ಅಹಮದಾಬಾದ್(ಮಾ.04)‌: ಸ್ಪಿನ್‌ ಪಿಚ್‌ಗಳ ಬಗ್ಗೆ ಅನಗತ್ಯ ಚರ್ಚೆ ನಡೆಯುತ್ತಿದೆ. ಬ್ಯಾಟ್ಸ್‌ಮನ್‌ಗಳು ಟೆಸ್ಟ್‌ ಮಾದರಿಯನ್ನು ಮರೆಯಬಾರದು ಎಂದು ಭಾರತದ ನಾಯಕ ವಿರಾಟ್‌ ಕೊಹ್ಲಿ ಹೇಳಿದ್ದಾರೆ. 

ನಾಲ್ಕನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ, ‘ಟೆಸ್ಟ್‌ ಕ್ರಿಕೆಟ್‌ನಲ್ಲಿ ರಕ್ಷಣಾತ್ಮಕ ಆಟಕ್ಕೆ ಹೆಚ್ಚು ಬೆಲೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಂಡು ಆಡಬೇಕು. ಇತ್ತೀಚೆಗೆ ತಂಡಗಳು ವೇಗವಾಗಿ 300-350 ರನ್‌ ಕಲೆಹಾಕಬೇಕು ಎನ್ನುವ ಮನಸ್ಥಿತಿಯೊಂದಿಗೆ ಆಡುತ್ತಿವೆ. 4-5 ಸೆಷನ್‌ ಬ್ಯಾಟ್‌ ಮಾಡಿ ರನ್‌ ಕಲೆಹಾಕಬೇಕು ಎನ್ನುವ ಕಡೆ ಗಮನ ಹರಿಸುತ್ತಿಲ್ಲ’ ಎಂದಿದ್ದಾರೆ. ‘ಕಳೆದ ವರ್ಷ ನ್ಯೂಜಿಲೆಂಡ್‌ನಲ್ಲಿ ನಾವು 36 ಓವರಲ್ಲಿ ಆಲೌಟ್‌ ಆದಾಗ ಎಲ್ಲರೂ ಭಾರತ ಕಳಪೆ ಬ್ಯಾಟಿಂಗ್‌ನಿಂದಾಗಿ ಸೋಲುಂಡಿತು ಎಂದರೆ ಹೊರತು, ಯಾರೂ ಪಿಚ್‌ ಬಗ್ಗೆ ಮಾತನಾಡಲಿಲ್ಲ’ ಎಂದು ಕೊಹ್ಲಿ ಹೇಳಿದರು.

ಇಂಡೋ-ಆಂಗ್ಲೋ ಟೆಸ್ಟ್: ಬಾಕ್ಸಿಂಗ್‌ ಪಂದ್ಯಕ್ಕೆ ಹೋಲಿಸಿದ ಐಸಿಸಿ!

ವಿಶ್ವದ ಅತಿದೊಡ್ಡ ಕ್ರಿಕೆಟ್‌ ಸ್ಟೇಡಿಯಂ ಎನಿಸಿಕೊಂಡಿರುವ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯ ಕೇವಲ ಎರಡೇ ದಿನಕ್ಕೆ ಮುಕ್ತಾಯವಾಗಿತ್ತು. 40 ವಿಕೆಟ್‌ಗಳ ಪೈಕಿ ಬರೋಬ್ಬರಿ 38 ವಿಕೆಟ್‌ಗಳನ್ನು ಸ್ಪಿನ್ನರ್‌ಗಳೇ ಕಬಳಿಸಿದ್ದರು. ಪಿಂಕ್ ಬಾಲ್ ಟೆಸ್ಟ್‌ ಎರಡೇ ದಿನಕ್ಕೆ ಮುಕ್ತಾಯವಾದ ಬೆನ್ನಲ್ಲೇ ಭಾರತದ ಪಿಚ್‌ ಬಗ್ಗೆ ಹಲವು ಕ್ರಿಕೆಟ್ ಪಂಡಿತರು ಟೀಕೆಗಳನ್ನು ಮಾಡಿದ್ದರು.

ಪಂದ್ಯ ಮುಕ್ತಾಯದ ಬಳಿಕ ಪಿಚ್‌ ಬಗ್ಗೆ ಪ್ರತಿಕ್ರಿಯಿಸಿದ್ದ ನಾಯಕ ವಿರಾಟ್ ಕೊಹ್ಲಿ, ಎರಡು ತಂಡದ ಬ್ಯಾಟ್ಸ್‌ಮನ್‌ಗಳ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ ಎಂದು ಹೇಳುವ ಮೂಲಕ ಪಿಚ್‌ ತಪ್ಪಲ್ಲ, ಬದಲಾಗಿ ಬ್ಯಾಟಿಂಗ್‌ ವೈಫಲ್ಯದಿಂದ ಪಿಂಕ್‌ ಬಾಲ್ ಟೆಸ್ಟ್ ಪಂದ್ಯ ಎರಡೇ ದಿನಕ್ಕೆ ಮುಕ್ತಾಯವಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದರು.