2 ರನ್‌ಗೆ 5 ಬಲಿ ಪಡೆದ ಶ್ರೇಯಾಂಕ ಪಾಟೀಲ್; ಭಾರತಕ್ಕೆ ಗೆಲುವು ತಂದಿತ್ತ ಕನ್ನಡತಿ..!
5 ವಿಕೆಟ್ ಕಿತ್ತ ಶ್ರೇಯಾಂಕ: ಭಾರತ ‘ಎ’ ತಂಡಕ್ಕೆ ಜಯ
‘ಎ’ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದ ಭಾರತ
ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಿಂಚಿದ್ದ ಶ್ರೇಯಾಂಕ
ಮೊಂಗ್ಕಾಕ್(ಜೂ.14): ಭಾರತದ ಯುವ ತಾರೆ, ಕರ್ನಾಟಕದ ಶ್ರೇಯಾಂಕ ಪಾಟೀಲ್ರ ಮಾರಕ ಬೌಲಿಂಗ್ ನೆರವಿನಿಂದ ಉದಯೋನ್ಮುಖ ಮಹಿಳೆಯರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆತಿಥೇಯ ಹಾಂಕಾಂಗ್ ವಿರುದ್ಧ ಭಾರತ ‘ಎ’ 9 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಭಾರತ ‘ಎ’ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿತು.
ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹಾಂಕಾಂಗ್ 14 ಓವರ್ಗಳಲ್ಲಿ ಕೇವಲ 34 ರನ್‌ಗೆ ಆಲೌಟಾಯಿತು. 20 ವರ್ಷದ ಶ್ರೇಯಾಂಕ 3 ಓವರ್ಗಳಲ್ಲಿ ಕೇವಲ 2 ರನ್ ನೀಡಿ 5 ವಿಕೆಟ್ ಪಡೆದರೆ, ಮನ್ನತ್ ಕಶ್ಯಪ್, ಪಾರ್ಶವಿ ಚೋಪ್ರಾ ತಲಾ 2 ವಿಕೆಟ್ ಕಬಳಿಸಿದರು. ಸುಲಭ ಗುರಿಯನ್ನು ಭಾರತ ಕೇವಲ 5.2 ಓವರ್ಗಳಲ್ಲೇ ಬೆನ್ನತ್ತಿತು. ಭಾರತ ತನ್ನ ಮುಂದಿನ ಪಂದ್ಯದಲ್ಲಿ ಗುರುವಾರ ನೇಪಾಳ ವಿರುದ್ಧ ಆಡಲಿದೆ.
20 ವರ್ಷದ ಕನ್ನಡತಿ ಶ್ರೇಯಾಂಕ ಪಾಟೀಲ್, ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿ ಗಮನ ಸೆಳೆದಿದ್ದರು. ಭಾರತ ಪರ ಅತ್ಯಂತ ಶಿಸ್ತುಬದ್ದ ದಾಳಿ ನಡೆಸಿದ ಶ್ರೇಯಾಂಕ ಪಾಟೀಲ್ 2 ರನ್ ನೀಡಿ 5 ವಿಕೆಟ್ ಪಡೆದರೆ, ಮನ್ನತ್ ಕಶ್ಯಪ್ 2 ರನ್ ನೀಡಿ 2 ವಿಕೆಟ್ ಹಾಗೂ ಲೆಗ್‌ಸ್ಪಿನ್ನರ್ ಪಾರ್ಶವಿ ಚೋಪ್ರಾ 12 ರನ್ ನೀಡಿ 2 ವಿಕೆಟ್ ತಮ್ಮದಾಗಿಸಿಕೊಂಡರು.
ಇಂದು ಲಂಕಾ ಟಿ20 ಲೀಗ್ ಹರಾಜು: ರೈನಾ ಆಕರ್ಷಣೆ
ಕೊಲಂಬೊ: ಭಾರತದ ಮಾಜಿ ಕ್ರಿಕೆಟಿಗ, ಐಪಿಎಲ್ನ ಯಶಸ್ವಿ ಬ್ಯಾಟರ್ ಎನಿಸಿಕೊಂಡಿದ್ದ ಸುರೇಶ್ ರೈನಾ ಬುಧವಾರ ನಡೆಯಲಿರುವ 2023ರ ಲಂಕಾ ಪ್ರೀಮಿಯರ್ ಲೀಗ್ ಟಿ20 ಟೂರ್ನಿಯ ಹರಾಜು ಪ್ರಕ್ರಿಯೆಯ ಪ್ರಮುಖ ಆಕರ್ಷಣೆಯಾಗಿದ್ದಾರೆ. ಸೋಮವಾರ ಶ್ರೀಲಂಕಾ ಕ್ರಿಕೆಟ್ ಮಂಡಳಿ(ಎಸ್ಎಲ್ಸಿ) ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿರುವ ಅಂತಾರಾಷ್ಟ್ರೀಯ ಹಾಗೂ ದೇಸಿ ಕ್ರಿಕೆಟಿಗರ ಪಟ್ಟಿಯನ್ನು ಪ್ರಕಟಿಸಿದ್ದು, ರೈನಾ ಕೂಡಾ ಒಳಗೊಂಡಿದ್ದಾರೆ.
WTC Final ಸೋಲು: ಟೀಂ ಇಂಡಿಯಾ ಕೋಚಿಂಗ್ ವಿಭಾಗಕ್ಕೂ ಸರ್ಜರಿ?
ಬಿಸಿಸಿಐ ನಿಯಮದ ಭಾರತೀಯರು ವಿದೇಶಿ ಫ್ರಾಂಚೈಸಿ ಲೀಗ್ಗಳಲ್ಲಿ ಆಡಬೇಕಿದ್ದರೆ ಎಲ್ಲಾ ಮಾದರಿ ಕ್ರಿಕೆಟ್ಗೆ ನಿವೃತ್ತಿ ಘೋಷಿಸಬೇಕು. ರೈನಾ 2022ರ ಸೆಪ್ಟೆಂಬರ್ನಲ್ಲಿ ಕ್ರಿಕೆಟ್ಗೆ ನಿವೃತ್ತಿ ಪ್ರಕಟಿಸಿದ್ದರು. ಭಾರತ ಪರ 320ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ 36 ವರ್ಷದ ರೈನಾ, ಐಪಿಎಲ್ನಲ್ಲಿ ಚೆನ್ನೈ ಹಾಗೂ ಗುಜರಾತ್ ಲಯನ್ಸ್ ಪರ 205 ಪಂದ್ಯಗಳನ್ನಾಡಿದ್ದು, 5500ಕ್ಕೂ ಹೆಚ್ಚು ರನ್ ಕಲೆ ಹಾಕಿದ್ದಾರೆ.
ಕೊಹ್ಲಿ ನಾಯಕತ್ವ ಬಿಟ್ಟಿದ್ದು ಅನಿರೀಕ್ಷಿತ: ಗಂಗೂಲಿ
ನವದೆಹಲಿ: ವಿರಾಟ್ ಕೊಹ್ಲಿ ಅವರ ದಿಢೀರ್ ಟೆಸ್ಟ್ ನಾಯಕತ್ವಕ್ಕೆ ರಾಜೀನಾಮೆ ವಿಚಾರದ ಬಗ್ಗೆ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಮತ್ತೊಮ್ಮೆ ಪ್ರತಿಕ್ರಿಯಿಸಿದ್ದು, ತಮ್ಮ ನಿರ್ಧಾರದ ಬಗ್ಗೆ ಕೊಹ್ಲಿಯೇ ಕಾರಣ ಬಹಿರಂಗಪಡಿಸಬೇಕು ಎಂದಿದ್ದಾರೆ.
ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿರುವ ಅವರು, ‘ಕೊಹ್ಲಿ ಟೆಸ್ಟ್ ನಾಯಕತ್ವ ತೊರೆಯುವ ವಿಚಾರದಲ್ಲಿ ಬಿಸಿಸಿಐ ಸಿದ್ಧತೆ ನಡೆಸಿರಲಿಲ್ಲ. ದ.ಅಫ್ರಿಕಾ ಪ್ರವಾಸದ ಬಳಿಕ ಅದು ಅನಿರೀಕ್ಷಿತ ಬೆಳವಣಿಗೆಯಾಗಿತ್ತು. ಇದರ ಬಗ್ಗೆ ಈಗ ನಾವು ಮಾತನಾಡುವುದು ಸರಿಯಲ್ಲ. ಏಕೆಂದರೆ ಕೊಹ್ಲಿ ಈಗಾಗಲೇ ನಾಯಕತ್ವ ತೊರೆದಿದ್ದಾರೆ. ಅಂದಹಾಗೆ ಆ ಸಮಯದಲ್ಲಿ ಟೆಸ್ಟ್ ನಾಯಕತ್ವಕ್ಕೆ ರೋಹಿತ್ ಶರ್ಮಾ ಉತ್ತಮ ಆಯ್ಕೆಯಾಗಿದ್ದರು’ ಎಂದು ಗಂಗೂಲಿ ಹೇಳಿದ್ದಾರೆ.