ICC T20 World Cup ಟೂರ್ನಿಗೆ ವೆಸ್ಟ್ ಇಂಡೀಸ್ ತಂಡ ಪ್ರಕಟ, ರಸೆಲ್, ನರೈನ್‌ಗಿಲ್ಲ ಸ್ಥಾನ..!
ಟಿ20 ವಿಶ್ವಕಪ್ ಟೂರ್ನಿಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಪ್ರಕಟ
ನಾಯಕನಾಗಿ ವಿಂಡೀಸ್ ತಂಡವನ್ನು ಮುನ್ನಡೆಸಲಿರುವ ನಿಕೋಲಸ್ ಪೂರನ್
ಸ್ಟಾರ್ ಆಲ್ರೌಂಡರ್‌ಗಳಾದ ಆ್ಯಂಡ್ರೆ ರಸೆಲ್ ಹಾಗೂ ಸುನಿಲ್ ನರೈನ್‌ಗಿಲ್ಲ ತಂಡದಲ್ಲಿ ಸ್ಥಾನ
ಪೋರ್ಟ್ ಆಫ್ ಸ್ಪೇನ್(ಸೆ.15): ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವು ಪ್ರಕಟವಾಗಿದ್ದು, ಸ್ಪೋಟಕ ಆರಂಭಿಕ ಬ್ಯಾಟರ್ ಎವಿನ್ ಲೆವಿಸ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಸ್ಟಾರ್ ಆಲ್ರೌಂಡರ್‌ಗಳಾದ ಆ್ಯಂಡ್ರೆ ರಸೆಲ್ ಹಾಗೂ ಸುನಿಲ್ ನರೈನ್ ತಂಡ ಕೂಡಿಕೊಳ್ಳುವಲ್ಲಿ ವಿಫಲವಾಗಿದ್ದಾರೆ. 15 ಆಟಗಾರರನ್ನೊಳಗೊಂಡ ಬಲಿಷ್ಠ ತಂಡವನ್ನು ನಿಕೋಲಸ್ ಪೂರನ್ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ.
ಇನ್ನು ಅಚ್ಚರಿಯ ಆಯ್ಕೆ ಎನ್ನುವಂತೆ ಇನ್ನೂ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡದ ಎಡಗೈ ಬ್ಯಾಟಿಂಗ್ ಆಲ್ರೌಂಡರ್ ರೈಮನ್ ರೈಫರ್ ಹಾಗೂ ಬಲಗೈ ಲೆಗ್ ಸ್ಪಿನ್ ಆಲ್ರೌಂಡರ್ ಯಾನಿಕ್ ಕ್ಯಾರಿಚ್ ಅವರಿಗೆ ವಿಂಡೀಸ್ ಟಿ20 ವಿಶ್ವಕಪ್ ತಂಡದಲ್ಲಿ ಮಣೆ ಹಾಕಲಾಗಿದೆ. ಆದರೆ ಸ್ಪೋಟಕ ಬ್ಯಾಟಿಂಗ್ ಹಾಗೂ ಮಾರಕ ಬೌಲಿಂಗ್ ಮೂಲಕ ಏಕಾಂಗಿಯಾಗಿ ತಂಡವನ್ನು ಗೆಲ್ಲಿಸಿಕೊಡಬಲ್ಲ ಸಾಮರ್ಥ್ಯ ಹೊಂದಿದ್ದ ಆ್ಯಂಡ್ರೆ ರಸೆಲ್ ಹಾಗೂ ಸುನಿಲ್ ನರೈನ್ ಅವರಿಗೆ ವಿಂಡೀಸ್ ತಂಡದಲ್ಲಿ ಸ್ಥಾನ ಸಿಗದೇ ಇರುವುದು ಅಚ್ಚರಿ ಮೂಡಿಸಿದೆ.
30 ವರ್ಷದ ಯಾನಿಕ್ ಕ್ಯಾರಿಚ್, ಕಳೆದ ತಿಂಗಳಷ್ಟೇ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇನ್ನೊಂದೆಡೆ 31 ವರ್ಷದ ರೈಮನ್ ರೈಫರ್, ವಿಂಡೀಸ್ ಪರ ಟೆಸ್ಟ್ ಹಾಗೂ ಏಕದಿನ ಪಂದ್ಯಗಳನ್ನಾಡಿದ್ದರು. ಆದರೆ ಈ ಇಬ್ಬರು ಆಟಗಾರರು ಇದುವರೆಗೂ ಒಂದೇ ಒಂದು ಟಿ20 ಪಂದ್ಯವನ್ನಾಡಿಲ್ಲ.
ಇನ್ನು 30 ವರ್ಷದ ಆರಂಭಿಕ ಬ್ಯಾಟರ್ ಎವಿನ್ ಲೆವಿಸ್, ಕಳೆದ ವರ್ಷದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕೊನೆಯ ಬಾರಿಗೆ ವೆಸ್ಟ್ ಇಂಡೀಸ್ ತಂಡ ಕೂಡಿಕೊಂಡಿದ್ದರು. ಇದಾದ ಬಳಿಕ ಬರೋಬ್ಬರಿ ಒಂದು ವರ್ಷಗಳ ನಂತರ ಮತ್ತೆ ಎವಿನ್ ಲೆವಿಸ್‌ಗೆ ವಿಂಡೀಸ್ ತಂಡದಲ್ಲಿ ಮಣೆ ಹಾಕಲಾಗಿದೆ. ಇನ್ನು ನಿಕೋಲಸ್ ಪೂರನ್ ನಾಯಕನಾಗಿ ವಿಂಡೀಸ್ ತಂಡವನ್ನು ಮುನ್ನಡೆಸಲಿದ್ದು, ರೋಮನ್ ಪೋವೆಲ್ ಉಪನಾಯಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ICC T20 World Cup: ಬಲಿಷ್ಠ ಬಾಂಗ್ಲಾದೇಶ ಕ್ರಿಕೆಟ್ ತಂಡ ಪ್ರಕಟ; ಮೊಹಮದುಲ್ಲಾಗಿಲ್ಲ ಸ್ಥಾನ..!
ಎರಡು ಬಾರಿಯ ಟಿ20 ವಿಶ್ವಕಪ್ ವಿಜೇತ ತಂಡವಾದ ವೆಸ್ಟ್ ಇಂಡೀಸ್ ತಂಡವು, ಇದೀಗ ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ನೇರ ಅರ್ಹತೆ ಪಡೆಯಲು ವಿಫಲವಾಗಿದೆ. ಹೀಗಾಗಿ ಅಕ್ಟೋಬರ್ 16ರಿಂದ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ ಅರ್ಹತಾ ಪಂದ್ಯವನ್ನಾಡಿ, ಅಲ್ಲಿ ಗೆಲುವು ಸಾಧಿಸಿ ಸೂಪರ್ 12 ಹಂತಕ್ಕೆ ಲಗ್ಗೆಯಿಡಲಿದೆ. ವೆಸ್ಟ್ ಇಂಡೀಸ್ ತಂಡವು ಅರ್ಹತಾ ಸುತ್ತಿನಲ್ಲಿ ಸ್ಕಾಟ್ಲೆಂಡ್, ಜಿಂಬಾಬ್ವೆ ಹಾಗೂ ಐರ್ಲೆಂಡ್ ತಂಡವನ್ನು ಎದುರಿಸಲಿದೆ.
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ವೆಸ್ಟ್ ಇಂಡೀಸ್ ತಂಡ ಹೀಗಿದೆ ನೋಡಿ
ನಿಕೋಲಸ್ ಪೂರನ್(ನಾಯಕ), ರೋಮನ್ ಪೋವೆಲ್(ಉಪನಾಯಕ), ಎವಿನ್ ಲೆವಿಸ್, ಬ್ರೆಂಡನ್ ಕಿಂಗ್, ಕೈಲ್ ಮೇಯರ್ಸ್, ಓಡೆನ್ ಸ್ಮಿತ್, ಜಾನ್ಸನ್ ಕಾರ್ಲೆಸ್, ಶಿಮ್ರೊನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ರೈಮನ್ ರೈಫರ್, ಒಬೆಡ್ ಮೆಕಾಯ್, ಅಲ್ಜೆರಿ ಜೋಸೆಫ್, ಅಕೆಲ್ ಹೊಸೈನ್, ಶೆಲ್ಡನ್ ಕಾಟ್ರೆಲ್, ಯಾನಿಕ್ ಕ್ಯಾರಿಚ್.