ಸಿಡ್ನಿ(ನ.30): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿ ಟೆಸ್ಟ್ ಸರಣಿಯಲ್ಲಿ ಭಾರತ ತಂಡವನ್ನು ಕಾಡಲಿದ್ದು, ಒಂದು ವೇಳೆ ಕೊಹ್ಲಿ ಅನುಪಸ್ಥಿತಿಯ ಹೊರತಾಗಿಯೂ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಟೆಸ್ಟ್ ಸರಣಿ ಜಯಿಸಿದರೆ ವರ್ಷ ಪೂರ್ತಿ ಸಂಭ್ರಮಾಚರಣೆ ಮಾಡಬಹುದು ಎಂದು ಆಸೀಸ್ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಹೇಳಿದ್ದಾರೆ.

ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ವಿರಾಟ್ ಕೊಹ್ಲಿ, ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದ ಬಳಿಕ ತವರಿಗೆ ಮರಳಲಿದ್ದಾರೆ. ಕೊಹ್ಲಿ ಟೀಂ ಇಂಡಿಯಾ ಪರ ಓರ್ವ ಪ್ರಮುಖ ಬ್ಯಾಟ್ಸ್‌ಮನ್ ಹಾಗೆಯೇ ನಾಯಕನಾಗಿ ಏಕಕಾಲದಲ್ಲಿ 2 ಪಾತ್ರಗಳನ್ನು ನಿಭಾಯಿಸುತ್ತಿದ್ದಾರೆ. ಪ್ರವಾಸಿ ಟೀಂ ಇಂಡಿಯಾ ಕೊಹ್ಲಿ ಅನುಪಸ್ಥಿತಿಯಲ್ಲಿ ಇನ್ನುಳಿದ 3 ಪಂದ್ಯಗಳಲ್ಲಿ ಯಾವ ರೀತಿಯ ಪ್ರದರ್ಶನ ನೀಡಬಹುದು ಎನ್ನುವುದರ ವಿಶ್ಲೇಷಣೆ ಮಾಡಿದ್ದಾರೆ.

ಯಾವೊಬ್ಬ ಆಟಗಾರನು ಕೊಹ್ಲಿ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ. ಆದರೆ ಇದೇ ವೇಳೆ ಮತ್ತೊಬ್ಬ ಆಟಗಾರನ ಪ್ರತಿಭೆ ಅನಾವರಣಕ್ಕೆ ಉತ್ತಮ ಅವಕಾಶವಾಗಿದ್ದು, ಆಸ್ಟ್ರೇಲಿಯಾ ಪಿಚ್‌ನಲ್ಲಿ ಕೊಹ್ಲಿ ಸ್ಥಾನ ತುಂಬಬಲ್ಲ ಆಟಗಾರನ ಸತ್ವ ಪರೀಕ್ಷೆಯಾಗಲಿದೆ ಎಂದು ಕ್ಲಾರ್ಕ್ ಹೇಳಿದ್ದಾರೆ.

ಒಬ್ಬನಿಂದ ಪಂದ್ಯ ಗೆಲ್ಲಿಸೋಕೆ ಆಗಲ್ಲ; ಕೊಹ್ಲಿ ಪರ ಬ್ಯಾಟ್ ಬೀಸಿದ ಭಜ್ಜಿ

ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ಟೀಂ ಇಂಡಿಯಾವನ್ನು ಮುನ್ನಡೆಸಬೇಕು. ಇನ್ನು ಕೆ.ಎಲ್. ರಾಹುಲ್‌ಗೆ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಲು ಅವಕಾಶ ನೀಡುವುದು ಉತ್ತಮ. ಈ ಇಬ್ಬರು ಪ್ರತಿಭಾನ್ವಿತ ಆಟಗಾರರು ಎಂದು ಕ್ಲಾರ್ಕ್ ಅಭಿಪ್ರಾಯಪಟ್ಟಿದ್ದಾರೆ. ಒಂದು ವೇಳೆ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಅವರದ್ದೇ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದರೆ ಟೀಂ ಇಂಡಿಯಾ ವರ್ಷಪೂರ್ತಿ ಸಂಭ್ರಮಾಚರಣೆ ಮಾಡಬಹುದು. ಕಾರಣ ಅದೊಂದು ಅದ್ಭುತ ಗೆಲುವಾಗಲಿದೆ ಎಂದು 42 ವರ್ಷದ ಕ್ಲಾರ್ಕ್ ಹೇಳಿದ್ದಾರೆ.