ದಕ್ಷಿಣ ಆಫ್ರಿಕಾ ವಿರುದ್ದದ ಮೊದಲ ಏಕದಿನ ಪಂದ್ಯದ ಸೋಲಿಗೆ ಎರಡನೇ ಪಂದ್ಯದಲ್ಲಿ ಮಿಥಾಲಿ ರಾಜ್ ಪಡೆ ತಿರುಗೇಟು ನೀಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಲಖನೌ(ಮಾ.09): ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ತೋರಿದ ಮಿಥಾಲಿ ರಾಜ್ ನೇತೃತ್ವದ ಭಾರತದ ಮಹಿಳಾ ತಂಡವು ದಕ್ಷಿಣ ಆಫ್ರಿಕಾ ವಿರುದ್ದದ ಎರಡನೇ ಟೆಸ್ಟ್ ಪಂದ್ಯದಲ್ಲಿ 9 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 1-1ರ ಸಮಬಲ ಸಾಧಿಸಿದೆ.
ದಕ್ಷಿಣ ಆಫ್ರಿಕಾ ನೀಡಿದ್ದ 158 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಭಾರತ ಮಹಿಳಾ ತಂಡ ಕೇವಲ ಒಂದು ವಿಕೆಟ್ ಕಳೆದುಕೊಂಡು ಸುಲಭವಾಗಿ ಗೆಲುವಿನ ನಗೆ ಬೀರಿದೆ. ಜೆಮಿಯಾ ರೋಡ್ರಿಗಸ್ ಕೇವಲ 9 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಎರಡನೇ ವಿಕೆಟ್‌ಗೆ ಸ್ಮೃತಿ ಮಂಧನಾ ಹಾಗೂ ಪೂನಂ ರಾವತ್ ಎರಡನೇ ವಿಕೆಟ್‌ಗೆ 138 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಸುಲಭವಾಗಿ ಗೆಲುವು ದಕ್ಕಿಸಿಕೊಟ್ಟರು. ಮಂಧನಾ ಕೇವಲ 64 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ ಅಜೇಯ 80 ರನ್ ಚಚ್ಚಿದರೆ, ಪೂನಂ ರಾವತ್ 89 ಎಸೆತಗಳಲ್ಲಿ 8 ಬೌಂಡರಿ ಸಹಿತ 62 ರನ್ ಬಾರಿಸಿ ಮಂಧನಾಗೆ ಉತ್ತಮ ಸಾಥ್ ನೀಡಿದರು.
ಮಹಿಳಾ ಕ್ರಿಕೆಟ್: ಇಂಡೋ-ಆಫ್ರಿಕಾ 2ನೇ ಏಕದಿನ ಪಂದ್ಯಕ್ಕೆ ಕ್ಷಣಗಣನೆ ಆರಂಭ
ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ದಕ್ಷಿಣ ಆಫ್ರಿಕಾ ತಂಡ ಅನುಭವಿ ವೇಗಿ ಜೂಲನ್ ಗೋಸ್ವಾಮಿ ಹಾಗೂ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ದಾಳಿಗೆ ತತ್ತರಿಸಿ ಹೋಯಿತು. ಲಾರಾ ಗುಡ್ಡಾಲ್ 49 ರನ್ ಬಾರಿಸಿದ್ದು ಬಿಟ್ಟರೆ ಉಳಿದ್ಯಾವ ಆಟಗಾರ್ತಿಯರು ಭಾರತೀಯ ಬೌಲಿಂಗ್ ಎದುರು ದಿಟ್ಟ ಪ್ರತಿರೋಧ ತೋರಲು ಸಫಲವಾಗಲಿಲ್ಲ. ಜೂಲನ್ ಗೋಸ್ವಾಮಿ 42 ರನ್ ನೀಡಿ 4 ವಿಕೆಟ್ ಪಡೆದರೆ, ರಾಜೇಶ್ವರಿ ಗಾಯಕ್ವಾಡ್ 3, ಮಾನ್ಸಿ ಜೋಶಿ 2 ಹಾಗೂ ಹರ್ಮನ್ ಪ್ರೀತ್ ಕೌರ್ ಒಂದು ವಿಕೆಟ್ ಕಬಳಿಸಿದರು.
ಮೊದಲ ಪಂದ್ಯವನ್ನು ದಕ್ಷಿಣ ಆಫ್ರಿಕಾ 8 ವಿಕೆಟ್‌ಗಳಿಂದ ಜಯಿಸಿತ್ತು. ಇದೀಗ ಎರಡನೇ ಪಂದ್ಯವನ್ನು ಮಿಥಾಲಿ ರಾಜ್ ನೇತೃತ್ವದ ಭಾರತ ತಂಡ 9 ವಿಕೆಟ್‌ಗಳಿಂದ ಜಯಿಸುವ ಮೂಲಕ ಹರಿಣಗಳಿಗೆ ತಿರುಗೇಟು ನೀಡಿದೆ. ಇನ್ನು ಮೂರನೇ ಏಕದಿನ ಪಂದ್ಯ ಲಖನೌದಲ್ಲೇ ಮಾರ್ಚ್ 12ರಂದು ನಡೆಯಲಿದೆ.
