ಎರಡನೇ ಟೆಸ್ಟ್ ಪಂದ್ಯದ ವೇಳೆ ಯಶಸ್ವಿ ಜೈಸ್ವಾಲ್ ದೃಷ್ಟಿಹೀನ ಅಭಿಮಾನಿ ರವಿಯನ್ನು ಭೇಟಿಯಾಗಿ ಅವರ ಕನಸನ್ನು ನನಸು ಮಾಡಿದ್ದಾರೆ. ಜೈಸ್ವಾಲ್ ಅವರ ಈ ಮಾನವೀಯ ನಡೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಭಾವುಕ ಕ್ಷಣ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬರ್ಮಿಂಗ್‌ಹ್ಯಾಮ್: ಭಾರತ ತಂಡವು ಎಜ್‌ಬಾಸ್ಟನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ಎದುರು ಎರಡನೇ ಟೆಸ್ಟ್ ಪಂದ್ಯವನ್ನಾಡುತ್ತಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಟೀಂ ಇಂಡಿಯಾ, ಇದೀಗ ಎರಡನೇ ಟೆಸ್ಟ್ ಪಂದ್ಯದಲ್ಲಿ ಸಂಪೂರ್ಣ ಬಿಗಿ ಹಿಡಿತ ಸಾಧಿಸಿದೆ. ಇದೀಗ ಕೊನೆಯ ದಿನದಾಟದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಹೀಗಿರುವಾಗಲೇ ಟೀಂ ಇಂಡಿಯಾ ಎಡಗೈ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ದೃಷ್ಟಿಹೀನ ಅಭಿಮಾನಿಯನ್ನು ಸ್ಟೇಡಿಯಂನಲ್ಲಿ ಭೇಟಿಯಾಗುವ ಮೂಲಕ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಎರಡನೇ ಟೆಸ್ಟ್ ಪಂದ್ಯ ಗೆಲ್ಲಲು ಟೀಂ ಇಂಡಿಯಾ ಇಂಗ್ಲೆಂಡ್‌ಗೆ ಬರೋಬ್ಬರಿ 608 ರನ್‌ಗಳ ಕಠಿಣ ಗುರಿ ನೀಡಿದೆ. ಇನ್ನು ಗುರಿ ಬೆನ್ನತ್ತಿರುವ ಇಂಗ್ಲೆಂಡ್, ನಾಲ್ಕನೇ ದಿನದಾಟದಂತ್ಯಕ್ಕೆ ಮೂರು ವಿಕೆಟ್ ಕಳೆದುಕೊಂಡು 72 ರನ್ ಗಳಿಸಿದೆ. ಕೊನೆಯ ದಿನ ಗೆಲ್ಲಲು ಬೆನ್ ಸ್ಟೋಕ್ಸ್ ಪಡೆಗೆ ಇನ್ನೂ 536 ರನ್‌ಗಳ ಅಗತ್ಯವಿದೆ. ಇನ್ನೊಂದೆಡೆ ಬರ್ಮಿಂಗ್‌ಹ್ಯಾಮ್‌ನಲ್ಲಿ ಚೊಚ್ಚಲ ಟೆಸ್ಟ್ ಗೆಲ್ಲಲು ಭಾರತಕ್ಕೆ ಕೊನೆಯ ದಿನ ಏಳು ವಿಕೆಟ್ ಕಬಳಿಸಬೇಕಿದೆ. ಇನ್ನು ಇದೆಲ್ಲದರ ನಡುವೆ ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರ ಒಂದು ನಡೆ ಕ್ರಿಕೆಟ್ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಹೌದು, ಕ್ರಿಕೆಟ್‌ನಲ್ಲಿ ನೂರಾರು ದಾಖಲೆಗಳು ಸೃಷ್ಟಿಯಾಗುತ್ತಲೇ ಇರುತ್ತವೆ, ಆದರೆ ಅದಕ್ಕೂ ಮೀರಿ ಮೈದಾನದಲ್ಲಿ ಹಾಗೂ ಮೈದಾನದಾಚೆಗೆ ನಡೆಯುವ ಕೆಲವು ಘಟನೆಗಳು ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದುಬಿಡುತ್ತವೆ. ಇದೀಗ ಎರಡನೇ ಟೆಸ್ಟ್‌ನ ನಾಲ್ಕನೇ ದಿನದಾಟದ ಅಂತ್ಯದ ವೇಳೆಗೆ ಯಶಸ್ವಿ ಜೈಸ್ವಾಲ್, ದೃಷ್ಟಿಹೀನ ರವಿ ಎನ್ನುವ ಕ್ರಿಕೆಟ್ ಅಭಿಮಾನಿಯನ್ನು ಭೇಟಿಯಾಗಿ ಮಾತುಕತೆ ನಡೆಸಿ ಗಮನ ಸೆಳೆದಿದ್ದಾರೆ.
ರವಿ ಕನಸು ನನಸು ಮಾಡಿದ ಜೈಸ್ವಾಲ್:
ಕಣ್ಣು ಕಾಣದಿದ್ದರೂ ರವಿಗೆ ಕ್ರಿಕೆಟ್ ಅಂದರೆ ಪಂಚಪ್ರಾಣ. ಕ್ರಿಕೆಟ್ ಅನ್ನು ಇನ್ನಿಲ್ಲದಂತೆ ಫಾಲೋ ಮಾಡುವ ಅವರು ತಮ್ಮ ಕ್ರಿಕೆಟ್ ಹೀರೋ ಯಶಸ್ವಿ ಜೈಸ್ವಾಲ್ ಅವರನ್ನು ಭೇಟಿ ಮಾಡಲು ಹಾತೊರೆಯುತ್ತಿದ್ದರು. ಯಶಸ್ವಿ ಜೈಸ್ವಾಲ್ ಅವರ ನಿರ್ಭೀತ ಬ್ಯಾಟಿಂಗ್ ಸ್ಟೈಲ್ ಲಕ್ಷಾಂತರ ಮಂದಿಯ ಮನಗೆದ್ದಿದೆ ಎಂದರೆ ಅತಿಶಯೋಕ್ತಿಯಲ್ಲ.
ಇನ್ನು ಹೆಡಿಂಗ್ಲೆ ಟೆಸ್ಟ್‌ನಲ್ಲಿ ಯಶಸ್ವಿ ಜೈಸ್ವಾಲ್ ಅವರನ್ನು ಭೇಟಿ ಮಾಡಬೇಕು ಎಂದು ಬಯಸಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಶನಿವಾರ ರವಿ ತಮ್ಮ ಡ್ರೀಮ್ ಹೀರೋ ಜೈಸ್ವಾಲ್ ಅವರನ್ನು ಭೇಟಿಯಾಗುವ ಮೂಲಕ ತಮ್ಮ ಕನಸು ನನಸು ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.
ಇನ್ನು ಬಿಸಿಸಿಐ ಈ ಸುಂದರ ಕ್ಷಣಗಳನ್ನು ಸೆರೆಹಿಡಿದಿದ್ದು, ಯಶಸ್ವಿ ಜೈಸ್ವಾಲ್ ಅವರ ಮಾನವೀಯತೆ ಹಾಗೂ ಹೃದಯ ಶ್ರೀಮಂತಿಕೆ ಗಮನ ಸೆಳೆದಿದೆ. ಹೆಲೋ ರವಿ, ಹೇಗಿದ್ದೀರಾ? ನಾನು ಯಶಸ್ವಿ, ನಿಮ್ಮನ್ನು ಭೇಟಿಯಾಗಿದ್ದು ಖುಷಿಯಾಯಿತು. ನಿಮ್ಮನ್ನು ಭೇಟಿಯಾಗಲು ತುಂಬಾ ಉತ್ಸುಕನಾಗಿದ್ದೆ. ಯಾಕೆಂದರೆ ನೀವು ಕ್ರಿಕೆಟ್‌ನ ದೊಡ್ಡ ಅಭಿಮಾನಿ, ಆದರೆ ನಿಮ್ಮ ಭೇಟಿಯಾಗುವುದಕ್ಕೆ ಏನೋ ಒಂದು ರೀತಿ ನರ್ವಸ್ ಅನುಭವ ಆಗುತ್ತಿತ್ತು ಎಂದು ಜೈಸ್ವಾಲ್, ರವಿ ಜತೆ ಮಾತನಾಡಿದ್ದಾರೆ.
ಇದಾದ ಬಳಿಕ ಯಶಸ್ವಿ ಜೈಸ್ವಾಲ್ ತಮ್ಮದೇ ಹಸ್ತಾಕ್ಷರ ಹೊಂದಿದ ಬ್ಯಾಟ್ ಅನ್ನು ಗಿಫ್ಟ್ ಆಗಿ ನೀಡಿದರು. ಇನ್ನು ಜೈಸ್ವಾಲ್ ಮಾತು ಕೇಳಿಸಿಕೊಂಡ ರವಿ ಕೂಡಾ ಪ್ರತಿಕ್ರಿಯೆ ನೀಡಿದರು. 'ನಿಮ್ಮನ್ನು ಭೇಟಿಯಾಗಿದ್ದು ನನಗೂ ತುಂಬಾ ಖುಷಿಯಾಯಿತು, ಥ್ಯಾಂಕ್ಯೂ. ನೀವೊಬ್ಬ ಅದ್ಭುತ ಕ್ರಿಕೆಟಿಗ, ನಿಮ್ಮ ಬ್ಯಾಟ್ ಪಡೆಯಲು ಉತ್ಸುಕನಾಗಿದ್ದೇನೆ. ನನ್ನ ಪ್ರಕಾರ ನೀವೇ ಭಾರತದ ಭವಿಷ್ಯದ ಕ್ರಿಕೆಟಿಗ. ನಾನು ಕ್ರಿಕೆಟ್ ಇಷ್ಟಪಡುತ್ತೇನೆ ಹಾಗೂ ನಿಮ್ಮ ಬ್ಯಾಟಿಂಗ್ ನೋಡಲು ಇಷ್ಟಪಡುತ್ತೇನೆ. ನೀವು ಶತಕ ಸಿಡಿಸುವ ರೀತಿ ಕೂಡಾ ಅದ್ಭುತವಾಗಿರುತ್ತದೆ ಎಂದು ರವಿ, ಜೈಸ್ವಾಲ್ ಜತೆ ಮಾತನಾಡಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


