ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಗೆಲುವಿನ ನಾಗಾಲೋಟ ಮುಂದುವರೆಸಿದೆ. ನ್ಯೂಜಿಲೆಂಡ್ ತಂಡವನ್ನು ಅನಾಯಾಸವಾಗಿ ಮಣಿಸುವ ಮೂಲಕ ಗ್ರೂಪ್ ಹಂತದಲ್ಲಿ ಅಗ್ರಸ್ಥಾನಕ್ಕೇರಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..

ಬ್ಲೂಮ್‌ಫಾಂಟೈನ್‌(ಜ.25): ಹಾಲಿ ಚಾಂಪಿಯನ್‌ ಭಾರತ, ಅಂಡರ್‌-19 ವಿಶ್ವಕಪ್‌ನ ‘ಎ’ ಗುಂಪಿನಲ್ಲಿ ಮೂರು ಗೆಲುವುಗಳೊಂದಿಗೆ ಅಗ್ರಸ್ಥಾನ ಪಡೆದು ಅಜೇಯವಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ಶುಕ್ರವಾರ ನಡೆದ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಡಕ್ವರ್ತ್ ಲೂಯಿಸ್‌ ನಿಯಮದನ್ವಯ 44 ರನ್‌ಗಳ ಗೆಲುವು ಸಾಧಿಸಿತು.

Scroll to load tweet…

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಲು ಇಳಿದ ಭಾರತ 21 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 103 ರನ್‌ ಗಳಿಸಿದ್ದಾಗ ಆರಂಭವಾದ ಮಳೆ, 3 ಗಂಟೆಗಳ ಕಾಲ ಪಂದ್ಯ ಸ್ಥಗಿತಗೊಳಿಸಿತು. ಬಳಿಕ ಪಂದ್ಯವನ್ನು ತಲಾ 23 ಓವರ್‌ಗಳಿಗೆ ಇಳಿಸಲಾಯಿತು. ಭಾರತ ವಿಕೆಟ್‌ ನಷ್ಟವಿಲ್ಲದೆ 115 ರನ್‌ ಗಳಿಸಿತು. ಡಕ್ವತ್‌ರ್‍ ಲೂಯಿಸ್‌ ನಿಯಮದನ್ವಯ ನ್ಯೂಜಿಲೆಂಡ್‌ಗೆ 23 ಓವರ್‌ಗಳಲ್ಲಿ 193 ರನ್‌ ಗುರಿ ನೀಡಲಾಯಿತು. ಕಿವೀಸ್‌ ಪಡೆ 21 ಓವರ್‌ಗಳಲ್ಲಿ 147 ರನ್‌ಗೆ ಆಲೌಟ್‌ ಆಗಿ, ‘ಎ’ ಗುಂಪಿನಲ್ಲಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟಿತು.

ಅಂಡರ್‌-19 ವಿಶ್ವಕಪ್‌: ಅಗ್ರಸ್ಥಾನಕ್ಕೆ ಭಾರತ-ಕಿವೀಸ್‌ ಫೈಟ್‌!

ಬೃಹತ್‌ ಗುರಿ ಬೆನ್ನತ್ತಿದ ನ್ಯೂಜಿಲೆಂಡ್‌ ಪರ ಆರಂಭಿಕ ಬ್ಯಾಟ್ಸ್‌ಮನ್‌ ರೈಸ್‌ ಮರಿಯು(42) ಹಾಗೂ ಫಗ್ರ್ಯುಸ್‌ ಲೆಲ್ಮನ್‌ (31) ಹೊರತು ಪಡಿಸಿ ಉಳಿದ್ಯಾವ ಬ್ಯಾಟ್ಸ್‌ಮನ್‌ಗಳಿಂದ ಹೋರಾಟ ಕಂಡುಬರಲಿಲ್ಲ. ಭಾರತದ ಸ್ಪಿನ್ನರ್‌ಗಳಾದ ರವಿ ಬಿಶ್ನಾಯ್‌ 4 ಹಾಗೂ ಅಥರ್ವ ಅಂಕೋಲೆಕರ್‌ 3 ವಿಕೆಟ್‌ ಕಬಳಿಸಿದರು.

ಮೊದಲು ಬ್ಯಾಟ್‌ ಮಾಡಿದ ಭಾರತದ ಪರ ಯಶಸ್ವಿ ಜೈಸ್ವಾಲ್‌ 57 ಹಾಗೂ ದಿವ್ಯಾನ್‌್ಶ ಸಕ್ಸೇನಾ 52 ರನ್‌ ಗಳಿಸಿ ತಂಡ ಉತ್ತಮ ಮೊತ್ತ ದಾಖಲಿಸಲು ನೆರವಾದರು.

ಸ್ಕೋರ್‌: ಭಾರತ 23 ಓವರಲ್ಲಿ 115/0 (ಯಶಸ್ವಿ 57, ದಿವ್ಯಾನ್ಶ್ 52)

ನ್ಯೂಜಿಲೆಂಡ್‌ 21 ಓವರಲ್ಲಿ 147/10 (ಮರಿಯು 42, ರವಿ 4-30, ಅಥರ್ವ 3-28)