ಆಂಟಿಗುವಾ(ಮಾ.04): ವಿಂಡೀಸ್‌ ಎದುರು ಚೊಚ್ಚಲ ಟಿ20 ಹ್ಯಾಟ್ರಿಕ್‌ ಕಬಳಿಸಿ ಸಂಭ್ರಮಿಸುತ್ತಿದ್ದ ಲಂಕಾ ಸ್ಪಿನ್ನರ್ ಅಕಿಲಾ ಧನಂಜಯ ಬೌಲಿಂಗ್‌ನಲ್ಲಿ ದೈತ್ಯ ಕ್ರಿಕೆಟಿಗ ಕೀರನ್‌ ಪೊಲ್ಲಾರ್ಡ್ 6 ಎಸೆತಗಳಲ್ಲಿ 6 ಸಿಕ್ಸರ್ ಚಚ್ಚುವ ಮೂಲಕ ಧನಂಜಯ ಸಂಭ್ರಮವನ್ನು ನುಚ್ಚುನೂರು ಮಾಡಿದ್ದಾರೆ.

ಹೌದು, ಲಂಕಾ ವಿರುದ್ದದ ಮೊದಲ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ ನಾಯಕ ಪೊಲ್ಲಾರ್ಡ್‌ 6 ಎಸೆತಗಳಲ್ಲಿ 6 ಸಿಕ್ಸರ್‌ ಚಚ್ಚುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಮೂರನೇ ಬ್ಯಾಟ್ಸ್‌ಮನ್‌ ಎನ್ನುವ ದಾಖಲೆಗೆ ಪಾತ್ರರಾಗಿದ್ದಾರೆ. ಈ ಮೊದಲು ದಕ್ಷಿಣ ಆಫ್ರಿಕಾದ ಹರ್ಷೆಲ್‌ ಗಿಬ್ಸ್ ಹಾಗೂ ಭಾರತದ ಎಡಗೈ ಬ್ಯಾಟ್ಸ್‌ಮನ್‌ ಯುವರಾಜ್‌ ಸಿಂಗ್ 6 ಎಸೆತಗಳ 6 ಸಿಕ್ಸರ್ ಚಚ್ಚಿದ್ದರು. ಇದೀಗ ಅಕಿಲಾ ಧನಂಜಯಗೆ 6 ಸಿಕ್ಸರ್ ಚಚ್ಚಿ ಗಿಬ್ಸ್, ಯುವಿ ದಾಖಲೆ ಸರಿಗಟ್ಟಿದ್ದಾರೆ.

IPL 2020: ಈ 5 ಬ್ಯಾಟ್ಸ್‌ಮನ್‌ಗಳು 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಬಹುದು..!

ಹೀಗಿತ್ತು ನೋಡಿ ಪೊಲ್ಲಾರ್ಡ್ 6 ಸಿಕ್ಸ್‌: 

ಹ್ಯಾಟ್ರಿಕ್‌ ಬೆನ್ನಲ್ಲೇ ಧನಂಜಯಗೆ ಶಾಕ್‌..!
ಅಕಿಲಾ ಧನಂಜಯ ತಾವೆಸೆದ ಎರಡನೇ ಓವರ್‌ನ ಎರಡನೇ ಎಸೆತದಲ್ಲಿ ಎವಿನ್‌ ಲೆವಿಸ್‌, ಮೂರನೇ ಎಸೆತದಲ್ಲಿ ಕ್ರಿಸ್‌ ಗೇಲ್ ಹಾಗೂ 4ನೇ ಎಸೆತದಲ್ಲಿ ನಿಕೋಲಸ್‌ ಪೂರನ್‌ ವಿಕೆಟ್‌ ಕಬಳಿಸುವ ಮೂಲಕ ಕುಣಿದು ಕುಪ್ಪಳಿಸಿದ್ದರು. ಆದರೆ ಮರು ಓವರ್‌ನಲ್ಲಿ ಪೊಲ್ಲಾರ್ಡ್‌ 6 ಎಸೆತಗಳನ್ನು ಬೌಂಡರಿ ಗೆರೆಯಾಚೆ ದಾಟಿಸುವ ಮೂಲಕ ಧನಂಜಯಗೆ ಶಾಕ್‌ ನೀಡಿದ್ದಾರೆ.

ಸುಲಭವಾಗಿ ಗೆಲುವಿನ ದಡ ಸೇರಿದ ಕೆರಿಬಿಯನ್ನರ್‌: ವೆಸ್ಟ್ ಇಂಡೀಸ್‌ ಸಂಘಟಿತ ಬೌಲಿಂಗ್‌ ದಾಳಿಗೆ ತತ್ತರಿಸಿದ ಶ್ರೀಲಂಕಾ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 131 ರನ್‌ ಬಾರಿಸಿತ್ತು. ಸಾದಾರಣ ಗುರಿ ಬೆನ್ನತ್ತಿದ ವಿಂಡೀಸ್‌ ನಾಯಕ ಪೊಲ್ಲಾರ್ಡ್‌(38) ಹಾಗೂ ಜೇಸನ್ ಹೋಲ್ಡರ್ ಅಜೇಯ 29 ರನ್‌ಗಳ ನೆರವಿನಿಂದ ಇನ್ನೂ 6.5 ಓವರ್‌ ಬಾಕಿ ಇರುವಂತೆಯೆ 4 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿದೆ.