ಪೊಚೆಫ್‌ಸ್ಟ್ರೊಮ್(ಜ.28): ಯಶಸ್ವಿ ಜೈಸ್ವಾಲ್(62), ಅಥರ್ವ ಅಂಕೋಲ್ಕರ್(55*) ಆಕರ್ಷಕ ಅರ್ಧಶತಕ ಹಾಗೂ ರವಿ ಬಿಷ್ಣೋಯಿ(30) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಕಿರಿಯರ ಟೀಂ ಇಂಡಿಯಾ ಅಂಡರ್ 19 ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 233 ರನ್ ಬಾರಿಸಿದ್ದು, ಆಸ್ಟ್ರೇಲಿಯಾಗೆ ಸ್ಫರ್ಧಾತ್ಮಕ ಗುರಿ ನೀಡಿದೆ.

ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ಬ್ಯಾಟಿಂಗ್ ಆರಂಭಿಸಿದ ಭಾರತ ಮೊದಲಿಗೆ ಎಚ್ಚರಿಕೆಯ ಆಟಕ್ಕೆ ಮುಂದಾಯಿತು. ಮೊದಲ ವಿಕೆಟ್‌ಗೆ ಯಶಸ್ವಿ ಜೈಸ್ವಾಲ್-ದಿವ್ಯಾನ್ಶ್ ಸಕ್ಸೆನಾ ಜೋಡಿ 35 ರನ್‌ಗಳ ಜತೆಯಾಟ ನಿಭಾಯಿಸಿತು. ಸಕ್ಸೇನಾ 14ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ತಿಲಕ್ ವರ್ಮಾ(2) ಹಾಗೂ ನಾಯಕ ಪ್ರಿಯಂ ಗರ್ಗ್(5) ಸಹಾ ಪೆವಿಲಿಯನ್ ಪರೇಡ್ ನಡೆಸಿದರು. ಈ ವೇಳೆ ಭಾರತ 54 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಯಿತು.

ಆಸರೆಯಾದ ಯಶಸ್ವಿ: ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ದಿಟ್ಟ ಬ್ಯಾಟಿಂಗ್ ನಡೆಸಿದ ಯಶಸ್ವಿ 82 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 62 ರನ್ ಗಳಿಸಿ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. ಮತ್ತೊಂದು ತುದಿಯಲ್ಲಿ ದೃವ್ ಜ್ವರೆಲ್ 15 ರನ್ ಬಾರಿಸುವ ಮೂಲಕ ಯಶಸ್ವಿಗೆ ಉತ್ತಮ ಸಾಥ್ ನೀಡಿದರು. 31 ಓವರ್ ಅಂತ್ಯಕ್ಕೆ ಭಾರತ 5 ವಿಕೆಟ್ ಕಳೆದುಕೊಂಡು ಕೇವಲ 114 ರನ್ ಬಾರಿಸಿತ್ತು.
ಮಾನ ಕಾಪಾಡಿದ ಆಲ್ರೌಂಡರ್ಸ್: ಒಂದು ಹಂತದಲ್ಲಿ ಕಿರಿಯರ ಟೀಂ ಇಂಡಿಯಾ 150 ರನ್ ಬಾರಿಸುವುದು ಕಷ್ಟವೇನೋ ಎನ್ನುವಂತಾಗಿತ್ತು. ಆದರೆ ಕೆಳ ಕ್ರಮಾಂಕದಲ್ಲಿ ಸಿದ್ದೇಶ ವೀರ್ 25 ಹಾಗೂ ಅಥರ್ವ ಅಂಕೋಲ್ಕರ್(55*) ಮತ್ತು ರವಿ ಬಿಷ್ಣೋಯಿ(30) ಅತ್ಯುತ್ತಮ ಜತೆಯಾಟದ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

ಸಂಕ್ಷಿಪ್ತ ಸ್ಕೋರ್:

ಭಾರತ: 233/9
ಯಶಸ್ವಿ ಜೈಸ್ವಾಲ್: 62
ಮೋರ್ಫೆ: 40/2