ಚೆನ್ನೈ(ಫೆ.12): ಕೊರೋನಾ ಸೋಂಕಿನ ಆತಂಕ ಇನ್ನೂ ದೂರವಾಗದೆ ಇರುವ ಸಮಯದಲ್ಲೇ ಕ್ರೀಡಾಂಗಣಗಳಿಗೆ ಪ್ರೇಕ್ಷಕರಿಗೆ ಪ್ರವೇಶ ನೀಡಲು ಮುಂದಾಗಿರುವ ಬಿಸಿಸಿಐ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಟಿಎನ್‌ಸಿಎಗೆ ಸೂಚಿಸಿದೆ. 

ಪ್ರೇಕ್ಷಕರು ಕ್ರೀಡಾಂಗಣಕ್ಕೆ ಪ್ರವೇಶಿಸುವ ಮೊದಲು ಅವರ ದೇಹದ ತಾಪಮಾನ ಪರೀಕ್ಷಿಸಲಾಗುತ್ತದೆ. ಬಹು ಮುಖ್ಯವಾಗಿ ಪ್ರತಿ ಬಾರಿ ಚೆಂಡು ಸಿಕ್ಸರ್‌ಗೆ ಹೋದಾಗ ಪ್ರೇಕ್ಷಕರು ಚೆಂಡನ್ನು ಮುಟ್ಟಲಿದ್ದು, ಬಳಿಕ ಅಂಪೈರ್‌ ಚೆಂಡನ್ನು ಸ್ಯಾನಿಟೈಸ್‌ ಮಾಡಲಿದ್ದಾರೆ. ಪ್ರೇಕ್ಷಕರಿಂದ ಚೆಂಡನ್ನು ಪಡೆಯುವ ಆಟಗಾರ ಸಹ ಕೈಗಳನ್ನು ಸ್ಯಾನಿಟೈಸ್‌ ಮಾಡಿಕೊಳ್ಳಬೇಕಿದೆ.

ಇದಲ್ಲದೇ, ಪ್ರೇಕ್ಷಕರ ಮೇಲೆ ನಿಗಾ ವಹಿಸಲು ಪ್ರತ್ಯೇಕ ತಂಡ ರಚಿಸಲಾಗಿದೆ. ಯಾರೇ ಕೆಮ್ಮಿದರೆ ಇಲ್ಲವೇ ಸೀನಿದರೆ ಅವರನ್ನು ತಕ್ಷಣ ಐಸೋಲೇಷನ್‌ ಕೊಠಡಿಗೆ ಕರೆದೊಯ್ಯಲಾಗುತ್ತದೆ. ಕ್ರೀಡಾಂಗಣದ ಆವರಣದಲ್ಲಿ 4 ಆ್ಯಂಬುಲೆನ್ಸ್‌ಗಳು ಇರಲಿದ್ದು, ಅಗತ್ಯ ವೈದ್ಯಕೀಯ ಸೌಲಭ್ಯಗಳು ಸಹ ಲಭ್ಯವಿರಲಿದೆ ಎಂದು ಟಿಎನ್‌ಸಿಎ ತಿಳಿಸಿದೆ.

ಭಾರತ-ಇಂಗ್ಲೆಂಡ್‌ 2ನೇ ಟೆಸ್ಟ್ ಟಿಕೆಟ್ ಸೋಲ್ಡೌಟ್‌..!

ಭಾರತ-ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್‌ ತಂಡ ಭರ್ಜರಿ ಗೆಲುವು ದಾಖಲಿಸುವ ಮೂಲಕ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ರಲ್ಲಿ ಶುಭಾರಂಭ ಮಾಡಿದೆ. ಎರಡನೇ ಟೆಸ್ಟ್‌ ಪಂದ್ಯವು ಫೆಬ್ರವರಿ 13ರಿಂದ ಚೆಪಾಕ್‌ ಮೈದಾನದಲ್ಲಿ ಆರಂಭವಾಗಲಿದೆ.