2007ರ ಚೊಚ್ಚಲ ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡವು ಕೀನ್ಯಾ ವಿರುದ್ಧ 260 ರನ್ ಗಳಿಸಿತ್ತು, ಇದು ಇಂದಿಗೂ ಟೂರ್ನಿಯ ಇತಿಹಾಸದಲ್ಲಿ ಅತಿಹೆಚ್ಚು ಸ್ಕೋರ್ ಆಗಿದೆ. ಸನತ್ ಜಯಸೂರ್ಯ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಬೃಹತ್ ಮೊತ್ತ ಸಾಧ್ಯವಾಯಿತು. ಈ ದಾಖಲೆ ಇದುವರೆಗೂ ಬ್ರೇಕ್ ಆಗಿಲ್ಲ.
ಟಿ20 ವಿಶ್ವಕಪ್ ಇತಿಹಾಸದಲ್ಲಿ ಯಾರಿಂದಲೂ ಮುಟ್ಟಲು ಸಾಧ್ಯವಾಗದ ಒಂದು ದಾಖಲೆ ಇದೆ. ವಿಶೇಷ ಅಂದ್ರೆ, ಈ ರೆಕಾರ್ಡ್ ಆಗಿದ್ದು 2007ರ ಮೊದಲ ಟೂರ್ನಿಯಲ್ಲೇ. ಅಲ್ಲಿಂದ ಇಲ್ಲಿಯವರೆಗೆ ಒಂಬತ್ತು ಆವೃತ್ತಿಗಳು ಮುಗಿದಿವೆ. ಆದರೂ ಯಾವ ತಂಡಕ್ಕೂ ಈ ದಾಖಲೆ ಮುರಿಯಲು ಆಗಿಲ್ಲ. ಟಿ20 ಕ್ರಿಕೆಟ್ ಇಷ್ಟೊಂದು ವೇಗ ಪಡೆದಿರುವ ಈ ಕಾಲದಲ್ಲೂ ಅದು ಸಾಧ್ಯವಾಗಿಲ್ಲ.
ಈಗಂತೂ ಐಪಿಎಲ್‌ನಂತಹ ಟೂರ್ನಿಗಳಲ್ಲಿ 250 ರನ್ ಗಳಿಸೋದು ಮಾಮೂಲಿ ಆಗ್ಬಿಟ್ಟಿದೆ. ಆದರೆ 2007ರ ಟಿ20 ವಿಶ್ವಕಪ್‌ನಲ್ಲಿ ಈ ಸ್ಕೋರ್ ದಾಖಲಾಗಿತ್ತು, ಆಮೇಲೆ ವಿಶ್ವಕಪ್‌ನಲ್ಲಿ ಮತ್ತೆಂದೂ ಇಂಥಾ ಸ್ಕೋರ್ ಬಂದಿಲ್ಲ. ಈ ಅದ್ಭುತ ಸಾಧನೆ ಮಾಡಿದ್ದು ಆಸ್ಟ್ರೇಲಿಯಾ, ಭಾರತ ಅಥವಾ ವೆಸ್ಟ್ ಇಂಡೀಸ್ ಅಲ್ಲ, ಬದಲಿಗೆ ಶ್ರೀಲಂಕಾ ತಂಡ.
ಟಿ20 ವಿಶ್ವಕಪ್‌ನಲ್ಲಿ ಕೀನ್ಯಾ ಎದುರು ಹೊಸ ದಾಖಲೆ ಬರೆದಿದ್ದ ಲಂಕಾ!
ಅಂದು ಶ್ರೀಲಂಕಾ ತಂಡ ಕೀನ್ಯಾ ವಿರುದ್ಧ ಬರೋಬ್ಬರಿ 260 ರನ್ ಗಳಿಸಿತ್ತು. ವಿಶೇಷ ಅಂದ್ರೆ, ತಂಡದಲ್ಲಿ ಒಬ್ಬರೂ ಸೆಂಚುರಿ ಹೊಡೆದಿರಲಿಲ್ಲ. ದುರ್ಬಲ ತಂಡವಾದ ಕೀನ್ಯಾ ಬೌಲರ್‌ಗಳನ್ನು ಲಂಕಾ ಬ್ಯಾಟ್ಸ್‌ಮನ್‌ಗಳು ಮನಬಂದಂತೆ ದಂಡಿಸಿದ್ದರು.
ಸನತ್ ಜಯಸೂರ್ಯ ಕೇವಲ 44 ಎಸೆತಗಳಲ್ಲಿ 88 ರನ್ ಗಳಿಸಿ ಟಾಪ್ ಸ್ಕೋರರ್ ಆದರು. ಅವರಿಗೆ ಮಹೇಲಾ ಜಯವರ್ಧನೆ (27 ಎಸೆತಗಳಲ್ಲಿ 65 ರನ್), ಸಂಗಕ್ಕಾರ (18 ಎಸೆತಗಳಲ್ಲಿ 30 ರನ್) ಮತ್ತು ಜೆಹಾನ್ ಮುಬಾರಕ್ (13 ಎಸೆತಗಳಲ್ಲಿ 46 ರನ್) ಉತ್ತಮ ಸಾಥ್ ನೀಡಿದರು. ಅದರಲ್ಲೂ ಮುಬಾರಕ್ ಅವರ ಸ್ಪೋಟಕ ಫಿನಿಶಿಂಗ್‌ನಿಂದಾಗಿ ಲಂಕಾ ಸ್ಕೋರ್ 250ರ ಗಡಿ ದಾಟಲು ಸಾಧ್ಯವಾಯಿತು. ಆ ಪಂದ್ಯದ ಬ್ಯಾಟಿಂಗ್ ಅಬ್ಬರ ನಿಜಕ್ಕೂ ಮರೆಯಲಾಗದ್ದು.
ಬೃಹತ್ ಮೊತ್ತ ಬೆನ್ನತ್ತಿದ ಕೀನ್ಯಾ ತಂಡ ಕೇವಲ 88 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಶ್ರೀಲಂಕಾ 172 ರನ್‌ಗಳ ಭರ್ಜರಿ ಜಯ ಸಾಧಿಸಿತು. ರನ್‌ಗಳ ಅಂತರದಲ್ಲಿ ಇದು ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತಿದೊಡ್ಡ ಗೆಲುವಾಗಿದೆ. 2026ರ ಟಿ20 ವಿಶ್ವಕಪ್‌ನಲ್ಲಾದರೂ ಈ ದಾಖಲೆ ಮುರಿಯುತ್ತಾ ಅಂತಾ ಕ್ರಿಕೆಟ್ ಪ್ರೇಮಿಗಳು ಕಾಯುತ್ತಿದ್ದಾರೆ.
2026ರ ಐಸಿಸಿ ಟಿ20 ವಿಶ್ವಕಪ್ ಬಗ್ಗೆ:
10ನೇ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯ ವಹಿಸಿವೆ. ಈ ಬಾರಿಯ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಭಾರತ, ಮಾಜಿ ಚಾಂಪಿಯನ್‌ಗಳಾದ ಆಸ್ಟ್ರೇಲಿಯಾ, ಇಂಗ್ಲೆಂಡ್, ಪಾಕಿಸ್ತಾನ, ವೆಸ್ಟ್ ಇಂಡೀಸ್ ಸೇರಿದಂತೆ 20 ತಂಡಗಳು ಪಾಲ್ಗೊಳ್ಳುತ್ತಿವೆ. ವಿವಾದಗಳ ಗೂಡಾಗಿರುವ ಈ ಟೂರ್ನಿಯಲ್ಲಿ ಬಾಂಗ್ಲಾದೇಶ ತಂಡವು ಕೊನೆಯ ಕ್ಷಣದಲ್ಲಿ ಭಾರತದಲ್ಲಿ ಭದ್ರತೆಯ ಸಮಸ್ಯೆಯಿದೆ ಎಂದು ನೆಪವೊಡ್ಡಿ ಟೂರ್ನಿಯಿಂದ ಹಿಂದೆ ಸರಿದಿದೆ. ಬಾಂಗ್ಲಾದೇಶ ಬದಲಿಗೆ ಇದೀಗ ಸ್ಕಾಟ್ಲೆಂಡ್ ತಂಡವು ವಿಶ್ವಕಪ್ ಟೂರ್ನಿಗೆ ಎಂಟ್ರಿಕೊಟ್ಟಿದೆ.
ಇನ್ನೊಂದೆಡೆ ಪಾಕಿಸ್ತಾನ ತಂಡವು ತನ್ನ ಪಾಲಿನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡುತ್ತಿದೆ. ಆದರೆ ಬಾಂಗ್ಲಾದೇಶಕ್ಕೆ ಭಾರತದಾಚೆ ಪಂದ್ಯ ಆಯೋಜನೆಗೆ ಬಿಸಿಸಿಐ ಹಾಗೂ ಐಸಿಸಿ ಅವಕಾಶ ಮಾಡಿಕೊಟ್ಟಿಲ್ಲ ಎಂದು ಪ್ರತಿಭಟನಾ ರೂಪದಲ್ಲಿ ಇದೀಗ ಪಾಕಿಸ್ತಾನ ತಂಡವು ಭಾರತ ಎದುರು ಪಂದ್ಯವನ್ನಾಡುವುದಿಲ್ಲ ಎಂದು ಪಾಕಿಸ್ತಾನ ಸರ್ಕಾರ ಘೋಷಿಸಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವು ಫೆಬ್ರವರಿ 15ಕ್ಕೆ ನಿಗದಿಯಾಗಿದೆ. ಕೊಲಂಬೋದಲ್ಲಿ ನಿಗದಿಯಾಗಿರುವ ಈ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಭಾರತ ಎದುರು ಕಣಕ್ಕಿಳಿಯುತ್ತಾ ಅಥವಾ ಇಲ್ಲವೇ ಎನ್ನುವ ಕುತೂಹಲಕ್ಕೆ ಸದ್ಯಕ್ಕೆ ಉತ್ತರ ಸಿಕ್ಕಿಲ್ಲ



