* ಟೆಸ್ಟ್ ಅಡುವ ರಾಷ್ಟ್ರ ಐರ್ಲೆಂಡ್ ವಿರುದ್ದ ಅಮೆರಿಕ ಕ್ರಿಕೆಟ್ ತಂಡಕ್ಕೆ ಭರ್ಜರಿ ಗೆಲುವು* 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶುಭಾರಂಭ ಮಾಡಿದ ಅಮೆರಿಕ* ಅಮೆರಿಕ ತಂಡದ ಗೆಲುವಿನಲ್ಲಿ ಮಿಂಚಿದ ಭಾರತೀಯ ಮೂಲದ ಕ್ರಿಕೆಟಿಗರು

ಪ್ಲೋರಿಡ(ಡಿ.23): ಚುಟುಕು ಕ್ರಿಕೆಟ್ ಪಂದ್ಯಾವಳಿಯಾದ ಟಿ20 ಕ್ರಿಕೆಟ್‌ನಲ್ಲಿ (T20I Cricket) ಯಾವ ರೀತಿಯ ಅಚ್ಚರಿಯ ಫಲಿತಾಂಶ ಬೇಕಿದ್ದರೂ ಹೊರಬೀಳಬಹುದು. ಇದೀಗ ಕ್ರಿಕೆಟ್ ಶಿಶು ಅಮೆರಿಕ ಕ್ರಿಕೆಟ್‌ ತಂಡವು (USA Cricket Team) ಟೆಸ್ಟ್ ಆಡುವ ರಾಷ್ಟ್ರವಾದ ಐರ್ಲೆಂಡ್ ತಂಡದ ವಿರುದ್ದ ಮೊದಲ ಟಿ20 ಗೆಲುವು ದಾಖಲಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ. ಬುಧವಾರ ಯುನೈಟೆಡ್ ಸ್ಟೇಟ್ಸ್‌ ಆಫ್‌ ಅಮೆರಿಕ(USA) ತಂಡವು ಐರ್ಲೆಂಡ್ ವಿರುದ್ದ 26 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ (International Cricket Council) ಪೂರ್ಣ ಸದಸ್ಯತ್ವ ಪಡೆದಿರುವ ರಾಷ್ಟ್ರದ ವಿರುದ್ದ ಅಮೆರಿಕ ತಂಡವು ಮೊದಲ ಸರಣಿಯನ್ನು ಆಡುತ್ತಿದೆ. ಎರಡು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಅಮೆರಿಕ ತಂಡವು 26 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಭಾರತೀಯ ಮೂಲದ ಗಜಾನಂದ್ ಸಿಂಗ್ (65) ಹಾಗೂ ಸುಶಾಂತ್ ಮೊದಾನಿ(50) ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ಅಮೆರಿಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಟಾಸ್ ಗೆದ್ದ ಅಮೆರಿಕ ತಂಡದ ನಾಯಕ ಮೋನಾಂಕ್ ಪಟೇಲ್ ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಪವರ್‌ ಪ್ಲೇನಲ್ಲೇ ಕೇವಲ 16 ರನ್‌ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಅಮೆರಿಕ ತಂಡಕ್ಕೆ, ಐದನೇ ವಿಕೆಟ್‌ಗೆ ಗಜಾನಂದ್ ಸಿಂಗ್ ಹಾಗೂ ಸುಶಾಂತ್ ಮೊದಾನಿ ಶತಕದ ಜತೆಯಾಟವಾಡುವ ಮೂಲಕ ಆಸರೆಯಾದರು. 5ನೇ ವಿಕೆಟ್‌ಗೆ ಈ ಜೋಡಿ 116 ರನ್‌ಗಳ ಜತೆಯಾಟ ನಿಭಾಯಿಸಿತು. ಅಂತಿಮವಾಗಿ ಅಮೆರಿಕ ತಂಡವು 6 ವಿಕೆಟ್ ಕಳೆದುಕೊಂಡು 188 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಐರ್ಲೆಂಡ್ ತಂಡದ ಮಧ್ಯಮ ವೇಗಿ ಬ್ಯಾರಿ ಮೆಕ್‌ಕಾರ್ಥಿ 30 ರನ್‌ ನೀಡಿ 4 ವಿಕೆಟ್‌ ಕಬಳಿಸಿ ಯಶಸ್ವಿ ಬೌಲರ್ ಎನಿಸಿದರು.

Scroll to load tweet…

ಇನ್ನು ಕಠಿಣ ಗುರಿ ಬೆನ್ನತ್ತಿದ ಐರ್ಲೆಂಡ್ ತಂಡವು ಸ್ಪೋಟಕ ಆರಂಭವನ್ನೇ ಪಡೆಯಿತು. ಆರಂಭಿಕ ಬ್ಯಾಟರ್‌ ಪೌಲ್ ಸ್ಟರ್ಲಿಂಗ್ ಕೇವಲ 15 ಎಸೆತಗಳಲ್ಲಿ 6 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 31 ರನ್ ಚಚ್ಚಿದರು. ಆದರೆ ಅಲ್ಲಲ್ಲಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ್ದರಿಂದ ಐರ್ಲೆಂಡ್ ತಂಡದ ರನ್ ವೇಗಕ್ಕೆ ಕಡಿವಾಣ ಬಿದ್ದಿತು. ಮೂರನೇ ವಿಕೆಟ್‌ಗೆ ಲೋರ್ಕಾನ್‌ ಟಕರ್ ಹಾಗೂ ಕುರ್ಟಿಸ್ ಕ್ಯಾಂಪರ್‌ 33 ರನ್‌ಗಳ ಜತೆಯಾಟ ನಿಭಾಯಿಸಿದರು. ಲೋರ್ಕಾನ್‌ ಟಕರ್ ಒಟ್ಟು 49 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 57 ರನ್ ಬಾರಿಸಿದರು. ಇನ್ನು ಕುರ್ಟಿಸ್‌ ಕ್ಯಾಂಪರ್‌(17) ಹಾಗೂ ಶೇನ್‌ ಗೆಕಾಟೆ(19) ಟಕರ್‌ಗೆ ಉತ್ತಮ ಸಾಥ್ ನೀಡಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

Ind vs SA Test Series: ಕೊಹ್ಲಿ-ರಹಾನೆವರೆಗೆ 5 ದಾಖಲೆ ಬರೆಯಲು ಸಜ್ಜಾಗಿದ್ದಾರೆ ಈ ಕ್ರಿಕೆಟಿಗರು..!

ಅಮೆರಿಕ ತಂಡದ ಪರ ಸೌರಭ್ ನೇತ್ರಾವಲ್ಕರ್, ಅಲಿ ಖಾನ್ ಹಾಗೂ ನಿಸರ್ಗ್ ಪಟೇಲ್ ತಲಾ ಎರಡು ವಿಕೆಟ್ ಪಡೆದರು. ಐರ್ಲೆಂಡ್ ಹಾಗೂ ಅಮೆರಿಕ ತಂಡಗಳ ನಡುವಿನ ಎರಡನೇ ಟಿ20 ಪಂದ್ಯವು ಗುರುವಾರ(ಡಿ.23) ನಡೆಯಲಿದ್ದು, ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಲು ಅಮೆರಿಕ ತಂಡವು ಎದುರು ನೋಡುತ್ತಿದೆ. ಇನ್ನೊಂದೆಡೆ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅರ್ಹತಾ ಸುತ್ತಿನಲ್ಲಿ ಪಾಲ್ಗೊಳ್ಳಲು ಎದುರು ನೋಡುತ್ತಿರುವ ಐರ್ಲೆಂಡ್ ತಂಡದ ಪಾಲಿಗಿದು ಎಚ್ಚರಿಕೆಯ ಘಂಟೆಯಾಗಿದೆ.

ಸಂಕ್ಷಿಪ್ತ ಸ್ಕೋರ್
ಅಮೆರಿಕ: 188/6
ಐರ್ಲೆಂಡ್: 162/6