ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆದ ನ್ಯೂಜಿಲೆಂಡ್ ತಂಡವು ಬರೋಬ್ಬರಿ 19.6 ಕೋಟಿ ರುಪಾಯಿ ತಮ್ಮದಾಗಿಸಿಕೊಂಡಿದೆ.
ದುಬೈ: ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೋಫಿ ಡಿವೈನ್ ನೇತೃತ್ವದ ನ್ಯೂಜಿಲೆಂಡ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಇಲ್ಲಿನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು.
ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 158 ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು 9 ವಿಕೆಟ್ ಕಳೆದುಕೊಂಡು 126 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ನ್ಯೂಜಿಲೆಂಡ್ ತಂಡವು 32 ರನ್ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಚೊಚ್ಚಲ ಬಾರಿಗೆ ಟಿ20 ವಿಶ್ವಕಪ್ ಜಯಿಸುವಲ್ಲಿ ಯಶಸ್ವಿಯಾಯಿತು.
ಮಹಿಳಾ ಚುಟುಕು ವಿಶ್ವಕಪ್: ಹರಿಣಗಳನ್ನು ಮಣಿಸಿದ ಕಿವೀಸ್‌ಗೆ ಚೊಚ್ಚಲ ಟಿ20 ವಿಶ್ವಕಪ್ ಕಿರೀಟ!
ಇದೀಗ ಸೋಫಿ ಡಿವೈನ್ ನೇತೃತ್ವದ ನ್ಯೂಜಿಲೆಂಡ್ ತಂಡವು ಐಸಿಸಿ ಟಿ20 ವಿಶ್ವಕಪ್ ಗೆಲ್ಲುವುದರ ಜತೆಗೆ ದೊಡ್ಡ ಮೊತ್ತದ ನಗದು ಬಹುಮಾನವನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ವರ್ಷಾರಂಭದಲ್ಲಿಯೇ ಐಸಿಸಿ ಈ ಬಾರಿಯ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಬಹುಮಾನದ ಮೊತ್ತವನ್ನು 134% ಹೆಚ್ಚಳ ಮಾಡಿರುವುದಾಗಿ ಘೋಷಿಸಿತ್ತು. ಹೀಗಾಗಿ ಚಾಂಪಿಯನ್ ಪಟ್ಟ ಅಲಂಕರಿಸಿದ ನ್ಯೂಜಿಲೆಂಡ್ ತಂಡವು ಬರೋಬ್ಬರಿ 2.34 ಮಿಲಿಯನ್ ಡಾಲರ್(19.6 ಕೋಟಿ ರುಪಾಯಿ) ನಗದು ಬಹುಮಾನವನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನು ಫೈನಲ್ ಪ್ರವೇಶಿಸಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡವು 1.17 ಮಿಲಿಯನ್ ಡಾಲರ್(9.8 ಕೋಟಿ ರುಪಾಯಿ) ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿದೆ.
ಐಪಿಎಲ್ ಮೆಗಾ ಹರಾಜಿಗೆ ಡೇಟ್ ಫಿಕ್ಸ್; ಮತ್ತೊಮ್ಮೆ ಭಾರತದಾಚೆ ಐಪಿಎಲ್ ಆಟಗಾರರ ಹರಾಜು!
ಇನ್ನುಳಿದಂತೆ ಸೆಮಿಫೈನಲ್ ಪ್ರವೇಶಿಸಿದ ಮತ್ತೆರಡು ತಂಡಗಳಾದ ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ತಂಡಗಳು ತಲಾ 6,75,000 ಯುಎಸ್ ಡಾಲರ್(5.7 ಕೋಟಿ ರುಪಾಯಿ) ನಗದು ಬಹುಮಾನ ಜೇಬಿಗಿಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ಇನ್ನು ಗ್ರೂಪ್ ಹಂತದಲ್ಲೇ ಹೊರಬಿದ್ದ ತಂಡಗಳ ನಗದು ಬಹುಮಾನದ ಸರಿಯಾದ ಮೊತ್ತವನ್ನು ಐಸಿಸಿ ಇನ್ನು ಅಧಿಕೃತವಾಗಿ ಘೋಷಿಸಿಲ್ಲ. ಹೀಗಿದ್ದೂ4 ಪಂದ್ಯಗಳ ಪೈಕಿ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಭಾರತ ತಂಡವು 2,70,000 ಯುಎಸ್ ಡಾಲರ್(2.25 ಕೋಟಿ ರುಪಾಯಿ) ಬಹುಮಾನ ತನ್ನದಾಗಿಸಿಕೊಳ್ಳುವುದು ಬಹುತೇಕ ಖಚಿತ ಎನಿಸಿದೆ.
