* ಚೊಚ್ಚಲ ಆವೃತ್ತಿಯ ಅಂಡರ್ 19 ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಶುಭಾರಂಭ* ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ದ ಭಾರತಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ* ಶ್ವೇತಾ ಶೆರಾವತ್ ಬ್ಯಾಟಿಂಗ್‌ಗೆ ತಬ್ಬಿಬ್ಬಾದ ಹರಿಣಗಳ ಪಡೆ

ಬೆನೊನಿ(ಜ.15): ಚೊಚ್ಚಲ ಆವೃತ್ತಿಯ ಅಂಡರ್‌-19 ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ಭರ್ಜರಿ ಆರಂಭ ಪಡೆದಿದೆ. ದ.ಆಫ್ರಿಕಾ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ 7 ವಿಕೆಟ್‌ ಗೆಲುವು ಸಾಧಿಸಿತು. 167 ರನ್‌ ಗುರಿ ಬೆನ್ನತ್ತಿದ ಭಾರತಕ್ಕೆ ಆರಂಭಿಕ ಆಟಗಾರ್ತಿ ಶ್ವೇತಾ ಸೆಹ್ರಾವತ್‌ (57 ಎಸೆತದಲ್ಲಿ ಔಟಾಗದೆ 92 ರನ್‌) ಹಾಗೂ ನಾಯಕಿ ಶಫಾಲಿ ವರ್ಮಾ(16 ಎಸೆತದಲ್ಲಿ 45 ರನ್‌)ರ ಸ್ಫೋಟಕ ಆಟ ನೆರವಾಯಿತು. ಭಾರತ ಇನ್ನೂ 21 ಎಸೆತ ಬಾಕಿ ಇರುವಂತೆಯೇ ಜಯಿಸಿತು. ಶ್ವೇತಾ ಅವರ ಇನ್ನಿಂಗ್‌್ಸನಲ್ಲಿ ಬರೋಬ್ಬರಿ 20 ಬೌಂಡರಿಗಳಿದ್ದವು. 

ಇದಕ್ಕೂ ಮೊದಲು ಬ್ಯಾಟ್‌ ಮಾಡಿದ ದಕ್ಷಿಣ ಆಫ್ರಿಕಾ 20 ಓವರಲ್ಲಿ 5 ವಿಕೆಟ್‌ಗೆ 166 ರನ್‌ ಗಳಿಸಿತ್ತು. ಇನ್ನು ಭಾರತ ತಂಡದ ಪರ ನಾಯಕಿ ಶಫಾಲಿ ವರ್ಮಾ ಕೇವಲ 31 ರನ್ ನೀಡಿ 2 ವಿಕೆಟ್ ಪಡೆದರೆ, ಸೋನಂ ಯಾದವ್ ಹಾಗೂ ಪರ್ಸಾವಿ ಚೋಪ್ರಾ ತಲಾ ಒಂದೊಂದು ವಿಕೆಟ್ ಪಡೆದರು. ಭಾರತ ತನ್ನ ಮುಂದಿನ ಪಂದ್ಯವನ್ನು ಸೋಮವಾರ ಯುಎಇ ವಿರುದ್ಧ ಆಡಲಿದೆ.

ಮಹಿಳಾ ಐಪಿಎಲ್‌ ತಂಡ ಖರೀದಿಗೆ 8 ಐಪಿಎಲ್‌ ಫ್ರಾಂಚೈಸಿಗಳ ಆಸಕ್ತಿ!

ನವದೆಹಲಿ: ಪುರುಷರ ಐಪಿಎಲ್‌ನ 10 ಫ್ರಾಂಚೈಸಿಗಳ ಪೈಕಿ ಕನಿಷ್ಠ 8 ಫ್ರಾಂಚೈಸಿಗಳಿಂದ ಮಹಿಳಾ ಐಪಿಎಲ್‌ ತಂಡಕ್ಕಾಗಿ ಬಿಡ್‌ ಸಲ್ಲಿಕೆಯಾಗಲಿದೆ ಎಂದು ಪ್ರತಿಷ್ಠಿತ ಕ್ರಿಕೆಟ್‌ ವೆಬ್‌ಸೈಟ್‌ವೊಂದು ಸುದ್ದಿ ಪ್ರಕಟಿಸಿದೆ. ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತಾ ನೈಟ್‌ ರೈಡರ್ಸ್‌, ರಾಜಸ್ಥಾನ ರಾಯಲ್ಸ್‌, ಸನ್‌ರೈಸ​ರ್ಸ್ ಹೈದರಾಬಾದ್, ಪಂಜಾಬ್‌ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್‌, ಗುಜರಾತ್‌ ಟೈಟಾನ್ಸ್‌ ತಂಡಗಳಿಂದ ಬಿಡ್‌ ಸಲ್ಲಿಕೆಯಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದ್ದು, ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಲಖನೌ ಸೂಪರ್‌ಜೈಂಟ್ಸ್‌ ತಂಡಗಳು ತಂಡ ಖರೀದಿಗೆ ಆಸಕ್ತಿ ತೋರಿಸಿವೆಯೇ ಎಂದು ತಿಳಿದುಬಂದಿಲ್ಲ. ಜನವರಿ 25ಕ್ಕೆ ತಂಡಗಳು ಅಂತಿಮಗೊಳ್ಳಲಿವೆ.

ಪಾಕಿಸ್ತಾನದಲ್ಲಿ 46 ವರ್ಷ ಬಳಿಕ ಕಿವೀಸ್‌ಗೆ ಸರಣಿ

ಕರಾಚಿ: ಪಾಕಿಸ್ತಾನ ನೆಲದಲ್ಲಿ 46 ವರ್ಷ ಬಳಿಕ ನ್ಯೂಜಿಲೆಂಡ್‌ ಏಕದಿನ ಸರಣಿ ಗೆದ್ದಿದೆ. ಶುಕ್ರವಾರ ನಡೆದ 3ನೇ ಹಾಗೂ ಕೊನೆಯ ಪಂದ್ಯದಲ್ಲಿ ಕಿವೀಸ್‌ 2 ವಿಕೆಟ್‌ ಗೆಲುವು ಸಾಧಿಸಿತು. ಫಖರ್‌ ಜಮಾನ್‌(101)ರ ಶತಕದ ನೆರವಿನಿಂದ ಪಾಕಿಸ್ತಾನ 50 ಓವರಲ್ಲಿ 9 ವಿಕೆಟ್‌ಗೆ 280 ರನ್‌ ಗಳಿಸಿತ್ತು. ಕಿವೀಸ್‌ 48.1 ಓವರಲ್ಲಿ 8 ವಿಕೆಟ್‌ಗೆ 281 ರನ್‌ ಗಳಿಸಿ ಜಯಿಸಿತು. ಫಿಲಿಫ್ಸ್‌ ಔಟಾಗದೆ 63 ರನ್‌ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದಕ್ಕೂ ಮೊದಲು 1976-77ರಲ್ಲಿ ಕಿವೀಸ್‌ ಸರಣಿ ಗೆದ್ದಿತ್ತು.

2016ರಲ್ಲೇ ಧೋನಿಯಿಂದ ನಾಯಕತ್ವ ಕಿತ್ತುಕೊಳ್ಳಲು ಬಯಸಿದ್ರು ವಿರಾಟ್ ಕೊಹ್ಲಿ..!

ಕಿವೀಸ್‌ ವಿರುದ್ಧ ಪಂದ್ಯದ ಬಳಿಕ ಬಾಂಗ್ಲಾದೇಶಕ್ಕೆ ದೌಡಾಯಿಸಿದ ರಿಜ್ವಾನ್‌!

ಚಿತ್ತಗಾಂಗ್‌: ಶುಕ್ರವಾರ ಕಿವೀಸ್‌ ವಿರುದ್ಧ 3ನೇ ಏಕದಿನ ಪಂದ್ಯವಾಡಿದ್ದ ಪಾಕಿಸ್ತಾನದ ಮೊಹಮದ್‌ ರಿಜ್ವಾನ್‌ ಶನಿವಾರ ಬಾಂಗ್ಲಾ ಪ್ರೀಮಿಯರ್‌ ಲೀಗ್‌ನಲ್ಲಿ ಕಣಕ್ಕಿಳಿದರು. ಕಿವೀಸ್‌ ವಿರುದ್ಧದ ಪಂದ್ಯ ರಾತ್ರಿ 10.30ರ ಸುಮಾರಿಗೆ ಮುಕ್ತಾಯಗೊಂಡಿತು. ನೇರವಾಗಿ ವಿಮಾನ ನಿಲ್ದಾಣಕ್ಕೆ ತೆರಳಿದ ರಿಜ್ವಾನ್‌ ಶನಿವಾರ ಬೆಳಗ್ಗೆ ಢಾಕಾಗೆ ಬಂದಿಳಿದರು. 

ರಿಜ್ವಾನ್‌ರನ್ನು ಕೊಮಿಲಾ ವಿಕ್ಟೋರಿಯನ್ಸ್‌ ತಂಡ ಢಾಕಾದಿಂದ ಚಿತ್ತಗಾಂಗ್‌ಗೆ ಹೆಲಿಕಾಪ್ಟರ್‌ನಲ್ಲಿ ಕರೆಸಿಕೊಂಡಿತು. ರಿಜ್ವಾನ್‌ ಆಗಮನದಿಂದ ಈ ಋುತುವಿನ ಮೊದಲ ಗೆಲುವಿನ ನಿರೀಕ್ಷೆಯಲ್ಲಿದ್ದ ಕೊಮಿಲಾ ತಂಡಕ್ಕೆ ನಿರಾಸೆಯಾಯಿತು. 11 ಎಸೆತದಲ್ಲಿ 18 ರನ್‌ ಗಳಿಸಿ ರಿಜ್ವಾನ್‌ ಔಟಾದರು. ಫಾರ್ಚೂನ್‌ ಬರಿಶಾಲ್‌ ತಂಡ 12 ರನ್‌ಗಳಿಂದ ಜಯಿಸಿತು.