* ಹಣಗಳಿಕೆಯಲ್ಲೂ ದಾಖಲೆ ಬರೆದ ಕಿಂಗ್ ಕೊಹ್ಲಿ* ಇನ್‌ಸ್ಟಾಗ್ರಾಂನಲ್ಲಿ ಬ್ರ್ಯಾಂಡ್‌ಗಳ ಪ್ರಚಾರಕ್ಕೆ ಅತಿಹೆಚ್ಚು ಮೊತ್ತ ಪಡೆಯಲಿರುವ ಭಾರತೀಯ* ಅತಿಹೆಚ್ಚು ಮೊತ್ತ ಪಡೆಯಲಿರುವ ಕ್ರೀಡಾಪಟುಗಳ ಪಟ್ಟಿಯಲ್ಲಿ ಕೊಹ್ಲಿ 4ನೇ ಸ್ಥಾನ 

ನವದೆಹಲಿ(ಸೆ.30): ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಬ್ರ್ಯಾಂಡ್‌ಗಳ ಪ್ರಚಾರಕ್ಕೆ ಅತಿಹೆಚ್ಚು ಮೊತ್ತ ಪಡೆಯಲಿರುವ ಭಾರತೀಯ ಎನ್ನುವ ಹಿರಿಮೆಗೆ ಅವರು ಪಾತ್ರರಾಗಿದ್ದಾರೆ. ಕೊಹ್ಲಿ ಪ್ರತಿ ಪೋಸ್ಟ್‌ಗೆ ಬರೋಬ್ಬರಿ 8 ಕೋಟಿ ರುಪಾಯಿ ಸಂಭಾವನೆ ಪಡೆಯುತ್ತಾರೆ ಎಂದು ಹಾಪ್ಪರ್‌ ಎಚ್‌ಕ್ಯೂ ಸೋಷಿಯಲ್‌ ಎನ್ನುವ ಸಂಸ್ಥೆಯೊಂದು ವರದಿ ಮಾಡಿದೆ. 

ಅತಿಹೆಚ್ಚು ಮೊತ್ತ ಪಡೆಯಲಿರುವ ಕ್ರೀಡಾಪಟುಗಳ ಪಟ್ಟಿಯಲ್ಲಿ ಕೊಹ್ಲಿ 4ನೇ ಸ್ಥಾನ ಪಡೆದಿದ್ದಾರೆ. ಪೋರ್ಚುಗಲ್‌ನ ಫುಟ್ಬಾಲಿಗ ಕ್ರಿಸ್ಟಿಯಾನೋ ರೊನಾಲ್ಡೋ ಮೊದಲ ಸ್ಥಾನದಲ್ಲಿದ್ದರೆ, ಅರ್ಜೆಂಟೀನಾ ಫುಟ್ಬಾಲಿಗ ಲಿಯೋನೆಲ್‌ ಮೆಸ್ಸಿ, ಬ್ರೆಜಿಲ್‌ ಫುಟ್ಬಾಲಿಗ ನೇಯ್ಮಾರ್‌ ಕ್ರಮವಾಗಿ 2 ಹಾಗೂ 3ನೇ ಸ್ಥಾನದಲ್ಲಿದ್ದಾರೆ.

ಕೊಹ್ಲಿಗೆ ಥ್ಯಾಂಕ್ಸ್‌ ಹೇಳಿದ ಫೆಡರರ್‌

ನವದೆಹಲಿ: ಪುರುಷರ ವಿಶ್ವ ಟೆನಿಸ್‌ ಸಂಸ್ಥೆ(ಎಟಿಪಿ) ಇತ್ತೀಚೆಗೆ ನಿವೃತ್ತಿ ಪಡೆದ ರೋಜರ್‌ ಫೆಡರರ್‌ಗೆ ವಿಶೇಷ ವಿಡಿಯೋ ಸಂದೇಶವೊಂದನ್ನು ಸಿದ್ಧಪಡಿಸಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದೆ. ಆ ವಿಡಿಯೋದಲ್ಲಿ ಕ್ರಿಕೆಟ್‌ ತಾರೆ ವಿರಾಟ್‌ ಕೊಹ್ಲಿ ಸಹ ಫೆಡರರ್‌ರನ್ನು ಅಭಿನಂದಿಸಿ ಅವರ ಮುಂದಿನ ಬದುಕಿಗೆ ಶುಭ ಕೋರಿದ್ದಾರೆ. ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ರೋಜರ್‌ ಫೆಡರರ್‌, ‘ಧನ್ಯವಾದ ವಿರಾಟ್‌ ಕೊಹ್ಲಿ. ಸದ್ಯದಲ್ಲೇ ಭಾರತಕ್ಕೆ ಭೇಟಿ ನೀಡಬೇಕು ಎಂದುಕೊಂಡಿದ್ದೇನೆ’ ಎಂದಿದ್ದಾರೆ.

Scroll to load tweet…

ಕ್ಯಾಲೆಂಡರ್‌ ವರ್ಷದಲ್ಲಿ ಹೆಚ್ಚು ರನ್‌: ಸೂರ್ಯಕುಮಾರ್ ದಾಖಲೆ!

ನವದೆಹಲಿ: ಸದ್ಯ ಭಾರತದ ಶ್ರೇಷ್ಠ ಟಿ20 ಬ್ಯಾಟರ್‌ ಎಂದೇ ಕರೆಸಿಕೊಳ್ಳುತ್ತಿರುವ ಸೂರ್ಯಕುಮಾರ್‌ ಯಾದವ್‌ ಹೊಸ ದಾಖಲೆ ಬರೆದಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನ ಕ್ಯಾಲೆಂಡರ್‌ ವರ್ಷದಲ್ಲಿ ಅತಿಹೆಚ್ಚು ರನ್‌ ಗಳಿಸಿದ ಭಾರತೀಯ ಬ್ಯಾಟರ್‌ ಎನ್ನುವ ಹಿರಿಮೆಗೆ ಅವರು ಪಾತ್ರರಾಗಿದ್ದಾರೆ. 2022ರಲ್ಲಿ 21 ಪಂದ್ಯಗಳನ್ನು ಆಡಿರುವ ಅವರು 732 ರನ್‌ ಗಳಿಸಿದ್ದು, 2018ರಲ್ಲಿ 689 ರನ್‌ ಗಳಿಸಿ ಶಿಖರ್‌ ಧವನ್‌ ಬರೆದಿದ್ದ ದಾಖಲೆಯನ್ನು ಮುರಿದಿದ್ದಾರೆ.

ತಿರುವನಂತಪುರಂನಲ್ಲಿ ಬುಧವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ವಿಶ್ವ ನಂ.2 ಸೂರ್ಯಕುಮಾರ್‌ ಅರ್ಧಶತಕ ಬಾರಿಸಿದರು. ಅವರು ಅಂ.ರಾ.ಟಿ20ಯಲ್ಲಿ ಇನ್ನು 24 ರನ್‌ ಗಳಿಸಿದರೆ 1000 ರನ್‌ ಪೂರೈಸಲಿದ್ದಾರೆ.

ಕಿಂಗ್‌ ಕೊಹ್ಲಿ ದಾಖಲೆ, ರಾಹುಲ್‌ ದ್ರಾವಿಡ್‌ ರೆಕಾರ್ಡ್‌ ಬ್ರೇಕ್‌ ಮಾಡಿದ ವಿರಾಟ್‌!

ಅಂ.ರಾ. ಟಿ20 ಕ್ರಿಕೆಟ್‌ನ ಕ್ಯಾಲೆಂಡರ್‌ ವರ್ಷದಲ್ಲಿ ಅತಿಹೆಚ್ಚು ರನ್‌ ಗಳಿಸಿದ ವಿಶ್ವ ದಾಖಲೆ ಪಾಕಿಸ್ತಾನದ ಮೊಹಮದ್‌ ರಿಜ್ವಾನ್‌ ಹೆಸರಿನಲ್ಲಿದೆ. ರಿಜ್ವಾನ್‌ 2021ರಲ್ಲಿ 29 ಪಂದ್ಯಗಳಲ್ಲಿ 1326 ರನ್‌ ಗಳಿಸಿದ್ದರು. ಅದೇ ವರ್ಷ ಪಾಕಿಸ್ತಾನದ ನಾಯಕ ಬಾಬರ್‌ ಆಜಂ 939 ರನ್‌ ಕಲೆಹಾಕಿದ್ದರು. 2019ರಲ್ಲಿ ಐರ್ಲೆಂಡ್‌ನ ಪಾಲ್‌ ಸ್ಟಿರ್ಲಿಂಗ್‌ 20 ಪಂದ್ಯಗಳಲ್ಲಿ 748 ರನ್‌ ಗಳಿಸಿದ್ದರು. ದ.ಆಫ್ರಿಕಾ ವಿರುದ್ಧ ಸರಣಿಯಲ್ಲಿ ಸೂರ್ಯ, ಸ್ಟಿರ್ಲಿಂಗ್‌ರನ್ನು ಹಿಂದಿಕ್ಕುವ ನಿರೀಕ್ಷೆ ಇದೆ.

ಅತಿಹೆಚ್ಚು ಸಿಕ್ಸರ್‌ ದಾಖಲೆ

ಅಂ.ರಾ. ಟಿ20ಯಲ್ಲಿ ಕ್ಯಾಲೆಂಡರ್‌ ವರ್ಷದಲ್ಲಿ ಅತಿಹೆಚ್ಚು ಸಿಕ್ಸರ್‌ ಬಾರಿಸಿದ ವಿಶ್ವ ದಾಖಲೆಯನ್ನು ಸೂರ್ಯಕುಮಾರ್‌ ಬರೆದಿದ್ದಾರೆ. ಅವರು 2022ರಲ್ಲಿ 21 ಪಂದ್ಯಗಳನ್ನಾಡಿದ್ದು 45 ಸಿಕ್ಸರ್‌ ಸಿಡಿಸಿದ್ದಾರೆ. ಪಾಕಿಸ್ತಾನದ ಮೊಹಮದ್‌ ರಿಜ್ವಾನ್‌ 2021ರಲ್ಲಿ 42 ಸಿಕ್ಸರ್‌ ಬಾರಿಸಿದ್ದರು. ಅದೇ ವರ್ಷ ನ್ಯೂಜಿಲೆಂಡ್‌ನ ಮಾರ್ಟಿನ್‌ ಗಪ್ಟಿಲ್‌ 41 ಸಿಕ್ಸರ್‌ ಚಚ್ಚಿದ್ದರು.