* ಭಾರತ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ 436 ವಿಕೆಟ್ ಕಬಳಿಸಿದ ರವಿಚಂದ್ರನ್‌ ಅಶ್ವಿನ್‌* ಕಪಿಲ್ ದೇವ್ ದಾಖಲೆ ಅಳಸಿಹಾಕಿ ಹೊಸ ಮೈಲಿಗಲ್ಲು ನೆಟ್ಟ ಅಶ್ವಿನ್‌* ಅನಿಲ್ ಕುಂಬ್ಳೆ ದಾಖಲೆಯನ್ನು ಅಳಿಸಿ ಹಾಕ್ತಾರಾ ಆಫ್‌ಸ್ಪಿನ್ನರ್

ಮೊಹಾಲಿ(ಮಾ.07): ವಿಶ್ವ ಕ್ರಿಕೆಟ್‌ನಲ್ಲಿ ಹಾಲಿ ಅಗ್ರಮಾನ್ಯ ಆಫ್‌ ಸ್ಪಿನ್ನರ್‌ ಎನಿಸಿಕೊಂಡಿರುವ ಭಾರತದ ಆರ್‌.ಅಶ್ವಿನ್‌ (Ravichandran Ashwin) ತಮ್ಮ ಟೆಸ್ಟ್‌ ಬದುಕಿನಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ನೆಟ್ಟಿದ್ದಾರೆ. ಲಂಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ 6 ವಿಕೆಟ್‌ ಕಬಳಿಸಿದ ಅವರು ತಮ್ಮ ಒಟ್ಟಾರೆ ಗಳಿಕೆಯನ್ನು 436ಕ್ಕೇರಿಸಿಕೊಂಡಿದ್ದಾರೆ. ತನ್ಮೂಲಕ, ದಿಗ್ಗಜ ವೇಗಿ ಕಪಿಲ್‌ ದೇವ್‌ (Kapil Dev) ಅವರ 434 ವಿಕೆಟ್‌ ಸಾಧನೆಯನ್ನು ಹಿಂದಿಕ್ಕಿ ವಿಕೆಟ್‌ ಗಳಿಕೆಯಲ್ಲಿ ಭಾರತದ ನಂ.2 ಟೆಸ್ಟ್‌ ಬೌಲರ್‌ ಎನಿಸಿಕೊಂಡಿದ್ದಾರೆ. ವಿಶ್ವವಿಖ್ಯಾತ ಲೆಗ್‌ ಸ್ಪಿನ್ನರ್‌ ಅನಿಲ್‌ ಕುಂಬ್ಳೆ (619 ವಿಕೆಟ್‌) ಮೊದಲ ಸ್ಥಾನದಲ್ಲಿದ್ದಾರೆ.

ದಿಗ್ಗಜ ಕ್ರಿಕೆಟಿಗ ಅನಿಲ್ ಕುಂಬ್ಳೆಯನ್ನು ಹಿಂದಿಕ್ಕಲು ಸಾಧ್ಯವೆ?

ಅನಿಲ್ ಕುಂಬ್ಳೆಯನ್ನು (Anil Kumble) ಹಿಂದಿಕ್ಕಲು ಅಶ್ವಿನ್‌ ಇನ್ನೂ 184 ವಿಕೆಟ್‌ ಗಳಿಸಬೇಕಿದೆ. ಹಾಲಿ ಸರಾಸರಿಯಲ್ಲೇ ವಿಕೆಟ್‌ ಗಳಿಸುವುದಾದರೆ, ಅವರಿನ್ನೂ 30-35 ಟೆಸ್ಟ್‌ ಆಡಬೇಕು. ಈ ವರ್ಷ ಭಾರತ ಇನ್ನು 7 ಟೆಸ್ಟ್‌ ಆಡಲಿದೆ. ಇನ್ನೆರಡು ವರ್ಷ ತಲಾ 10-12ರಂತೆ ಆಡಿದರೆ, ಅವುಗಳಿಗೆ ಅಶ್ವಿನ್‌ ಆಯ್ಕೆ ಆದರೆ ಹಾಗೂ ಇದೇ ವೇಗದಲ್ಲಿ ವಿಕೆಟ್‌ ಉರುಳಿಸಿದರೆ ಮಾತ್ರ ಅವರು ಕುಂಬ್ಳೆಯನ್ನು ಹಿಂದಿಕ್ಕಬಹುದು. ಸದ್ಯದ ಮಟ್ಟಿಗೆ ಇದು ಕಷ್ಟಸಾಧ್ಯ. ಆದರೆ, ಕ್ರಿಕೆಟ್‌ನಲ್ಲಿ ಯಾವುದೂ ಅಸಾಧ್ಯವಲ್ಲ!

ವಿಕೆಟ್‌ ಮಷಿನ್‌ ಅಶ್ವಿನ್:

ಬಿ.ಟೆಕ್‌ ಪದವೀಧರರಾಗಿರುವ 35 ವರ್ಷದ ಅಶ್ವಿನ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ವೇಗದ ವಿಕೆಟ್‌ ಗಳಿಕೆಗೆ ಹೆಸರುವಾಸಿಯಾಗಿದ್ದಾರೆ. ಅತಿ ವೇಗದ 50, 100, 150, 200, 250, 300, 350, 400 ವಿಕೆಟ್‌ ಗಳಿಕೆಯ ದಾಖಲೆಗಳೆಲ್ಲ ಅಶ್ವಿನ್‌ ಹೆಸರಲ್ಲೇ ಇದೆ. 85 ಟೆಸ್ಟ್‌ಗಳಲ್ಲಿ 160 ಇನಿಂಗ್ಸ್‌ ಆಡಿರುವ ಅಶ್ವಿನ್‌, ಟೆಸ್ಟ್‌ ವಿಕೆಟ್‌ ಗಳಿಕೆಯಲ್ಲಿ ವಿಶ್ವದಲ್ಲೇ 9ನೇ ಸ್ಥಾನಕ್ಕೇರಿದ್ದಾರೆ. 

Ind vs SL: ಮೊಹಾಲಿ ಟೆಸ್ಟ್‌ನಲ್ಲಿ ಕಪಿಲ್ ದೇವ್ ದಾಖಲೆ ಸರಿಗಟ್ಟಿದ ರವಿಚಂದ್ರನ್‌ ಅಶ್ವಿನ್‌..!

ಲಂಕಾ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್‌ (800), ಶೇನ್‌ ವಾರ್ನ್‌ (708), ಜೇಮ್ಸ್‌ ಆ್ಯಂಡರ್ಸನ್‌ (640), ಅನಿಲ್‌ ಕುಂಬ್ಳೆ (619), ಗ್ಲೆನ್‌ ಮೆಕ್‌ಗ್ರಾಥ್‌ (563), ಸ್ಟುವರ್ಟ್‌ ಬ್ರಾಡ್‌ (537), ಕೋಟ್ರ್ನಿ ವಾಲ್ಷ್‌ (519) ಹಾಗೂ ಡೇಲ್‌ ಸ್ಟೇನ್‌ (439) ಅಗ್ರ-8 ಸ್ಥಾನಗಳಲ್ಲಿದ್ದಾರೆ. ಈ ಪೈಕಿ, ಆ್ಯಂಡರ್ಸನ್‌ ಹಾಗೂ ಬ್ರಾಡ್‌ ಮಾತ್ರ ಟೆಸ್ಟ್‌ ಆಡುತ್ತಿದ್ದು, ಉಳಿದವರು ನಿವೃತ್ತರಾಗಿದ್ದಾರೆಂಬುದು ಗಮನಾರ್ಹ.

ನಂ.4 ಸ್ಪಿನ್ನರ್‌:

ಮತ್ತೊಂದು ವಿಶೇಷ ಎಂದರೆ, ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಗಳಿಸಿದ ಸ್ಪಿನ್ನರುಗಳ ಪಟ್ಟಿಯಲ್ಲಿ ಶ್ರೀಲಂಕಾದ ರಂಗನಾ ಹೆರಾಥ್‌ (433 ವಿಕೆಟ್‌) ಅವರನ್ನು ಹಿಂದಿಕ್ಕಿ ಅಶ್ವಿನ್‌ 4ನೇ ಸ್ಥಾನಕ್ಕೇರಿದ್ದಾರೆ. ಮುರಳೀಧರನ್‌, ಕುಂಬ್ಳೆ, ವಾರ್ನ್‌ ಮೊದಲ ಮೂರು ಸ್ಥಾನಗಳಲ್ಲಿದ್ದಾರೆ.

ಭಾರತದ ಟಾಪ್‌-5 ಬೌಲ​ರ್ಸ್‌

ಬೌಲರ್‌ ಟೆಸ್ಟ್‌ ಇನಿಂಗ್ಸ್‌ ವಿಕೆಟ್‌

ಅನಿಲ್‌ ಕುಂಬ್ಳೆ 132 236 619

ಆರ್‌.ಅಶ್ವಿನ್‌ 85 160 436

ಕಪಿಲ್‌ ದೇವ್‌ 131 227 434

ಹರ್ಭಜನ್‌ ಸಿಂಗ್‌ 103 190 417

ಜಹೀರ್‌ ಖಾನ್‌ 92 165 311

ಪಾದಾರ್ಪಣೆ ನಾಯಕತ್ವದಲ್ಲೇ ದಾಖಲೆ ಬರೆದ ರೋಹಿತ್‌

ಟೆಸ್ಟ್‌ ನಾಯಕತ್ವ ವಹಿಸಿದ ಮೊದಲ ಪಂದ್ಯದಲ್ಲೇ ಇನ್ನಿಂಗ್ಸ್‌ ಗೆಲುವು ಸಾಧಿಸಿದ ಭಾರತದ 2ನೇ ನಾಯಕ ಎಂಬ ಹಿರಿಮೆಗೆ ರೋಹಿತ್‌ ಶರ್ಮಾ (Rohit Sharma) ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು 1955-56ರಲ್ಲಿ ಪಾದಾರ್ಪಣಾ ನಾಯಕತ್ವದಲ್ಲೇ ನ್ಯೂಜಿಲೆಂಡ್‌ ವಿರುದ್ಧ ಪಾಲಿ ಉಮ್ರಿಗರ್‌ ಇನ್ನಿಂಗ್ಸ್‌ ಹಾಗೂ 27 ರನ್‌ಗಳ ಅಂತರದಲ್ಲಿ ಜಯ ಸಾಧಿಸಿದ್ದರು.

ಲಂಕಾ ವಿರುದ್ಧ 21 ಜಯ: ಭಾರತ ಮೊದಲ ತಂಡ

ಶ್ರೀಲಂಕಾ ವಿರುದ್ಧ 21 ಗೆಲುವು ಸಾಧಿಸಿದ ಮೊದಲ ತಂಡ ಎಂಬ ಖ್ಯಾತಿಯನ್ನು ಟೀಂ ಇಂಡಿಯಾ ಗಳಿಸಿದೆ. ಲಂಕಾ ವಿರುದ್ಧ ಪಾಕಿಸ್ತಾನ 20 ಟೆಸ್ಟ್‌ಗಳನ್ನು ಗೆದ್ದಿದೆ. ಇನ್ನು, ಲಂಕಾ ವಿರುದ್ಧ ಭಾರತ ಅಜೇಯ ಓಟ ಮುಂದುವರಿಸಿದೆ. ತಂಡ ಈ ವರೆಗೂ ತವರಿನಲ್ಲಿ ಲಂಕಾ ವಿರುದ್ಧ 21 ಟೆಸ್ಟ್‌ ಆಡಿದ್ದು, 12ರಲ್ಲಿ ಜಯಗಳಿಸಿ 9ರಲ್ಲಿ ಡ್ರಾ ಸಾಧಿಸಿದೆ.