ಭಾರತದ ಪ್ರತಿಭಾನ್ವಿತ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ, ಮುಂಬರುವ ಕ್ರಿಕೆಟ್ ಟೂರ್ನಿಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ 10ನೇ ತರಗತಿ ಸಿಬಿಎಸ್‌ಇ ಪರೀಕ್ಷೆಗೆ ಗೈರಾಗಿದ್ದಾರೆ. ಅಂಡರ್-19 ವಿಶ್ವಕಪ್ ಹೀರೋ ಆಗಿರುವ ವೈಭವ್ ಅವರ ಈ ನಿರ್ಧಾರದ ಬಗ್ಗೆ ಶಾಲೆಯ ಪ್ರಾಂಶುಪಾಲರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಪಾಟ್ನಾ: ಭಾರತದ ಪ್ರತಿಭಾನ್ವಿತ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ, ಕೊನೆಯ ಕ್ಷಣದಲ್ಲಿ 10 ಕ್ಲಾಸ್ ಪರೀಕ್ಷೆಗೆ ಗೈರಾಗಿದ್ದಾರೆ. 10ನೇ ಕ್ಲಾಸ್ ಎಕ್ಸಾಂಗಿಂತ ಮುಂಬರುವ ಮಹತ್ವದ ಕ್ರಿಕೆಟ್ ಟೂರ್ನಿಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇನ್ನು ಲಾಸ್ಟ್ ಮಿನಿಟ್‌ನಲ್ಲಿ ಎಕ್ಸಾಂಗೆ ಚಕ್ಕರ್ ಹೊಡೆದ ಬಗ್ಗೆ ಶಾಲೆಯ ಪ್ರಿನ್ಸಿಪಾಲ್ ಅಚ್ಚರಿಯ ಪ್ರತಿಕ್ರಿಯೆ ನೀಡಿದ್ದಾರೆ. ಮೊದಲು ವೈಭವ್ ಎಕ್ಸಾಂ ಬರೆಯಲು ರೆಡಿಯಾಗಿದ್ದಾರೆ ಎಂದಾಗ ಆತನಿಗೆ ಯಾವುದೇ ವಿಐಪಿ ಉಪಚಾರವಿರುವುದಿಲ್ಲ ಎಂದಿದ್ದ ಪ್ರಿನ್ಸಿಪಾಲ್, ಈಗ ಅಚ್ಚರಿಯ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.
ವೈಭವ್ ಸೂರ್ಯವಂಶಿ, ಬಿಹಾರದ ಪೋದಾರ್ ಇಂಟರ್ ನ್ಯಾಷನಲ್ ಸ್ಕೂಲ್‌ನ ವಿದ್ಯಾರ್ಥಿಯಾಗಿದ್ದು, ಫೆಬ್ರವರಿ 17ರಿಂದ ಮಾರ್ಚ್ 11ರ ವರೆಗೆ 10ನೇ ತರಗತಿ ಸಿಬಿಎಸ್‌ಇ ವಾರ್ಷಿಕ ಪರೀಕ್ಷೆಗಳು ನಿಗದಿಯಾಗಿವೆ. ಪರೀಕ್ಷೆ ಬರೆಯಲು ಅಡ್ಮಿಷನ್ ಟಿಕೆಟ್ ಪಡೆದುಕೊಂಡು, ಎಕ್ಸಾಂಗಾಗಿ ರೆಡಿಯಾಗಿದ್ದ ವೈಭವ್ ಸೂರ್ಯವಂಶಿ ಕೊನೆಯ ಕ್ಷಣದಲ್ಲಿ ಉಲ್ಟಾ ಹೊಡೆದಿದ್ದು, ಮೊದಲ ದಿನದ ಪರೀಕ್ಷೆಗೆ ಗೈರಾಗಿದ್ದಾರೆ. ಇದೀಗ ಮೊದಲ ದಿನದ ಪರೀಕ್ಷೆಗೆ ಗೈರಾಗಿದ್ದರ ಬಗ್ಗೆ ಪೋದಾರ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಪ್ರಿನ್ಸಿಪಾಲ್ ಎನ್‌ಕೆ ಸಿನ್ಹಾ ಖಚಿತಪಡಿಸಿದ್ದಾರೆ.
ವೈಭವ್ ಸೂರ್ಯವಂಶಿ ಬಗ್ಗೆ ಪ್ರಿನ್ಸಿಪಾಲ್ ಅಚ್ಚರಿಯ ಹೇಳಿಕೆ
'ವೈಭವ್ ಸೂರ್ಯವಂಶಿ ಇಂದಿನ ಪರೀಕ್ಷೆಗೆ ಗೈರಾಗಿದ್ದಾರೆ. ಅವರು ಇಂದು ಪರೀಕ್ಷೆ ಬರೆಯಲು ಎಕ್ಸಾಂ ಸೆಂಟರ್‌ಗೆ ಬಂದಿರಲಿಲ್ಲ. ಸಿಬಿಎಸ್‌ಇ ಯ ನಿಯಮಾನುಸಾರ ನಾವು ಆತನನ್ನು ಆಬ್ಸೆಂಟ್ ಎಂದು ಮಾರ್ಕ್ ಮಾಡಿದ್ದೇವೆ. ಆತ ಇಂದು ಎಕ್ಸಾಂ ಬರೆಯಲು ಪರೀಕ್ಷಾ ಕೇಂದ್ರಕ್ಕೆ ಬರಬಹುದು ಎನ್ನುವ ನಿರೀಕ್ಷೆಯಿತ್ತು. ಆದರೆ ಆತನಿಗೆ ಇನ್ನೂ ಮಹತ್ವದ ಜವಾಬ್ದಾರಿಗಳಿವೆ. ಬಹುಶಃ ಆತನಿಗೆ ಕ್ರಿಕೆಟ್ ಮ್ಯಾಚ್ ಅಥವಾ ಪ್ರಾಕ್ಟೀಸ್ ಇರಬಹುದು. ನನಗನಿಸುತ್ತೇ ಆತ ಮುಂದಿನ ಬಾರಿ ಖಂಡಿತವಾಗಿಯೂ ಪರೀಕ್ಷೆ ಬರೆಯುವ ವಿಶ್ವಾಸವಿದೆ' ಎಂದು ಪೋದಾರ್ ಇಂಟರ್‌ನ್ಯಾಷನಲ್ ಸ್ಕೂಲ್ ಪ್ರಿನ್ಸಿಪಾಲ್ ಸಿನ್ಹಾ ಹೇಳಿದ್ದಾರೆ.
ಅಂಡರ್-19 ವಿಶ್ವಕಪ್ ಹೀರೋ ವೈಭವ್ ಸೂರ್ಯವಂಶಿ:
ಇನ್ನು ಕೆಲ ದಿನಗಳ ಹಿಂದಷ್ಟೇ ನಡೆದ ಐಸಿಸಿ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿ ಭಾರತ ಪರ ಗರಿಷ್ಠ ರನ್ ಸಿಡಿಸುವ ಮೂಲಕ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ಪರ ಏಳು ಪಂದ್ಯಗಳನ್ನಾಡಿ ಒಂದು ಶತಕ ಹಾಗೂ ಮೂರು ಅರ್ಧಶತಕ ಸಹಿತ 62.71ರ ಬ್ಯಾಟಿಂಗ್ ಸರಾಸರಿಯಲ್ಲಿ 439 ರನ್ ಸಿಡಿಸಿದ್ದರು. ಇನ್ನು ಇಂಗ್ಲೆಂಡ್ ಎದುರಿನ ಫೈನಲ್‌ನಲ್ಲಿ ವೈಭವ್ ಸೂರ್ಯವಂಶಿ ಕೇವಲ 80 ಎಸೆತಗಲ್ಲಿ 15 ಬೌಂಡರಿ ಹಾಗೂ 15 ಮುಗಿಲೆತ್ತರದ ಸಿಕ್ಸರ್‌ಗಳ ನೆರವಿನಿಂದ ಸ್ಪೋಟಕ 175 ರನ್ ಸಿಡಿಸಿದ್ದರು. 14 ವರ್ಷದ ವೈಭವ್ ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಹಾಗೂ ಅಂಡರ್-19 ವಿಶ್ವಕಪ್ ಸರಣಿಶ್ರೇಷ್ಠ ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾಗಿದ್ದರು.
ಇದೀಗ ವೈಭವ್ ಸೂರ್ಯವಂಶಿ, ಮುಂಬರುವ 2026ರ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸಲು ರೆಡಿಯಾಗುತ್ತಿದ್ದಾರೆ. ಈ ಬಾರಿ ರಾಜಸ್ಥಾನ ರಾಯಲ್ಸ್ ತಂಡವನ್ನು ನಾಯಕನಾಗಿ ರಿಯಾನ್ ಪರಾಗ್ ಮುನ್ನಡೆಸಲಿದ್ದಾರೆ. ಕಳೆದ ಆವೃತ್ತಿಯಲ್ಲಿ 13ನೇ ವಯಸ್ಸಿಗೆ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದ ವೈಭವ್ ಸೂರ್ಯವಂಶಿ, ರಾಜಸ್ಥಾನ ರಾಯಲ್ಸ್ ಪರ ಕೇವಲ 7 ಪಂದ್ಯಗಳನ್ನಾಡಿ ಒಂದು ಶತಕ ಸಹಿತ 252 ರನ್ ಸಿಡಿಸಿ ಗಮನ ಸೆಳೆದಿದ್ದರು. ಗುಜರಾತ್ ಟೈಟಾನ್ಸ್ ಎದುರು ವೈಭವ್ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ, ಐಪಿಎಲ್‌ನಲ್ಲಿ ಶತಕ ಸಿಡಿಸಿದ ಅತಿಕಿರಿಯ ಕ್ರಿಕೆಟಿಗ ಎನ್ನುವ ಅಪರೂಪದ ದಾಖಲೆಗೆ ಪಾತ್ರರಾಗಿದ್ದರು.


