ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಮೊಹಮ್ಮದ್ ಶಮಿ ಬಂಗಾಳದ ಎರಡನೇ ರಣಜಿ ಪಂದ್ಯದಿಂದ ದಿಢೀರ್ ಹಿಂದೆ ಸರಿದಿದ್ದಾರೆ. ಅವರು ಸಂಪೂರ್ಣ ಫಿಟ್ ಆಗಿದ್ದರೂ ವಿಶ್ರಾಂತಿ ಕೇಳಿದ್ದಾರೆ ಎಂದು ಕೋಚ್ ಸ್ಪಷ್ಟಪಡಿಸಿದ್ದಾರೆ. ಸತತವಾಗಿ ಕಡೆಗಣಿಸಲಾಗುತ್ತಿದ್ದರೂ ಭಾರತ ತಂಡಕ್ಕೆ ಮರಳುವ ವಿಶ್ವಾಸವನ್ನು ಶಮಿ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಟೀಂ ಇಂಡಿಯಾ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಸದ್ಯ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಿದ್ದಾರೆ. ನ್ಯೂಜಿಲೆಂಡ್ ಎದುರಿನ ಏಕದಿನ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದ ಮೊಹಮ್ಮದ್ ಶಮಿಗೆ ಮತ್ತೊಮ್ಮೆ ನಿರಾಸೆ ಎದುರಾಗಿದೆ. ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾದ ಬೆನ್ನಲ್ಲೇ, ಇದೀಗ ಮೊಹಮ್ಮದ್ ಶಮಿ ಬಂಗಾಳ ಪರ ಎರಡನೇ ರಣಜಿ ಪಂದ್ಯವನ್ನಾಡುವುದರಿಂದ ಹಿಂದೆ ಸರಿದಿದ್ದಾರೆ. ಅಷ್ಟಕ್ಕೂ ಶಮಿ ಎರಡನೇ ರಣಜಿ ಪಂದ್ಯದಿಂದ ಹೊರಗುಳಿದಿದ್ದೇಕೆ ಎನ್ನುವ ಕುರಿತಂತೆ ಬಂಗಾಳ ಕೋಚ್ ಕೊನೆಗೂ ಮೌನ ಮುರಿದಿದ್ದಾರೆ.
ಕೊನೆಗೂ ಮೌನ ಮುರಿದ ಬಂಗಾಳ ಕೋಚ್
ಮೊಹಮ್ಮದ್ ಶಮಿ ಎರಡನೇ ರಣಜಿ ಪಂದ್ಯದಿಂದ ಹೊರಗುಳಿದಿದ್ದೇಕೆ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಬಂಗಾಳ ಕೋಚ್ ಲಕ್ಷ್ಮಿ ರತನ್ ಶುಕ್ಲಾ, ' ಮೊಹಮ್ಮದ್ ಶಮಿ ಆಡಲು ಸಂಪೂರ್ಣ ಫಿಟ್ ಆಗಿದ್ದಾರೆ. ಹೀಗಿದ್ದೂ ಸರ್ವೀಸಸ್ ಎದುರಿನ ಪಂದ್ಯದಿಂದ ನನಗೆ ವಿಶ್ರಾಂತಿ ಬೇಕಿದೆ ಎಂದು ಕೇಳಿಕೊಂಡರು ಎಂದು ಹೇಳಿದ್ದಾರೆ. ನ್ಯೂಜಿಲೆಂಡ್ ಎದುರಿನ ಏಕದಿನ ಹಾಗೂ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟಗೊಂಡ ಕೆಲವೇ ನಿಮಿಷಗಳ ಬಳಿಕ ಶಮಿ ಈ ನಿರ್ಧಾರ ತೆಗೆದುಕೊಂಡರು ಎಂದು ವರದಿಯಾಗಿದೆ.
2026-27ನೇ ಸಾಲಿನ ರಣಜಿ ಟ್ರೋಫಿಯ ಮೊದಲ ಪಂದ್ಯದಲ್ಲಿ ಮೊಹಮ್ಮದ್ ಶಮಿ ಡೆಲ್ಲಿ ಎದುರು ಐದು ವಿಕೆಟ್ ಕಬಳಿಸಿ ಮಿಂಚಿದ್ದರು. ಇದರ ಬೆನ್ನಲ್ಲೇ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಶಮಿ, ನ್ಯೂಜಿಲೆಂಡ್ ಎದುರಿನ ಏಕದಿನ ಸರಣಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಆ ವರದಿ ಹುಸಿಯಾದ ಬೆನ್ನಲ್ಲೇ ಶಮಿ ತಾವು ಫಿಟ್ ಇದ್ದರೂ, ವಿಶ್ರಾಂತಿ ಪಡೆದುಕೊಂಡಿರುವುದು ಸಾಕಷ್ಟು ಸವಾಲುಗಳನ್ನು ಹುಟ್ಟುಹಾಕಿದೆ.
ಕಳೆದ ಒಂದೂವರೆ ವರ್ಷದಿಂದ ಭಾರತ ತಂಡದಿಂದ ಔಟ್:
ಅಂದಹಾಗೆ ಮೊಹಮ್ಮದ್ ಶಮಿ 2025ರ ಮಾರ್ಚ್ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಕೊನೆಯ ಬಾರಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇದಾದ ಬಳಿಕ ಗಾಯದಿಂದ ಚೇತರಿಸಿಕೊಂಡು ದೇಶಿ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ತೋರುತ್ತಿದ್ದರೂ, ದೈಹಿಕವಾಗಿ ಫಿಟ್ ಆಗಿದ್ದರೂ ಸಹ ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಮೊಹಮ್ಮದ್ ಶಮಿ ಅವರನ್ನು ಕಡೆಗಣಿಸುತ್ತಲೇ ಬಂದಿತ್ತು. ಇದೀಗ ಅಗರ್ಕರ್ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟರೂ, ಶಮಿ ಅದೃಷ್ಟ ಮಾತ್ರ ಬದಲಾಗಿಲ್ಲ. ಇನ್ನು ಇದೆಲ್ಲದರ ನಡುವೆಯೂ ಶಮಿ ತಾವು ಭಾರತ ತಂಡಕ್ಕೆ ಆಡುವ ಪ್ರಯತ್ನವನ್ನು ಕೈಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


