡಿಸುತ್ತೇನೆ. ಆದರೆ ನಾನು ಹೇಳಿದಂತೆ ಕೇಳಬೇಕು. ನಿಮ್ಮ ಜತೆಗೆ ಸೈಬರ್ ಕ್ರೈಂ ವಿಭಾಗದ ಡಿಸಿಪಿ ಮಾತನಾಡುತ್ತಾರೆ ಎಂದು ಪ್ರದೀಪ್ ಕರೆ ಸ್ಥಗಿತಗೊಳಿಸಿದ್ದ. ಕೆಲ ಹೊತ್ತಿನ ಬಳಿಕ ಮತ್ತೆ ದಾಸ್ ಅವರಿಗೆ ಮತ್ತೊಬ್ಬ ಆರೋಪಿ ಕರೆ ಮಾಡಿ ತನ್ನನ್ನು ಸೈಬರ್ ಕ್ರೈಂ ವಿಭಾಗದ ಡಿಸಿಪಿ ಎಂದು ಪರಿಚಯಿಸಿಕೊಂಡಿದ್ದ. ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಮತ್ತು ಎಫ್‌ಡಿ ಇದ್ದರೂ ಅದನ್ನು ತಕ್ಷಣ ಡ್ರಾ ಮಾಡಿ ನಾವು ಹೇಳಿದ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿ. ಆರ್‌ಬಿಐ ಮಾರ್ಗಸೂಚಿಯಂತೆ ಕೇಸ್ ಕ್ಲೀಯರ್ ಆದ ಕೆಲ ತಾಸಿನಲ್ಲೇ ನಿಮಗೆ ಹಣ ಮರಳಿಸುತ್ತೇವೆ ಎಂದು ಸೂಚಿಸಿದ್ದ. ಅದರನ್ವಯ ಆರೋಪಿಗಳ ಬ್ಯಾಂಕ್‌ ಖಾತೆಗೆ ₹1.52 ಕೋಟಿಯನ್ನು ದಾಸ್ ವರ್ಗಾಯಿಸಿದ್ದರು. ಈ ಹಣ ಸಂದಾಯವಾದ ಕೂಡಲೇ ನಕಲಿ ಪೊಲೀಸರ ಸಂಪರ್ಕ ಕಡಿತವಾಯಿತು. ಕೊನೆಗೆ ತಾವು ವಂಚನೆಗೆ ಒಳಗಾಗಿರುವ ಸಂಗತಿ ದಾಸ್ ಅರಿವಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

Follow Us:
Download App:
  • android
  • ios