ರಾಜ್‌ಕೋಟ್‌(ಜ.17): ನಾಯಕ ವಿರಾಟ್‌ ಕೊಹ್ಲಿ ತಮ್ಮ ನೆಚ್ಚಿನ 3ನೇ ಕ್ರಮಾಂಕಕ್ಕೆ ವಾಪಸಾಗಲಿದ್ದು, ಶುಕ್ರವಾರ ಇಲ್ಲಿ ನಡೆಯಲಿರುವ ಆಸ್ಪ್ರೇಲಿಯಾ ವಿರುದ್ಧದ 2ನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಭಾರತಕ್ಕೆ ಗೆಲುವು ತಂದುಕೊಡಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ. ಮೊದಲ ಏಕದಿನ ನಡೆಸಿದ ಬ್ಯಾಟಿಂಗ್‌ ಕ್ರಮಾಂಕದ ಪ್ರಯೋಗ ಕೈಕೊಟ್ಟಹಿನ್ನೆಲೆಯಲ್ಲಿ, ಸರಣಿ ಉಳಿಸಿಕೊಳ್ಳಬೇಕಿದ್ದರೆ ವಿರಾಟ್‌ ಕೊಹ್ಲಿಯಿಂದ ಭರ್ಜರಿ ಪ್ರದರ್ಶನ ಮೂಡಿಬರಬೇಕಿದೆ.

ರೋಹಿತ್‌ ಶರ್ಮಾ ಇಲ್ಲವೇ ವಿರಾಟ್‌ ಕೊಹ್ಲಿ ದೊಡ್ಡ ಇನ್ನಿಂಗ್ಸ್‌ ಆಡಿದರಷ್ಟೇ ಭಾರತಕ್ಕೆ ಗೆಲುವು ಸಿಗಲಿದೆ ಎನ್ನುವಂಥ ಪರಿಸ್ಥಿತಿ ಎದುರಾಗಿದ್ದು, ನಾಯಕ ಹಾಗೂ ಉಪನಾಯಕನ ಹೆಗಲ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಮುಂಬೈ ಪಂದ್ಯದಲ್ಲಿ 10 ವಿಕೆಟ್‌ಗಳ ಗೆಲುವು ಸಾಧಿಸಿದ ಕಾಂಗರೂ ಪಡೆ, ಭಾರತದಲ್ಲಿ ಸತತ 2ನೇ ಏಕದಿನ ಸರಣಿ ಜಯಿಸುವ ಹುಮ್ಮಸ್ಸಿನಲ್ಲಿದೆ. ಕಳೆದ ವರ್ಷ ಭಾರತ ಪ್ರವಾಸದಲ್ಲಿ 2-3 ಅಂತರದಲ್ಲಿ ಆಸ್ಪ್ರೇಲಿಯಾ ಸರಣಿ ವಶಪಡಿಸಿಕೊಂಡಿತ್ತು.

INDvAUS:ಕೊಹ್ಲಿ ಸೈನ್ಯದಲ್ಲಿ ಬದಲಾವಣೆ ಖಚಿತ, ಸಂಭವನೀಯ ತಂಡ ಇಲ್ಲಿದೆ!

ಈ ಪಂದ್ಯದಲ್ಲೂ ಶಿಖರ್‌ ಧವನ್‌, ರೋಹಿತ್‌ ಹಾಗೂ ಕೆ.ಎಲ್‌.ರಾಹುಲ್‌ ಮೂವರು ಕಣಕ್ಕಿಳಿಯಲಿದ್ದಾರೆ. ಧವನ್‌ ಹಾಗೂ ರೋಹಿತ್‌ ಇನ್ನಿಂಗ್ಸ್‌ ಆರಂಭಿಸಲಿದ್ದು, ರಾಹುಲ್‌ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ. ರಿಷಭ್‌ ಪಂತ್‌ ಹೊರಬಿದ್ದಿರುವ ಕಾರಣ, ವಿಕೆಟ್‌ ಕೀಪಿಂಗ್‌ ಹೊಣೆ ಸಹ ರಾಹುಲ್‌ ಹೆಗಲಿಗೆ ಬೀಳಲಿದೆ.

ಪಂತ್‌ ಹೊರಬಿದ್ದಿರುವ ಕಾರಣ, ಕರ್ನಾಟಕದ ಮನೀಶ್‌ ಪಾಂಡೆ ಇಲ್ಲವೇ ಕೇದಾರ್‌ ಜಾಧವ್‌ಗೆ ಫಿನಿಶರ್‌ ಸ್ಥಾನ ಸಿಗಬಹುದು. ಬೌಲಿಂಗ್‌ ವಿಭಾಗದಲ್ಲಿ ಕೆಲ ಬದಲಾವಣೆಗಳು ಆಗಬಹುದು. ಶಾರ್ದೂಲ್‌ ಠಾಕೂರ್‌ ಬದಲು ನವ್‌ದೀಪ್‌ ಸೈನಿಗೆ ಸ್ಥಾನ ಸಿಗುತ್ತಾ ಎನ್ನುವ ಕುತೂಹಲವಿದೆ. ಕುಲ್ದೀಪ್‌ ಯಾದವ್‌ ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದರು, ಅವರ ಬದಲಿಗೆ ಯಜುವೇಂದ್ರ ಚಹಲ್‌ರನ್ನು ಆಡಿಸುವ ಸಾಧ್ಯತೆ ಇದೆ.

ಮತ್ತೊಂದೆಡೆ 10 ವಿಕೆಟ್‌ಗಳ ಭರ್ಜರಿ ಗೆಲುವಿನೊಂದಿಗೆ ಸರಣಿ ಆರಂಭಿಸಿರುವ ಆಸ್ಪ್ರೇಲಿಯಾ, ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದೆ. ಆ್ಯರೋನ್‌ ಫಿಂಚ್‌ ಹಾಗೂ ಡೇವಿಡ್‌ ವಾರ್ನರ್‌ ತಮ್ಮ ಬ್ಯಾಟಿಂಗ್‌ ಲಯ ಮುಂದುವರಿಸುವ ಉತ್ಸಾಹದಲ್ಲಿದ್ದಾರೆ. ಆಸ್ಪ್ರೇಲಿಯಾ ಸದೃಢ ಬೌಲಿಂಗ್‌ ಪಡೆಯನ್ನು ಹೊಂದಿದ್ದು, ಭಾರತೀಯ ಬ್ಯಾಟ್ಸ್‌ಮನ್‌ಗಳನ್ನು ಮತ್ತೊಮ್ಮೆ ಕಾಡಲು ಕಾತರಿಸುತ್ತಿದೆ.

ರಾಜ್‌ಕೋಟ್‌ನಲ್ಲಿ ಭಾರತಕ್ಕಿಲ್ಲ ಅದೃಷ್ಟ!

ಟೀಂ ಇಂಡಿಯಾ ಪಾಲಿಗೆ ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣ ಅದೃಷ್ಟತಾಣವಲ್ಲ. ತಂಡ ಇಲ್ಲಿ ಆಡಿರುವ 2 ಏಕದಿನ ಪಂದ್ಯಗಳಲ್ಲೂ ಸೋಲು ಕಂಡಿದೆ. 2013ರಲ್ಲಿ ಇಂಗ್ಲೆಂಡ್‌ ವಿರುದ್ಧ ಆಡಿದ್ದ ಮೊದಲ ಪಂದ್ಯದಲ್ಲಿ 9 ರನ್‌ ಸೋಲು ಕಂಡಿದ್ದ ಭಾರತ, 2015ರಲ್ಲಿ ದ.ಆಫ್ರಿಕಾ ವಿರುದ್ಧ 18 ರನ್‌ ಸೋಲು ಅನುಭವಿಸಿತ್ತು.

ಪಿಚ್‌ ರಿಪೋರ್ಟ್‌

ಇಲ್ಲಿನ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ನಡೆದಿರುವ 2 ಏಕದಿನ ಪಂದ್ಯಗಳಲ್ಲಿ ಬ್ಯಾಟ್ಸ್‌ಮನ್‌ಗಳು ಮೇಲುಗೈ ಸಾಧಿಸಿದ್ದರು. ಮುಂಬೈನಂತೆ ಇಲ್ಲೂ ಸಹ ಸಂಜೆ ನಂತರ ಇಬ್ಬನಿ ಬೀಳಲಿದ್ದು, ಬೌಲರ್‌ಗಳಿಗೆ ಕಷ್ಟವಾಗಲಿದೆ. ಹೀಗಾಗಿ ಟಾಸ್‌ ಗೆಲ್ಲುವ ತಂಡ ಮೊದಲು ಫೀಲ್ಡ್‌ ಮಾಡಲು ನಿರ್ಧರಿಸುವ ಸಾಧ್ಯತೆ ಹೆಚ್ಚು.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ, ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ(ನಾಯಕ), ಶ್ರೇಯಸ್‌ ಅಯ್ಯರ್‌, ಕೆ.ಎಲ್‌.ರಾಹುಲ್‌, ಪಾಂಡೆ/ಜಾಧವ್‌, ರವೀಂದ್ರ ಜಡೇಜಾ, ಮೊಹಮದ್‌ ಶಮಿ, ಕುಲ್ದೀಪ್‌ ಯಾದವ್‌, ಜಸ್‌ಪ್ರೀತ್‌ ಬೂಮ್ರಾ, ಸೈನಿ/ಠಾಕೂರ್‌.

ಆಸ್ಪ್ರೇಲಿಯಾ: ಡೇವಿಡ್‌ ವಾರ್ನರ್‌, ಆ್ಯರೋನ್‌ ಫಿಂಚ್‌(ನಾಯಕ), ಮಾರ್ನಸ್‌ ಲಬುಶೇನ್‌, ಸ್ಟೀವ್‌ ಸ್ಮಿತ್‌, ಆ್ಯಸ್ಟನ್‌ ಟರ್ನರ್‌, ಅಲೆಕ್ಸ್‌ ಕಾರಿ, ಆಸ್ಟನ್‌ ಅಗರ್‌, ಮಿಚೆಲ್‌ ಸ್ಟಾರ್ಕ್, ಪ್ಯಾಟ್‌ ಕಮಿನ್ಸ್‌, ಕೇನ್‌ ರಿಚರ್ಡ್‌ಸನ್‌, ಆ್ಯಡಂ ಜಂಪಾ.

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋಟ್ಸ್‌ರ್‍ 1