ಶಿಖರ್ ಧವನ್‌ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ ಡೆಲ್ಲಿ ತಂಡ ವಿಜಯ್ ಹಜಾರೆ ಟೂರ್ನಿಯಲ್ಲಿ ಮಹಾರಾಷ್ಟ್ರ ವಿರುದ್ದ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ 

ಜೈಪುರ(ಫೆ.27): ಗಬ್ಬರ್‌ ಸಿಂಗ್‌ ಖ್ಯಾತಿಯ ಶಿಖರ್‌ ಧವನ್‌ ವಿಜಯ್ ಹಜಾರೆ ಟೂರ್ನಿಯಲ್ಲಿ ಅಕ್ಷರಶಃ ಅಬ್ಬರಿಸಿದ್ದು, ಮಹರಾಷ್ಟ್ರ ವಿರುದ್ದ ಕೆಚ್ಚೆದೆಯ ಶತಕ ಬಾರಿಸುವ ಮೂಲಕ ಡೆಲ್ಲಿ 3 ವಿಕೆಟ್‌ಗಳ ರೋಚಕ ಜಯ ಸಾಧಿಸಲು ನೆರವಾಗಿದ್ದಾರೆ. ಈ ಮೂಲಕ ಇಂಗ್ಲೆಂಡ್‌ ವಿರುದ್ದದ ಸೀಮಿತ ಓವರ್‌ಗಳ ಸರಣಿಗೆ ಈಗಿನಿಂದಲೇ ಭರ್ಜರಿ ಸಿದ್ದತೆ ಆರಂಭಿಸಿದ್ದಾರೆ.
ಇಲ್ಲಿನ ಸವಾಯಿ ಮಾನ್‌ಸಿಂಗ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮಹರಾಷ್ಟ್ರ ನೀಡಿದ್ದ 329 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಡೆಲ್ಲಿ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಧೃವ್ ಶೋರೆ ಹಾಗೂ ಶಿಖರ್ ಧವನ್‌ ಮೊದಲ ವಿಕೆಟ್‌ಗೆ 136 ರನ್‌ಗಳ ಜತೆಯಾಟವಾಡುವ ಮೂಲಕ ದಿಟ್ಟ ಆರಂಭ ಒದಗಿಸಿಕೊಟ್ಟರು. ಶೋರೆ 75 ಎಸೆತಗಳಲ್ಲಿ 7 ಬೌಂಡರಿ ಸಹಿತ 61 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು.

ಕೈಕೊಟ್ಟ ಮಧ್ಯಮ ಕ್ರಮಾಂಕ: ಡೆಲ್ಲಿ ಉತ್ತಮ ಆರಂಭದ ಹೊರತಾಗಿಯೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ನೆಲಕಚ್ಚಿ ಆಡುವ ಪ್ರಯತ್ನ ಮಾಡಲಿಲ್ಲ. ಹಿಮ್ಮತ್ ಸಿಂಗ್(1), ನಿತಿಶ್ ರಾಣಾ(27), ಕ್ಷಿತಿಜ್ ಶರ್ಮಾ(36) ಹೀಗೆ ಉಳಿದ್ಯಾವ ಬ್ಯಾಟ್ಸ್‌ಮನ್‌ಗಳು ಅರ್ಧಶತಕ ದಾಖಲಿಸಲು ಸಾಧ್ಯವಾಗಲಿಲ್ಲ.

ವಿಜಯ್‌ ಹಜಾರೆ ಟೂರ್ನಿ: ನಾಕೌಟ್ಸ್‌ಗೆ ಡೆಲ್ಲಿ ಆತಿಥ್ಯ

ಅಬ್ಬರಿಸಿ ಬೊಬ್ಬಿರಿದ ಧವನ್‌: ಒಂದು ಕಡೆ ವಿಕೆಟ್‌ ಬೀಳುತ್ತಿದ್ದರೂ ಯಾವುದೇ ಆತಂಕಕ್ಕೆ ಒಳಗಾಗದೇ ನಿರ್ಭೀತಿಯಿಂದ ಬ್ಯಾಟ್ ಬೀಸಿದ ಶಿಖರ್ ಧವನ್ ಕೇವಲ 118 ಎಸೆತಗಳಲ್ಲಿ ಬರೋಬ್ಬರಿ 21 ಬೌಂಡರಿ ಹಾಗೂ 1 ಸಿಕ್ಸರ್‌ ನೆರವಿನಿಂದ 153 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು. ಈ ಮೂಲಕ ತಂಡ ಗೆಲುವಿನ ಸಮೀಪ ಕೊಂಡೊಯ್ಯುವಲ್ಲಿ ಯಶಸ್ವಿಯಾದರು

ಕೊನೆಯಲ್ಲಿ ಡೆಲ್ಲಿ ಅನುಜ್ ರಾವತ್‌(6) ಹಾಗೂ ಶಿವಾಂಕ್‌ ವಶಿಷ್ಠ(6) ವಿಕೆಟ್ ಕಳೆದುಕೊಂಡಿತಾದರೂ, ಲಲಿತ್ ಯಾದವ್(18) ಹಾಗೂ ನಾಯಕ ಪ್ರದೀಪ್ ಸಾಂಗ್ವಾನ್‌(7) ಇನ್ನು 3 ಎಸೆತಗಳು ಬಾಕಿ ಇರುವಂತೆಯೇ ತಂಡಕ್ಕೆ ರೋಚಕ ಜಯ ತಂದಿತ್ತರು.

ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮಹಾರಾಷ್ಟ್ರ ಸಂಘಟಿತ ಬ್ಯಾಟಿಂಗ್ ನೆರವಿನಿಂದ 328 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತ್ತು. 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ತೋರಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಕೇದಾರ್ ಜಾದವ್ 81 ಎಸೆತಗಳಲ್ಲಿ 86 ರನ್‌ ಬಾರಿಸಿ ಗಮನ ಸೆಳೆದಿದ್ದಾರೆ.