ನವದೆಹಲಿ(ಜೂ.20): ಟೀಂ ಇಂಡಿಯಾ ಕ್ರಿಕೆಟ್ ಆಟಗಾರರ ‘ಜೆಂಡರ್‌ ಸ್ವ್ಯಾಪ್‌ ಫಿಲ್ಟರ್‌’ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. 

ಪುರುಷರು ಮಹಿಳೆಯಾಗಿದ್ದರೆ ಯಾವ ರೀತಿ ಕಾಣುತ್ತಿದ್ದರು, ಮಹಿಳೆಯರು ಪುರುಷರಾಗಿದ್ದರೆ ಹೇಗೆ ಗೋಚರಿಸುತ್ತಿದ್ದರು ಎಂದು ತೋರಿಸುವ ಆ್ಯಪ್‌ ಫಿಲ್ಟರ್‌ ಇದಾಗಿದೆ. ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ, ಶಿಖರ್‌ ಧವನ್‌, ರಾಹುಲ್‌, ಧೋನಿ, ಕುಲ್ದೀಪ್‌ ಯಾದವ್‌, ಜಸ್‌ಪ್ರೀತ್‌ ಬುಮ್ರಾ, ಜಡೇಜಾ, ಹಾರ್ದಿಕ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌ ಫೋಟೋಗಳನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

ಹಿಟ್‌ ಮ್ಯಾನ್‌ಗೆ ಕ್ಯೂಟ್ ಎಂದ ಚಹಲ್:

ಎಲ್ಲಾ ಕ್ರಿಕೆಟಿಗರು ಒಬ್ಬರಿಗಿಂತ ಮತ್ತೊಬ್ಬರು ಸಖತ್ತಾಗಿಯೇ ಕಾಣುತ್ತಿದ್ದಾರೆ. ಈ ಪೈಕಿ ಗುಳಿ ಕೆನ್ನೆಗಳನ್ನು ಹೊಂದಿದ ರೋಹಿತ್ ಶರ್ಮಾ ಅವರನ್ನು ಮಣಿಕಟ್ಟು ಸ್ಪಿನ್ನರ್ ಯುಜುವೇಂದ್ರ ಚಹಲ್ ತುಂಬಾ ಚೆನ್ನಾಗಿದ್ದೀರ ಎಂದು ಟ್ವೀಟ್ ಮಾಡಿದ್ದಾರೆ. ನೀವು ನೋಡುವುದಕ್ಕೆ ತುಂಬಾ ಚೆನ್ನಾಗಿದ್ದೀರ ರೋಹಿತಾ ಶರ್ಮಾ.. ಅಣ್ಣ ಎಂದು ಚಹಲ್ ಹಿಟ್‌ಮ್ಯಾನ್ ಕಾಲೆಳೆದಿದ್ದಾರೆ.

ಕೊರೋನಾ ಭೀತಿಯ ನಡುವೆಯೇ ನಿಧಾನವಾಗಿ ಕ್ರಿಕೆಟ್ ಚಟುವಟಿಕೆಗಳು ಆರಂಭವಾಗತೊಡಗಿವೆ. ಇದೀಗ ವೆಸ್ಟ್ ಇಂಡೀಸ್ ತಂಡವು ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿದೆ. ಇನ್ನು ಬಿಸಿಸಿಐ ಕೂಡಾ ಈ ವರ್ಷ ಐಪಿಎಲ್ ಆಯೋಜಿಸುವ ಕುರಿತಂತೆ ಸಕಾರಾತ್ಮಕ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಇನ್ನು ಐಸಿಸಿ ಟಿ20 ವಿಶ್ವಕಪ್ ಭವಿಷ್ಯ ಏನು ಎನ್ನುವುದರ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಾಗಿದೆ.