ಅಂಡರ್ 19 ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಭರ್ಜರಿ ಪ್ರದರ್ಶನಯುಎಇ ಎದುರು 122 ರನ್‌ಗಳ ಗೆಲುವು ದಾಖಲಿಸಿದ ಶಫಾಲಿ ವರ್ಮಾ ಪಡೆ'ಡಿ' ಗುಂಪಿನಿಂದ ಅಗ್ರಸ್ಥಾನ ಪಡೆದು, ಸೂಪರ್ ಸಿಕ್ಸ್ ಹಂತ ಪ್ರವೇಶಿಸಿದ ಭಾರತ

ಬೆನೊನಿ(ಡಿ.17): ಚೊಚ್ಚಲ ಆವೃತ್ತಿಯ ಅಂಡರ್ 19 ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದ ಶಫಾಲಿ ವರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡವು ಸೂಪರ್ 6 ಹಂತಕ್ಕೆ ಲಗ್ಗೆಯಿಟ್ಟಿದೆ. ಯುಎಇ ವಿರುದ್ದ ಸೋಮವಾರ ನಡೆದ ಪಂದ್ಯದಲ್ಲಿ ಭಾರತ ತಂಡವು 122 ರನ್‌ಗಳ ಬೃಹತ್ ಅಂತರದ ಗೆಲುವು ದಾಖಲಿಸಿದೆ.

ಮೊದಲು ಬ್ಯಾಟ್ ಮಾಡಿದ ಭಾರತ ತಂಡಕ್ಕೆ ನಾಯಕಿ ಶಫಾಲಿ ವರ್ಮಾ ಹಾಗೂ ಮತ್ತೋರ್ವ ಆರಂಭಿಕ ಬ್ಯಾಟರ್ ಶ್ವೇತಾ ಶೆರಾವತ್ ಸಿಡಿಲಬ್ಬರದ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಕೇವಲ 8.3 ಓವರ್‌ಗಳಲ್ಲಿ 111 ರನ್‌ಗಳ ಜತೆಯಾಟ ಒದಗಿಸಿಕೊಟ್ಟಿತು. ಆರಂಭದಿಂದಲೇ ಸ್ಪೋಟಕ ಬ್ಯಾಟಿಂಗ್ ನಡೆಸಿದ ಶಫಾಲಿ ವರ್ಮಾ ಕೇವಲ 34 ಎಸೆತಗಳಲ್ಲಿ 12 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 78 ರನ್ ಬಾರಿಸಿ ಇಂದುಜಾ ನಂದಕುಮಾರ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಶಫಾಲಿಗೆ ಉತ್ತಮ ಸಾಥ್ ನೀಡಿದ ಶ್ವೇತಾ ಶೆರಾವತ್, 49 ಎಸೆತಗಳಲ್ಲಿ 10 ಬೌಂಡರಿ ಸಹಿತ 74 ರನ್ ಗಳಿಸಿ ಅಜೇಯರಾಗುಳಿದರು.

ಇನ್ನು ಭಾರತ ತಂಡದ ವಿಕೆಟ್ ಕೀಪರ್ ರಿಚಾ ಘೋಷ್ ಕೂಡಾ ಮೈಚಳಿ ಬಿಟ್ಟು ಬ್ಯಾಟ್ ಬೀಸುವ ಮೂಲಕ ತಂಡ್ಕೆ ಆಸರೆಯಾದರು. ರಿಚಾ ಘೋಷ್ ಕೇವಲ 29 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 49 ರನ್ ಗಳಿಸಿ ಕೇವಲ ಒಂದು ರನ್ ಅಂತರದಲ್ಲಿ ಅರ್ಧಶತಕ ಸಿಡಿಸುವ ಅವಕಾಶ ಕೈಚೆಲ್ಲಿದರು. ಯುಎಇ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಭಾರತ, ನಿಗದಿತ 20 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ ಕಳೆದುಕೊಂಡು 219 ರನ್ ಕಲೆಹಾಕಿತು. ಇದರೊಂದಿಗೆ ಅಂಡರ್ 19 ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ 200+ ರನ್ ಬಾರಿಸಿದ ಮೊದಲ ತಂಡ ಎನ್ನುವ ಹಿರಿಮೆಗೆ ಪಾತ್ರವಾಯಿತು.

Scroll to load tweet…

ಇನ್ನು ಸವಾಲಿನ ಗುರಿ ಬೆನ್ನತ್ತಿದ ಯುಎಇ ತಂಡವು, ಭಾರತೀಯ ಬೌಲರ್‌ಗಳ ದಾಳಿಗೆ ರನ್‌ ಗಳಿಸಲು ಪರದಾಡಿತು. ಭಾರತ ತಂಡದ ಎದುರು ಯುಎಇ ತಂಡವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಕೇವಲ 97 ರನ್‌ ಗಳಿಸಲಷ್ಟೇ ಶಕ್ತವಾಯಿತು. ಈ ಗೆಲುವಿನೊಂದಿಗೆ 'ಡಿ' ಗುಂಪಿನಲ್ಲಿ ಅಗ್ರಸ್ಥಾನ ಪಡೆಯಿತು.

ಹೈದ್ರಾಬಾದ್‌ ತಲುಪಿದ ಭಾರತೀಯ ಆಟಗಾರರು

ಹೈದರಾಬಾದ್‌: ಜನವರಿ 18ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್‌ ವಿರುದ್ಧ ಏಕದಿನ ಸರಣಿಯ ಮೊದಲ ಪಂದ್ಯವಾಡಲು ಸೋಮವಾರ ಭಾರತ ತಂಡದ ಆಟಗಾರರು ಹೈದರಾಬಾದ್‌ ತಲುಪಿದರು. 

ತಿರುವನಂತಪುರಂನಲ್ಲಿ ಶ್ರೀಲಂಕಾ ವಿರುದ್ಧ ಕೊನೆ ಏಕದಿನ ಪಂದ್ಯವಾಡಿದ ರೋಹಿತ್‌ ಶರ್ಮಾ ಬಳಗ ಸೋಮವಾರ ಬೆಳಗ್ಗೆ ಅಲ್ಲಿಂದ ಹೈದರಾಬಾದ್‌ ತಲುಪಿತು. ಮಂಗಳವಾರ ಆಟಗಾರರು ಅಭ್ಯಾಸ ನಡೆಸಲಿದ್ದಾರೆ. ನ್ಯೂಜಿಲೆಂಡ್‌ ಆಟಗಾರರು 2 ದಿನಗಳ ಮೊದಲೇ ಹೈದರಾಬಾದ್‌ ತಲುಪಿದ್ದು, ಅಭ್ಯಾಸ ನಿರತರಾಗಿದ್ದಾರೆ.

ತಮ್ಮ ಯಶಸ್ಸಲ್ಲಿ ಥ್ರೋಡೌನ್‌ ತಜ್ಞರ ಕೊಡುಗೆ: ವಿರಾಟ್‌ ಕೊಹ್ಲಿ

ತಿರುವನಂತಪುರಂ: ತಮ್ಮ ಬ್ಯಾಟಿಂಗ್‌ನಲ್ಲಿ ದೊಡ್ಡ ಬದಲಾವಣೆಗೆ ತಂಡದ ಥ್ರೋಡೌನ್‌ ತಜ್ಞರಾದ ಕರ್ನಾಟಕದ ರಾಘವೇಂದ್ರ, ಕೋಲ್ಕತಾದ ದಯಾನಂದ್‌, ಶ್ರೀಲಂಕಾದ ನುವಾನ್‌ ಸೆನೆವಿರತ್ನೆ ಕೊಡುಗೆ ಪ್ರಮುಖವಾದದ್ದು ಎಂದು ವಿರಾಟ್‌ ಕೊಹ್ಲಿ ಕೊಂಡಾಡಿದ್ದಾರೆ.

IND vs SL ಸಿರಾಜ್ ದಾಳಿಗೆ ಲಂಕಾ 73 ರನ್‌ಗೆ ಆಲೌಟ್, 3-0 ಅಂತರದಲ್ಲಿ ಸರಣಿ ಕ್ಲೀನ್ ಸ್ವೀಪ್!

ಈ ಬಗ್ಗೆ ಶ್ರೀಲಂಕಾ ವಿರುದ್ಧದ 3ನೇ ಏಕದಿನದ ಬಳಿಕ ಮಾತನಾಡಿದ ಕೊಹ್ಲಿ, ‘ಪ್ರತಿ ದಿನವೂ ಈ ಮೂವರು ವಿಶ್ವ ದರ್ಜೆಯ ತರಬೇತಿ ನೀಡುತ್ತಾರೆ. 145-150 ಕಿ.ಮೀ. ವೇಗದಲ್ಲಿ ಚೆಂಡನ್ನು ಎಸೆಯುವ ಮೂಲಕ ನಿಜವಾದ ಸವಾಲೆಸೆಯುತ್ತಾರೆ. ಇಂತಹ ಅಭ್ಯಾಸವೇ ನನ್ನ ಕ್ರಿಕೆಟ್‌ ಬದುಕಿನಲ್ಲಿ ಪ್ರಮುಖ ಪಾತ್ರವಹಿಸಿದೆ. ನೆಟ್ಸ್‌ನಲ್ಲಿ ಈ ಮೂವರ ಕೊಡುಗೆ ಅದ್ಭುತವಾದದ್ದು. ನಮ್ಮ ಯಶಸ್ಸಿನ ಹಿಂದೆ ಅವರ ಪಾತ್ರ ತುಂಬಾ ದೊಡ್ಡದು’ ಎಂದು ಶ್ಲಾಘಿಸಿದ್ದಾರೆ.