ಟೀಂ ಇಂಡಿಯಾ ಎಡಗೈ ಲೆಗ್‌ಸ್ಪಿನ್ನರ್ ಪ್ರಗ್ಯಾನ್ ಓಜಾ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..

ನವದೆಹಲಿ(ಫೆ.21): ಟೀಂ ಇಂಡಿಯಾ ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. 2018ರ ನವೆಂಬರ್‌ನಲ್ಲಿ ಓಜಾ ಕಡೆಯ ಬಾರಿಗೆ ಬಿಹಾರ ತಂಡದ ಪರ ಪ್ರಥಮ ದರ್ಜೆ ಪಂದ್ಯವನ್ನಾಡಿದ್ದರು.

Scroll to load tweet…

ಪ್ರಗ್ಯಾನ್ ಓಜಾ 2008ರಲ್ಲಿ ಏಷ್ಯಾಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇದಾದ ಮರು ವರ್ಷವೇ ಟಿ20 ಕ್ರಿಕೆಟ್‌ಗೆ ಬಾಂಗ್ಲಾದೇಶ ವಿರುದ್ಧ ಪದಾರ್ಪಣೆ ಮಾಡಿದ್ದ ಓಜಾ, ಚೊಚ್ಚಲ ಪಂದ್ಯದಲ್ಲೇ 4 ವಿಕೆಟ್ ಕಬಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಓಜಾ ಭಾರತ ಪರ 18 ಏಕದಿನ, 6 ಟಿ20 ಹಾಗೂ 24 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಇನ್ನು 2009ರಲ್ಲಿ ಶ್ರೀಲಂಕಾ ವಿರುದ್ಧ ತವರಿನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಓಜಾ, ರೆಡ್‌ ಬಾಲ್ ಕ್ರಿಕೆಟ್‌ನಲ್ಲಿ ನೂರಕ್ಕೂ ಅಧಿಕ ವಿಕೆಟ್ ಕಬಳಿಸಿದ್ದಾರೆ. ಅದರಲ್ಲೂ ಸಚಿನ್ ತೆಂಡುಲ್ಕರ್ ಕೊನೆಯ ಟೆಸ್ಟ್ ಪಂದ್ಯದಲ್ಲಿ ಓಜಾ 10 ವಿಕೆಟ್ ಪಡೆಯುವ ಮೂಲಕ ಪಂದ್ಯ ಶ್ರೇಷ್ಠಗೌರವಕ್ಕೂ ಭಾಜನರಾಗಿದ್ದರು. 

ಇನ್ನು ಐಪಿಎಲ್‌ನಲ್ಲೂ ಕಮಾಲ್ ಮಾಡಿದ್ದ ಓಜಾ 2009ರ ಐಪಿಎಲ್ ಚಾಂಪಿಯನ್ ಡೆಕ್ಕನ್ ಚಾರ್ಜಸ್ ತಂಡದ ಸದಸ್ಯರಾಗಿದ್ದರು. ಇನ್ನು 2010ನೇ ಆವೃತ್ತಿಯಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸುವ ಮೂಲಕ ಪರ್ಪಲ್ ಕ್ಯಾಪ್ ಪಡೆದುಕೊಂಡಿದ್ದರು. ಮುಂಬೈ ಇಂಡಿಯನ್ಸ್ ಪರವೂ ಓಜಾ ಕಾಣಿಸಿಕೊಂಡಿದ್ದರು.