Lata Mangeshkar passes away: ಲತಾ ಮಂಗೇಶ್ಕರ್ ನಿಧನಕ್ಕೆ ಕಂಬನಿ ಮಿಡಿದ ಕ್ರೀಡಾ ಜಗತ್ತು..!
* ಕೊನೆಯುಸಿರೆಳೆದ ಭಾರತದ ದಿಗ್ಗಜ ಗಾಯಕಿ ಲತಾ ಮಂಗೇಶ್ಕರ್
* ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಭಾರತದ ನೈಟಿಂಗೇಲ್
* ಲತಾ ಮಂಗೇಶ್ಕರ್ ನಿಧನಕ್ಕೆ ಸಂತಾಪ ಸೂಚಿಸಿದ ಕ್ರೀಡಾ ಜಗತ್ತು
ಬೆಂಗಳೂರು(ಫೆ.06): ಭಾರತೀಯರ ಪಾಲಿಗೆ ಭಾನುವಾರ ಬೆಳಗ್ಗೆ ಲತಾ ಮಂಗೇಶ್ಕರ್ (Lata Mangeshkar) ಅವರು ನಿಧನರಾದ ಸುದ್ದಿ ಭರಸಿಡಿಲಿನಂತೆ ಬಂದೆರಗಿದೆ. ಭಾರತೀಯ ಸಂಗೀತ ಕ್ಷೇತ್ರದ ದಿಗ್ಗಜ ಗಾಯಕಿ ಲತಾ ಮಂಗೇಶ್ಕರ್ ಕಳೆದೊಂದು ತಿಂಗಳಿನಿಂದ ಕೋವಿಡ್‌ನಿಂದ ಬಳಲುತ್ತಿದ್ದರು. ಇದೀಗ ಬಹು ಅಂಗಾಂಗ ವೈಫಲ್ಯದಿಂದ ಲತಾ ಮಂಗೇಶ್ಕರ್(92) ಕೊನೆಯುಸಿರೆಳೆದಿದ್ದಾರೆ. ಲತಾ ಮಂಗೇಶ್ಕರ್ ನಿಧನಕ್ಕೆ ಸಚಿನ್ ತೆಂಡುಲ್ಕರ್‌ರಿಂದ (Sachin Tendulkar) ಹಿಡಿದು ಸೈನಾ ನೆಹ್ವಾಲ್‌ವರೆಗೆ (Saina Nehwal) ಇಡೀ ಕ್ರೀಡಾ ಜಗತ್ತು ಕಂಬನಿ ಮಿಡಿದಿದೆ.
ಕೋವಿಡ್ (COVID 19) ವಿರುದ್ದ ಸೆಣಸಾಟ ನಡೆಸಿದ್ದ ಲತಾ ಮಂಗೇಶ್ಕರ್ ಮುಂಬೈನಲ್ಲಿರುವ ಬೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಇಂದು(ಫೆ.6) ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಲತಾ ಮಂಗೇಶ್ಕರ್ ಅವರ ನಿಧನದ ಸುದ್ದಿ ಕೇಳಿ ದುಃಖವಾಯಿತು. ಅವರ ಸುಮಧುರವಾದ ಹಾಡುಗಳು ಜಗತ್ತಿನ ಲಕ್ಷಾಂತರ ಮಂದಿಯ ಮನಸ್ಸಿಗೆ ಮುದ ನೀಡಿವೆ. ಆ ಎಲ್ಲಾ ಸಂಗೀತ ಹಾಗೂ ಒಳ್ಳೆಯ ನೆನಪುಗಳನ್ನು ನೀಡಿದ್ದಕ್ಕೆ ಧನ್ಯವಾದಗಳು. ಅವರ ಕುಟುಂಬ ಹಾಗೂ ಪ್ರೀತಿಪಾತ್ರರಿಗೆ ನೋವು ಭರಿಸುವ ಶಕ್ತಿಯನ್ನು ನೀಡಲಿ ಎಂದು ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ(Virat Kohli) ಟ್ವೀಟ್ ಮಾಡಿದ್ದಾರೆ.
ಒಲಂಪಿಕ್ಸ್ ಪದಕ ವಿಜೇತೆ, ಬ್ಯಾಡ್ಮಿಂಟನ್ ಪಟು ಪಿ.ವಿ. ಸಿಂಧು. ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ಫೋಟೋದೊಂದಿಗೆ ಆತ್ಮಕ್ಕೆ ಶಾಂತಿ ಸಿಗಲಿ(RIP) ಎಂದು ಟ್ವೀಟ್ ಮಾಡುವ ಮೂಲಕ ನುಡಿನಮನ ಸಲ್ಲಿಸಿದ್ದಾರೆ.
ನಾನು ಲತಾ ಮಂಗೇಶ್ಕರ್ ಅವರ ಜತೆ ಜೀವನದ ಕೆಲ ಕಾಲ ಕಳೆದಿರುವುದಕ್ಕೆ ನನ್ನನ್ನು ನಾನೇ ಭಾಗ್ಯವಂತ ಎಂದು ಭಾವಿಸುತ್ತೇನೆ. ಅವರು ನನಗೆ ಪ್ರೀತಿ ಹಾಗೂ ಆಶೀರ್ವಾದವನ್ನು ಮಾಡುತ್ತಿದ್ದರು. ಅವರು ಕೊನೆಯುಸಿರೆಳೆದಿದ್ದು, ನನ್ನಲ್ಲಿ ಶೂನ್ಯ ಭಾವನೆ ಆವರಿಸುವಂತೆ ಮಾಡಿದೆ. ಅವರು ತಮ್ಮ ಸಂಗೀತದ ಮೂಲಕ ನಮ್ಮೆಲ್ಲರ ಹೃದಯದಲ್ಲಿರಲಿದ್ದಾರೆ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಟ್ವೀಟ್ ಮಾಡಿದ್ದಾರೆ.
ಭಾರತ ಕ್ರಿಕೆಟ್ ತಂಡದ ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ(Ajinkya Rahane), ಭಾರತ ಮಾತೆಯಿಂದು ತನ್ನ ಗಾನಕೋಗಿಲೆಯನ್ನು(ನೈಟಿಂಗೇಲ್) ಕಳೆದುಕೊಂಡಿದೆ. ಇಂತಹ ದುಃಖದ ಸಂದರ್ಭದಲ್ಲಿ ನಾವೆಲ್ಲರೂ ಲತಾ ಮಂಗೇಶ್ಕರ್ ಅವರ ಕುಟುಂಬದ ಜತೆಗಿದ್ದೇವೆ. ಓಂ ಶಾಂತಿ ಎಂದು ಟ್ವೀಟ್ ಮಾಡಿದ್ದಾರೆ.
ಸಂಗೀತಕ್ಕೆ ಜಾತಿ, ಭಾಷೆ ಹಾಗೂ ಗಡಿಯ ಹಂಗಿಲ್ಲ ಎನ್ನುವುದನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ(Babar Azam), ಲತಾ ಮಂಗೇಶ್ಕರ್ ನಿಧನಕ್ಕೆ ನುಡಿನಮನ ಸಲ್ಲಿಸುವ ಮೂಲಕ ಮೇಲ್ಪಂಕ್ತಿ ಹಾಕಿ ಕೊಟ್ಟಿದ್ದಾರೆ. ಸುವರ್ಣ ಯುಗ ಮುಗಿಯಿತು. ಅವರ ಮಾಂತ್ರಿಕ ಗಾಯನ ಹಾಗೂ ಪರಂಪರಿ ಜಗತ್ತಿನಾದ್ಯಂತ ನೆಲೆಸಿರುವ ಲಕ್ಷಾಂತರ ಮಂದಿಯ ಹೃದಯದಲ್ಲಿ ಜೀವಂತವಾಗಿರಲಿದ್ದಾರೆ. ಅವರೊಬ್ಬ ಅಸಾಮಾನ್ಯ ಐಕಾನ್. ಲತಾ ಮಂಗೇಶ್ಕರ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಜಂ ಟ್ವೀಟ್ ಮಾಡಿ ಗೌರವ ಸೂಚಿಸಿದ್ದಾರೆ.
ಇನ್ನು ಭಾರತದ ಖ್ಯಾತ ಮಹಿಳಾ ಕುಸ್ತಿಪಟು ಗೀತಾ ಪೋಗತ್, ತಮ್ಮ 92ನೇ ವಯಸ್ಸಿಗೆ ದಿಗ್ಗಜ ಗಾಯಕಿ ಲತಾ ಮಂಗೇಶ್ಕರ್ ಅವರು ಕೊನೆಯುಸಿರೆಳೆದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ಕೂಡಾ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದೆ. ಭಾರತ ರತ್ನ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ, ದೇಶದ ನೋವಿನ ಸಂದರ್ಭದಲ್ಲಿ ನಾವು ಕೂಡಾ ಭಾಗಿಯಾಗಿದ್ದೇವೆ. ದಶಕಗಳ ಕಾಲ ತಮ್ಮ ಸುಮಧುರ ಗಾಯನದ ಮೂಲಕ ಸಂಗೀತದ ರಾಣಿಯಾಗಿದ್ದ ಮಂಗೇಶ್ಕರ್ ಅವರು ಕ್ರಿಕೆಟ್ ಹಾಗೂ ಟೀಂ ಇಂಡಿಯಾದ ಅಪ್ಪಟ ಅಭಿಮಾನಿಯಾಗಿದ್ದರು. ಸಂಗೀತವನ್ನು ಒಂದು ಮಾಧ್ಯಮವಾಗಿ ಬೆಳೆಯುವಂತೆ ಜಾಗೃತಿ ಮೂಡಿಸುವಲ್ಲಿ ಅವರು ಯಶಸ್ವಿಯಾಗಿದ್ದರು ಎಂದು ಬಿಸಿಸಿಐ ಟ್ವೀಟ್ ಮಾಡಿದೆ..
ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಏಕದಿನ ಪಂದ್ಯವು ಟೀಂ ಇಂಡಿಯಾ ಪಾಲಿಗೆ 1000ನೆಯ ಏಕದಿನ ಪಂದ್ಯವಾಗಿದ್ದು, ಲತಾ ಮಂಗೇಶ್ಕರ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ತೋಳಿಗೆ ಕಪ್ಪುಪಟ್ಟಿ ತೊಟ್ಟು ಕಣಕ್ಕಿಳಿಯುವ ಮೂಲಕ ಅಗಲಿದ ಸಂಗೀತ ಸಾಧಕಿಗೆ ಸಂತಾಪ ಸೂಚಿಸಿದೆ.
ಇಂದು ಸಂಜೆ 6.30ರ ಸುಮಾರಿಗೆ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಲತಾ ಮಂಗೇಶ್ಕರ್ ಅವರ ಅಂತ್ಯ ಸಂಸ್ಕಾರ ನಡೆಯಲಿದೆ.