ಆನೇಕಲ್‌ ಬರೋಡಾ ಬ್ಯಾಂಕ್‌ ಬಳಿ ಘಟನೆ,  1.5 ಲಕ್ಷ ಹಣ ದೋಚಿದ ಗ್ಯಾಂಗ್‌

ಆನೇಕಲ್(ನ.30): ಬ್ಯಾಂಕಿನ ಬಳಿ ನಿಲ್ಲಿಸಿದ್ದ ಸ್ಕೂಟರ್‌ನಲ್ಲಿದ್ದ ಹಣವನ್ನು ಕದ್ದೊಯ್ದ ಘಟನೆ ಆನೇಕಲ್‌ ಠಾಣಾ ವ್ಯಾಪ್ತಿಯ ಬರೋಡಾ ಬ್ಯಾಂಕಿನ ಬಳಿ ನಡೆದಿದೆ.

ಆನೇಕಲ್‌ನ ಬರೋಡಾ ಬ್ಯಾಂಕಿಗೆ ಬಂದಿದ್ದ ಸಂಜಯ್‌ಕುಮಾರ್‌ 1.5 ಲಕ್ಷವನ್ನು ವಿತ್‌ಡ್ರಾ ಮಾಡಿಕೊಂಡು ತನ್ನ ಆ್ಯಕ್ಟೀವಾ ಹೊಂಡ ಸೀಟಿನ ಡಿಕ್ಕಿಯಲ್ಲಿಟ್ಟು ಲಾಕ್‌ ಮಾಡಿದ್ದರು. ನಂತರ ಬ್ಯಾಂಕಿಗೆ ಮರಳಿ ಮರೆತಿದ್ದ ವಸ್ತುವನ್ನು ತಂದು ತಮ್ಮ ಆ್ಯಕ್ಟೀವಾ ಬಳಿ ಬಂದಾಗ ಸೀಟ್‌ ಅಸ್ತವ್ಯಸ್ತವಾಗಿದ್ದನ್ನು ಗಮನಿಸಿದ್ದಾರೆ. ಬಳಿಕ ಡಿಕ್ಕಿ ತೆರೆದು ನೋಡಿದಾಗ ಹಣ ಇರಲಿಲ್ಲ. ಕೂಡಲೇ ಆನೇಕಲ್‌ ಠಾಣೆಗೆ ಕರೆ ಮಾಡಿ ದೂರು ನೀಡಿದರು. ಸ್ಥಳಕ್ಕೆ ಬಂದ ಸಿಪಿಐ ಚಂದ್ರಪ್ಪ ಮತ್ತು ಸಿಬ್ಬಂದಿ ಸಮೀಪದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದು, ದೂರು ದಾಖಲಿಸಿಕೊಂಡಿದ್ದು ಪೊಲೀಸರಾದ ಈಶ್ವರ್‌, ವಿನಯ್‌, ಶಂಕರ್‌ ಅವರನ್ನು ಒಳಗೊಂಡ ತಂಡವನ್ನು ರಚಿಸಿದ್ದಾರೆ.

37 ಶಾಲಾ ಕಾಲೇಜುಗಳಲ್ಲಿ ಕಳವು: ಇಬ್ಬರು ಕುಖ್ಯಾತ ಕಳ್ಳರ ಸೆರೆ

ಸಿಸಿಟಿವಿ ಫುಟೇಜ್‌ ಪರಿಶೀಲನೆಯಿಂದ ದ್ವಿಚಕ್ರ ವಾಹನದಲ್ಲಿ ಮೂವರು ಬಂದಿದ್ದು, ಒಬ್ಬ ಹೆಲ್ಮಟ್‌ ಧರಿಸಿದ್ದಾನೆ. ಉಳಿದ ಇಬ್ಬರು ರಸ್ತೆಯ ಬಳಿ ಕೆಲ ಕಾಲ ನಿಂತು ಬಂದು ಹೋಗುವ ಜನರನ್ನು ಗಮನಿಸಿ ಹಣ ಇದ್ದ ಆ್ಯಕ್ಟೀವಾ ಬಳಿ ಬಂದಿದ್ದಾರೆ. ಸಮೀಪದ ಸಿಸಿ ಟಿ ಕ್ಯಾಮೆರಾಗೆ ರೆಕಾರ್ಡ್‌ ಆಗದಂತೆ ಮಾರುತಿ ವ್ಯಾನ್‌ನಲ್ಲಿರುವ ಇಬ್ಬರು ಕಾರನ್ನು ಅಡ್ಡ ನಿಲ್ಲಿಸಿರುವುದೂ ಕಾಣಿಸುತ್ತದೆ. ಆ ಒಂದು ನಿಮಿಷದಲ್ಲಿ ಸೀಟನ್ನು ಮೇಲಕ್ಕೆ ಸರಿಸಿ ಹಣವನ್ನು ಕಳವು ಮಾಡಿ ತೆರಳಿದ್ದಾರೆ.