ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಸೋಲನುಭವಿಸಿದ ಪರಿಣಾಮ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಭಾರತ 3ನೇ ಸ್ಥಾನಕ್ಕೆ ಕುಸಿದಿದೆ. ಈ ಸೋಲಿನಿಂದಾಗಿ ಭಾರತದ ಗೆಲುವಿನ ಪ್ರತಿಶತ 57.29ಕ್ಕೆ ಇಳಿದಿದೆ. 9ನೇ ಗೆಲುವು ದಾಖಲಿಸಿದ ಆಸ್ಟ್ರೇಲಿಯಾ ಅಗ್ರಸ್ಥಾನಕ್ಕೇರಿದೆ.
ದುಬೈ: ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಸೋಲನುಭವಿಸಿದ ಪರಿಣಾಮ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಭಾರತ 3ನೇ ಸ್ಥಾನಕ್ಕೆ ಕುಸಿದಿದೆ. ಪರ್ತ್‌ನಲ್ಲಿ ಗೆಲುವು ಸಾಧಿಸಿದ ಬಳಿಕ ಭಾರತದ ಗೆಲುವಿನ ಪ್ರತಿಶತ 61.11ಕ್ಕೆ ಏರಿಕೆಯಾಗಿತ್ತು. ಈ ಸೋಲಿನಿಂದಾಗಿ ಅದು 57.29ಕ್ಕೆ ಇಳಿದಿದೆ.
ಪ್ರಸಕ್ತ ವಿಶ್ವ ಚಾಂಪಿಯನ್‌ಶಿಪ್ ಅವಧಿಯಲ್ಲಿ 9ನೇ ಗೆಲುವು ದಾಖಲಿಸಿದ ಆಸ್ಟ್ರೇಲಿಯಾದ ಗೆಲುವಿನ ಪ್ರತಿಶತ 57.69ರಿಂದ 60.71ಕ್ಕೆ ಏರಿಕೆಯಾಗಿದ್ದು, ಅಗ್ರಸ್ಥಾನಕ್ಕೇರಿದೆ. ಒಂದು ವೇಳೆ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ಗೆದ್ದರೆ, ಆಸ್ಟ್ರೇಲಿಯಾವನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಲಿದೆ ಸದ್ಯ ದ.ಆಫ್ರಿಕಾದ ಗೆಲುವಿನ ಪ್ರತಿಶತ 59.26 ಇದೆ.
ಭಾರತಕ್ಕೆ ಆಸ್ಟ್ರೇಲಿಯಾ ವಿರುದ್ಧ 3 ಟೆಸ್ಟ್ ಬಾಕಿ ಇದ್ದು, 3ರಲ್ಲೂ ಗೆಲ್ಲದೇ ಇದ್ದರೂ ಒಂದು ಪಂದ್ಯವನ್ನೂ ಸೋಲುವಂತಿಲ್ಲ. ಇನ್ನು, ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್‌ನಲ್ಲೂ ಸೋತ ನ್ಯೂಜಿಲೆಂಡ್ 44.23ರ ಗೆಲುವಿನ ಪ್ರತಿಶತದೊಂದಿಗೆ 6ನೇ ಸ್ಥಾನಕ್ಕೆ ಕುಸಿದಿದ್ದು, ವಿಶ್ವ ಚಾಂಪಿಯನ್‌ಶಿಪ್ ಫೈನಲ್ ರೇಸ್‌ನಿಂದ ಹೊರಬಿದ್ದಿದೆ.
ಭಾರತದ ಕೈತಪ್ಪಿದ ಕಿರಿಯರ ಏಷ್ಯಾ ಕಪ್: ಬಾಂಗ್ಲಾ ವಿರುದ್ಧ ಫೈನಲ್‌ನಲ್ಲಿ ಸೋಲು!
ರೋಹಿತ್ ನಾಯಕತ್ವ, ಬ್ಯಾಟಿಂಗ್ ಬಗ್ಗೆ ಟೀಕೆ
ರೋಹಿತ್ ಶರ್ಮಾ ನಾಯಕತ್ವ ಹಾಗೂ ಬ್ಯಾಟಿಂಗ್ ಬಗ್ಗೆ ಹಲವು ಮಾಜಿ ಕ್ರಿಕೆಟಿಗರು, ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳಿಂದ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ರೋಹಿತ್‌ರ ನಾಯಕತ್ವದಲ್ಲಿ ಭಾರತ ಸತತ 4 ಟೆಸ್ಟ್ ಸೋತಿದೆ. ನ್ಯೂಜಿಲೆಂಡ್ ವಿರುದ್ಧ ತವರಲ್ಲೇ 3 ಪಂದ್ಯ ಸೋಲುಂಡಿದ್ದ ಭಾರತ, ಅಡಿಲೇಡ್ ಟೆಸ್ಟ್‌ನಲ್ಲೂ ಪರಾಭವಗೊಂಡಿದೆ.
ಇನ್ನು, ರೋಹಿತ್ ಬ್ಯಾಟಿಂಗ್‌ನಲ್ಲೂ ಕಳಪೆ ಲಯದಲ್ಲಿದ್ದಾರೆ. ಕಳೆದ 12 ಇನ್ನಿಂಗ್ಸ್‌ಗಳಲ್ಲಿ ಅವರು ಕೇವಲ 1 ಅರ್ಧಶತಕ ಬಾರಿಸಿದ್ದಾರೆ. 8 ಇನ್ನಿಂಗ್ಸ್‌ಗಳಲ್ಲಿ ಅವರ ಸ್ಕೋರ್ ಎರಡಂಕಿ ದಾಟಿಲ್ಲ. ಕೆಲವರು ರೋಹಿತ್‌ರ ನಾಯಕತ್ವ ಕಿತ್ತು ಬೂಮ್ರಾಗೆ ನೀಡಬೇಕೆಂದು ಒತ್ತಾಯಿಸಿದರೆ, ಇನ್ನೂ ಕೆಲವರು ರೋಹಿತ್‌ರನ್ನು ತಂಡದಿಂದಲೇ ಹೊರಗಿಡಬೇಕೆಂದು ಆಗ್ರಹಿಸಿದ್ದಾರೆ.
ಕೇವಲ 19 ರನ್ ಟಾರ್ಗೆಟ್ ನೀಡಿ ಮುಗ್ಗರಿಸಿದ ಭಾರತ,ಕಣ್ಣು ಕೆಂಪಾಗಿಸಿದ ಪಿಂಕ್ ಬಾಲ್ ಟೆಸ್ಟ್ ಫಲಿತಾಂಶ!
ಅಡಿಲೇಡ್‌ನಲ್ಲಿ ಟೀಂ ಇಂಡಿಯಾಗೆ ಹೀನಾಯ ಸೋಲು!
ಅಡಿಲೇಡ್: ಪರ್ತ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾವನ್ನು ಬಗ್ಗುಬಡಿದಿದ್ದ ಭಾರತ, ಅಡಿಲೇಡ್‌ನಲ್ಲಿ ಅಕ್ಷರಶಃ ಅಡಿಮೇಲಾಗಿದೆ. ಪರ್ತ್ ಟೆಸ್ಟ್ ಫಲಿತಾಂಶಕ್ಕೆ ಸಂಪೂರ್ಣ ಉಲ್ಟಾ ಎಂಬಂತೆ ಅಡಿಲೇಡ್ ಟೆಸ್ಟ್‌ನಲ್ಲಿ ಹೀನಾಯ ಪ್ರದರ್ಶನ ನೀಡಿದ ಟೀಂ ಇಂಡಿಯಾ 10 ವಿಕೆಟ್‌ಗಳಿಂದ ಸೋಲನುಭವಿಸಿದೆ. ಇದರೊಂದಿಗೆ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆತಿಥೇಯ ಕಾಂಗರೂ ಪಡೆ 1-1 ಸಮಬಲ ಸಾಧಿಸಿದೆ.
ಮೊದಲ ಟೆಸ್ಟ್‌ನ ಭರ್ಜರಿ ಗೆಲುವು ಭಾರತದ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದರೆ, 2ನೇ ಪಂದ್ಯದ ಸೋಲು ತಂಡದ ದೌರ್ಬಲ್ಯಗಳನ್ನು ಹೊರಹಾಕಿದೆ. ಅತ್ತ ಆಸ್ಟ್ರೇಲಿಯಾ ಹಗಲು-ರಾತ್ರಿ ಟೆಸ್ಟ್‌ನಲ್ಲಿ ತನ್ನ ಪರಾಕ್ರಮ ಮುಂದುವರಿಸುವುದರ ಜೊತೆಗೆ, ಉಳಿದ 3 ಪಂದ್ಯಗಳಲ್ಲಿ ಭಾರತಕ್ಕೆ ಗೆಲುವು ಪರ್ತ್‌ನಲ್ಲಿ ಸಿಕ್ಕಷ್ಟು ಸುಲಭವಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದೆ.
