Asianet Suvarna News Asianet Suvarna News

Ind vs SA: ಇಂಡೋ-ಆಫ್ರಿಕಾ 4ನೇ ಟಿ20 ಪಂದ್ಯದಲ್ಲಿ ಹರಿದಾಡಿದ ಟಾಪ್ 10 ಮೀಮ್ಸ್‌ಗಳಿವು..!

4ನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಬಗ್ಗುಬಡಿದ ಟೀಂ ಇಂಡಿಯಾ
5 ಪಂದ್ಯಗಳ ಟಿ20 ಸರಣಿಯಲ್ಲಿ 2-2ರ ಸಮಬಲ ಸಾಧಿಸಿದ ಭಾರತ
ಸೋಷಿಯಲ್‌ ಮೀಡಿಯಾದಲ್ಲಿ ಧೂಳೆಬ್ಬಿಸಿದ ಮೀಮ್ಸ್‌ಗಳು

Top 10 funny memes from the India vs South Africa 4th T20I in Rajkot kvn
Author
Bengaluru, First Published Jun 18, 2022, 1:51 PM IST | Last Updated Jun 18, 2022, 1:51 PM IST

ಬೆಂಗಳೂರು: ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವಿನ ನಾಲ್ಕನೇ ಟಿ20 ಪಂದ್ಯದಲ್ಲಿ ರಿಷಭ್ ಪಂತ್ (Rishabh Pant) ನೇತೃತ್ವದ ಟೀಂ ಇಂಡಿಯಾ 82 ರನ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ರಾಜ್‌ಕೋಟ್‌ನಲ್ಲಿರುವ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ತೋರಿದ ಭಾರತ ತಂಡವು ಅಮೋಘ ಗೆಲುವು ದಾಖಲಿಸುವ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ 2-2 ಅಂತರದ ಸಮಬಲ ಸಾಧಿಸಿದೆ. ಇದೀಗ ಜೂನ್ 19ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿರುವ (Bengaluru M Chinnaswamy Stadium) 5ನೇ ಹಾಗೂ ನಿರ್ಣಾಯಕ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ನಾಲ್ಕನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ (Temba Bavuma) ಮೊದಲ ಫೀಲ್ಡಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಪಂದ್ಯದ ಮೊದಲ 10 ಓವರ್‌ಗಳವರೆಗೆ ಆತಿಥೇಯ ಟೀಂ ಇಂಡಿಯಾ (Team India) ಎದುರು ಹರಿಣಗಳ ಪಡೆ ಪ್ರಾಬಲ್ಯ ಮೆರೆಯುವಲ್ಲಿ ಯಶಸ್ವಿಯಾಗಿತ್ತು. ಅಗ್ರಕ್ರಮಾಂಕದ ಬ್ಯಾಟರ್‌ಗಳು ದೊಡ್ಡ ಇನಿಂಗ್ಸ್‌ ಕಟ್ಟದಂತೆ ನೋಡಿಕೊಳ್ಳುವಲ್ಲಿ ದಕ್ಷಿಣ ಆಫ್ರಿಕಾ ಬೌಲರ್‌ಗಳು ಯಶಸ್ವಿಯಾದರು. ಕಳೆದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ ಋತುರಾಜ್ ಗಾಯಕ್ವಾಡ್ 5 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೇ, ಮತ್ತೋರ್ವ ಆರಂಭಿಕ ಬ್ಯಾಟರ್ ಇಶಾನ್ ಕಿಶನ್ (Ishan Kishan) ಬ್ಯಾಟಿಂಗ್ ಕೇವಲ 17 ರನ್‌ಗಳಿಗೆ ಸೀಮಿತವಾಯಿತು. ಇನ್ನು ಶ್ರೇಯಸ್ ಅಯ್ಯರ್(4) ಹಾಗೂ ನಾಯಕ ರಿಷಭ್ ಪಂತ್(17) ಕೂಡಾ ಜವಾಬ್ದಾರಿಯುತ ಪ್ರದರ್ಶನ ತೋರಲು ವಿಫಲವಾದರು.

ಡಿಕೆ-ಹಾರ್ದಿಕ್ ಜುಗಲ್ಬಂದಿ: ಒಂದು ಹಂತದಲ್ಲಿ 81 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಟೀಂ ಇಂಡಿಯಾಗೆ 5ನೇ ವಿಕೆಟ್‌ಗೆ ಹಾರ್ದಿಕ್ ಪಾಂಡ್ಯ (Hardik Pandya) ಹಾಗೂ ದಿನೇಶ್ ಕಾರ್ತಿಕ್ (Dinesh Karthik) ಜೋಡಿ 65 ರನ್‌ಗಳ ಜತೆಯಾಟವಾಡುವ ಮೂಲಕ ಆಸರೆಯಾದರು. ಹಾರ್ದಿಕ್ ಪಾಂಡ್ಯ 46 ರನ್ ಸಿಡಿಸಿದರೇ, ದಿನೇಶ್ ಕಾರ್ತಿಕ್ ಕೇವಲ 27 ಎಸೆತಗಳಲ್ಲಿ 55 ರನ್ ಚಚ್ಚಿದರು. ಅಂತಿಮವಾಗಿ ಟೀಂ ಇಂಡಿಯಾ 6 ವಿಕೆಟ್ ಕಳೆದುಕೊಂಡು 169 ರನ್ ಗಳಿಸಲಷ್ಟೇ ಶಕ್ತವಾಯಿತು.

ಇನ್ನು ಭಾರತ ನೀಡಿದ್ದ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಹರಿಣಗಳ ಪಡೆ ಆವೇಶ್ ಖಾನ್ (Avesh Khan) ಹಾಗೂ ಯುಜುವೇಂದ್ರ ಚಹಲ್ ಮಾರಕ ದಾಳಿಗೆ ತತ್ತರಿಸಿ ಹೋಯಿತು. ದಕ್ಷಿಣ ಆಫ್ರಿಕಾ ತಂಡದ ಪರ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್(14), ರಾಸ್ಸಿ ವ್ಯಾನ್ ಡರ್ ಡುಸೇನ್(20) ಹಾಗೂ ಮಾರ್ಕೊ ಯಾನ್ಸೆನ್(12) ಉಳಿದ್ಯಾವ ಬ್ಯಾಟರ್‌ಗಳು ಸಹಾ ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ. ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡವು 16.5 ಓವರ್‌ಗಳಲ್ಲಿ 87 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಹೀನಾಯ ಸೋಲು ಅನುಭವಿಸಿತು. ದಕ್ಷಿಣ ಆಫ್ರಿಕಾ ಎದುರು ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್‌ಗಳು ಹರಿದಾಡಲಾರಂಭಿಸಿವೆ.

ಕಾಮೆಂಟೇಟರ್ ಬ್ಯಾಟ್ ಮಾಡಬಲ್ಲರು..! ದಿನೇಶ್ ಕಾರ್ತಿಕ್ ಗುಣಗಾನ ಮಾಡಿದ ವಾಸೀಂ ಜಾಫರ್

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಒಂದಿಲ್ಲೊಂದು ವಿಚಾರದಲ್ಲಿ ಟ್ವೀಟ್ ಮಾಡುವ ವಾಸೀಂ ಜಾಫರ್ (Wasim Jaffer) ಸೇರಿದಂತೆ ಹಲವು ಕ್ರಿಕೆಟ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಮೀಮ್ಸ್‌ಗಳನ್ನು ಹರಿಬಿಟ್ಟಿದ್ದಾರೆ. ನಕ್ಕು ಹಗುರಾಗಬೇಕಿದ್ದರೇ ಈ ಮೀಮ್ಸ್‌ಗಳನ್ನು ನೋಡಿ ಎಂಜಾಯ್ ಮಾಡಿ...

Latest Videos
Follow Us:
Download App:
  • android
  • ios