ಚೊಚ್ಚಲ ಆವೃತ್ತಿಯ ಅಂಡರ್ 19 ಮಹಿಳಾ ವಿಶ್ವಕಪ್ ಇಂದಿನಿಂದ ಆರಂಭಭಾರತ ತಂಡವನ್ನು ಮುನ್ನಡೆಸಲಿರುವ ಶಫಾಲಿ ವರ್ಮಾಭಾರತ ಸೇರಿ 16 ತಂಡಗಳು ಪ್ರಶಸ್ತಿಗಾಗಿ ಕಾದಾಟ

ಬೆನೋನಿ(ದ.ಆಫ್ರಿಕಾ): ಚೊಚ್ಚಲ ಆವೃತ್ತಿಯ ಐಸಿಸಿ ಅಂಡರ್‌-19 ಮಹಿಳಾ ಟಿ20 ವಿಶ್ವಕಪ್‌ಗೆ ವೇದಿಕೆ ಸಜ್ಜುಗೊಂಡಿದ್ದು, ಭಾರತ ಸೇರಿ 16 ತಂಡಗಳ ನಡುವಿನ ಕಾದಾಟಕ್ಕೆ ಶನಿವಾರ ಚಾಲನೆ ಸಿಗಲಿದೆ. ದ.ಆಫ್ರಿಕಾದ ಪಾಚೆಫ್‌ಸ್ಟ್ರೋಮ್‌ ಹಾಗೂ ಬೆನೋನಿಯ ಒಟ್ಟು 4 ಕ್ರೀಡಾಂಗಣಗಳು ಟೂರ್ನಿಗೆ ಆತಿಥ್ಯ ವಹಿಸಲಿವೆ. 

ಜನವರಿ 29ರ ವರೆಗೆ ಒಟ್ಟು 16 ದಿನಗಳ ಕಾಲ 41 ಪಂದ್ಯಗಳು ನಡೆಯಲಿವೆ. ಆಸ್ಪ್ರೇಲಿಯಾ, ಇಂಗ್ಲೆಂಡ್‌ ಸೇರಿ 9 ಪೂರ್ಣ ಸದಸ್ಯತ್ವದ ದೇಶಗಳು ನೇರವಾಗಿ ಟೂರ್ನಿಗೆ ಪ್ರವೇಶಿಸಿವೆ. ಉಳಿದ 5 ತಂಡಗಳು ಅರ್ಹತಾ ಸುತ್ತಿನ ಮೂಲಕ ಟೂರ್ನಿಗೆ ಕಾಲಿಟ್ಟಿವೆ. ಟೂರ್ನಿಯಲ್ಲಿ ತಲಾ 4 ತಂಡಗಳ 4 ಗುಂಪುಗಳನ್ನಾಗಿ ವಿಂಗಡಿಸಲಾಗಿದ್ದು, ‘ಡಿ’ ಗುಂಪಿನಲ್ಲಿರುವ ಶಫಾಲಿ ವರ್ಮಾ ನಾಯಕತ್ವದ ಭಾರತ ಶನಿವಾರ ಆತಿಥೇಯ ದ.ಆಫ್ರಿಕಾ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಬಳಿಕ ಜನವರಿ 16ಕ್ಕೆ ಯುಎಇ, ಜನವರಿ 18ಕ್ಕೆ ಸ್ಕಾಟ್ಲೆಂಡ್‌ ತಂಡಗಳ ವಿರುದ್ಧ ಸೆಣಸಾಡಲಿದೆ.

ಟೂರ್ನಿ ಮಾದರಿ ಹೇಗೆ?

ಗುಂಪು ಹಂತದಲ್ಲಿ ಪ್ರತಿ ತಂಡಗಳು 3 ಪಂದ್ಯಗಳನ್ನಾಡಲಿದ್ದು, ಪ್ರತಿ ಗುಂಪಿನ ಅಗ್ರ 3 ತಂಡಗಳು ‘ಸೂಪರ್‌ 6’ ಹಂತ ಪ್ರವೇಶಿಸಲಿವೆ. ಈ ಹಂತದಲ್ಲಿ ತಲಾ 6 ತಂಡಗಳ 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಅಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ.

ಅಂಡರ್‌-19 ವಿಶ್ವಕಪ್‌: ಭಾರತಕ್ಕೆ ಸ್ಪೋಟಕ ಬ್ಯಾಟರ್ ಶಫಾಲಿ ವರ್ಮಾ ನಾಯಕಿ

ಭಾರತದ ವೇಳಾಪಟ್ಟಿ(ಗುಂಪು ಹಂತ)

ದಿನಾಂಕ ಪಂದ್ಯ ಸಮಯ

ಜ.14 ಭಾರತ-ದ.ಆಫ್ರಿಕಾ ಸಂಜೆ 5.15ಕ್ಕೆ

ಜ.16 ಭಾರತ-ಯುಎಇ ಮಧ್ಯಾಹ್ನ 1.30ಕ್ಕೆ

ಜ.18 ಭಾರತ-ಸ್ಕಾಟ್ಲೆಂಡ್‌ ಸಂಜೆ 5.15ಕ್ಕೆ

*ನೇರ ಪ್ರಸಾರ: ಫ್ಯಾನ್‌ ಕೋಡ್‌ ಆ್ಯಪ್‌

ಅಂಡರ್ 19 ಮಹಿಳಾ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಹೀಗಿದೆ ನೋಡಿ

ಶಫಾಲಿ ವರ್ಮಾ(ನಾಯಕಿ), ಶ್ವೇತಾ ಶೆರಾವತ್(ಉಪನಾಯಕಿ), ರಿಚಾ ಘೋಷ್(ವಿಕೆಟ್ ಕೀಪರ್), ಜಿ. ತ್ರಿಶಾ, ಸೌಮ್ಯ ತಿವಾರಿ, ಸೋನಿಯಾ ಮೆಂದಿಯಾ, ಹುರ್ಲೆ ಗಾಲಾ, ರಿಷಿತಾ ಬಸು(ವಿಕೆಟ್ ಕೀಪರ್), ಸೋನಂ ಯಾದವ್, ಮನ್ನತ್ ಕಶ್ಯಪ್, ಅರ್ಚನಾ ದೇವಿ, ಪ್ರಸವಿ ಚೋಪ್ರಾ, ತಿಥಾಸ್, ಫಲಕ್ ನಾಜ್, ಶಬ್ನನಂ ಎಂ ಡಿ.

ಅಂಧ ಮಹಿಳೆಯರ ಟಿ20: ಕರ್ನಾಟಕ ರನ್ನರ್‌-ಅಪ್‌

ಬೆಂಗಳೂರು: 3ನೇ ಆವೃತ್ತಿಯ ಅಂಧ ಮಹಿಳೆಯರ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಕರ್ನಾಟಕ ರನ್ನರ್‌-ಅಪ್‌ ಸ್ಥಾನ ಪಡೆದಿದೆ. ಶುಕ್ರವಾರ ನಡೆದ ಫೈನಲ್‌ನಲ್ಲಿ ರಾಜ್ಯ ತಂಡ ಒಡಿಶಾ ವಿರುದ್ಧ 8 ವಿಕೆಟ್‌ ಸೋಲನುಭವಿಸಿತು. ಚೊಚ್ಚಲ ಆವೃತ್ತಿಯಲ್ಲೂ ರಾಜ್ಯ ತಂಡ ಒಡಿಶಾ ವಿರುದ್ಧ ಫೈನಲ್‌ನಲ್ಲಿ ಸೋತಿತ್ತು. ಆದರೆ ಕಳೆದ ಆವೃತ್ತಿಯಲ್ಲಿ ಒಡಿಶಾವನ್ನು ಸೋಲಿಸಿ ಪ್ರಶಸ್ತಿ ಗೆದ್ದಿತ್ತು. ಫೈನಲ್‌ನಲ್ಲಿ ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ 16.3 ಓವರ್‌ಗಳಲ್ಲಿ 80 ರನ್‌ಗೆ ಆಲೌಟಾಯಿತು. ವರ್ಷಾ(18), ರೇಣುಕಾ(12) ಹೊರತುಪಡಿಸಿ ಉಳಿದವರು ಎರಡಂಕಿ ಮೊತ್ತ ಗಳಿಸಲಿಲ್ಲ. ಸುಲಭ ಗುರಿ ಬೆನ್ನತ್ತಿದ ಒಡಿಶಾ 12.2 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು ಜಯಗಳಿಸಿತು.