ಐಸಿಸಿ ಏಕದಿನ ವಿಶ್ವಕಪ್ ಪ್ರಧಾನ ಸುತ್ತಿಗೆ ಮತ್ತಷ್ಟು ಹತ್ತಿರವಾದ ಜಿಂಬಾಬ್ವೆ..!
* ವಿಶ್ವಕಪ್ ಅರ್ಹತಾಸುತ್ತಿನ ಸೂಪರ್ ಸಿಕ್ಸ್ ಹಂತದಲ್ಲಿ ಜಿಂಬಾಬ್ವೆ ಭರ್ಜರಿ ಜಯ
* ಒಮಾನ್ ಎದುರು 14 ರನ್ ರೋಚಕ ಜಯ ಸಾಧಿಸಿದ ಜಿಂಬಾಬ್ವೆ ತಂಡ
* ತಂಡಕ್ಕೆ ಆಸರೆಯಾದ ನಾಯಕ ಶಾನ್ ವಿಲಿಯಮ್ಸ್ ಭರ್ಜರಿ ಶತಕ
ಬುಲವಾಯೋ(ಜೂ.30): ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ಗೆ ಜಿಂಬಾಬ್ವೆ ತಂಡ ಆಗಮಿಸುವುದು ಬಹುತೇಕ ಖಚಿತವಾಗಿದೆ. ಅರ್ಹತಾ ಟೂರ್ನಿಯ ಗುಂಪು ಹಂತದಲ್ಲಿ ಆಡಿದ್ದ ನಾಲ್ಕೂ ಪಂದ್ಯಗಳನ್ನು ಗೆದ್ದಿದ್ದ ಜಿಂಬಾಬ್ವೆ, ಸೂಪರ್-6 ಹಂತದಲ್ಲೂ ಗೆಲುವಿನ ಆರಂಭ ಪಡೆದಿದೆ. ಗುರುವಾರ ನಡೆದ ಒಮಾನ್ ವಿರುದ್ಧದ ಪಂದ್ಯದಲ್ಲಿ ಜಿಂಬಾಬ್ವೆ 14 ರನ್ ರೋಚಕ ಗೆಲುವು ಸಾಧಿಸಿತು.
ಮೊದಲು ಬ್ಯಾಟ್ ಮಾಡಿದ ಆತಿಥೇಯ ತಂಡ, ನಾಯಕ ಶಾನ್ ವಿಲಿಯಮ್ಸ್(142)ರ ಶತಕದ ನೆರವಿನಿಂದ 7 ವಿಕೆಟ್‌ಗೆ 332 ರನ್ ಗಳಿಸಿತು. ವಿಲಿಯಮ್ಸ್‌ಗಿದು ಈ ಟೂರ್ನಿಯಲ್ಲಿ 3ನೇ ಶತಕ. ಬೃಹತ್ ಗುರಿ ಬೆನ್ನತ್ತಿದ ಒಮಾನ್ ಕಶ್ಯಪ್ ಪ್ರಜಾಪತಿ(103) ಅವರ ಶತಕದ ಹೊರತಾಗಿಯೂ 9 ವಿಕೆಟ್‌ಗೆ 318 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಶುಕ್ರವಾರ ನೆದರ್‌ಲೆಂಡ್ಸ್-ಶ್ರೀಲಂಕಾ ಸೆಣಸಲಿವೆ.
ಸ್ಕೋರ್:
ಜಿಂಬಾಬ್ವೆ 50 ಓವರಲ್ಲಿ 332/7(ವಿಲಿಯಮ್ಸ್ 142, ಜೊಂಗ್ವೆ 43*, ಫಯಾಜ್ 4-79)
ಒಮಾನ್ 50 ಓವರಲ್ಲಿ 318/9(ಕಶ್ಯಪ್ 103, ಅಯಾನ್ 47, ಮುಜರ್‌ಬಾನಿ 3-57)
ದುಲೀಪ್ ಟ್ರೋಫಿ: ಉತ್ತರವಲಯ ಬೃಹತ್ ಮೊತ್ತ
ಬೆಂಗಳೂರು: ಈಶಾನ್ಯ ವಲಯದ ವಿರುದ್ಧ ನಡೆಯುತ್ತಿರುವ ದುಲೀಪ್ ಟ್ರೋಫಿ ಕ್ವಾರ್ಟರ್ ಫೈನಲ್‌ನಲ್ಲಿ ಉತ್ತರ ವಲಯ ಮೊದಲ ಇನ್ನಿಂಗ್ಸಲ್ಲಿ 8 ವಿಕೆಟ್‌ಗೆ 540 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ನಿಶಾಂತ್ ಸಿಂಧು(150), ಹರ್ಷಿತ್ ರಾಣಾ (86 ಎಸೆತದಲ್ಲಿ 122) ಶತಕ ಸಿಡಿಸಿದರು. 9ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದು ಹರ್ಷಿತ್ ಶತಕ ಸಿಡಿಸಿದ್ದು ಗಮನಾರ್ಹ. ಮೊದಲ ಇನ್ನಿಂಗ್ಸ್ ಆರಂಭಿಸಿರುವ ಈಶಾನ್ಯ ವಲಯ 2ನೇ ದಿನಕ್ಕೆ 3 ವಿಕೆಟ್‌ಗೆ 65 ರನ್ ಗಳಿಸಿದೆ.
ಮರುಜನ್ಮ ಪಡೆದು 5 ತಿಂಗಳಾಗಿದೆ: ರಿಷಭ್ ಪಂತ್ ಭಾವನಾತ್ಮಕ ಸಂದೇಶ!
ಪೂರ್ವ ವಲಯ ವಿರುದ್ಧ ಕೇಂದ್ರಕ್ಕೆ ಮುನ್ನಡೆ
ಬೆಂಗಳೂರು: ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ಪೂರ್ವ ವಲಯ ವಿರುದ್ಧ ಕೇಂದ್ರ ವಲಯ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ. ಮೊದಲ ಇನ್ನಿಂಗ್ಸಲ್ಲಿ 182ಕ್ಕೆ ಆಲೌಟ್ ಆಗಿದ್ದ ಕೇಂದ್ರ ವಲಯ, ಪೂರ್ವ ವಲಯವನ್ನು 122 ರನ್‌ಗೆ ಆಲೌಟ್ ಮಾಡಿ 60 ರನ್ ಮುನ್ನಡೆ ಪಡೆಯಿತು. ಬಳಿಕ 2ನೇ ಇನ್ನಿಂಗ್ಸ್ ಆರಂಭಿಸಿ 2ನೇ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 64 ರನ್ ಗಳಿಸಿದ್ದು, ಒಟ್ಟು 124 ರನ್ ಮುನ್ನಡೆ ಗಳಿಸಿದೆ.
ಬಿಸಿಸಿಐ ಆಯ್ಕೆಗಾರರಾಗಿ ಅಗರ್ಕರ್ ನೇಮಕ ಖಚಿತ?
ನವದೆಹಲಿ: ಭಾರತ ಹಿರಿಯ ಪುರುಷರ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ನೇಮಕಗೊಳ್ಳುವುದು ಬಹುತೇಕ ಖಚಿತವಾಗಿದೆ. ಅಗರ್ಕರ್ ಗುರುವಾರ ಐಪಿಎಲ್‌ನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದು, ಜು.1-2ರಂದು ನಡೆಯಲಿರುವ ಕ್ರಿಕೆಟ್ ಸಲಹಾ ಸಮಿತಿಯ ಸಂದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಇದೇ ವೇಳೆ 1 ಕೋಟಿ ರು. ಇರುವ ಪ್ರಧಾನ ಆಯ್ಕೆಗಾರನ ವೇತನವನ್ನು ಹೆಚ್ಚಿಸಲು ಬಿಸಿಸಿಐ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.