ಟೆಸ್ಟ್ ವಿಶ್ವಕಪ್ ಸೋತ ಭಾರತ; ರೋಹಿತ್ ಶರ್ಮಾ ಟೆಸ್ಟ್ ನಾಯಕತ್ವಕ್ಕೆ ಕುತ್ತು?
ಟೆಸ್ಟ್ ವಿಶ್ವಕಪ್ ಫೈನಲ್ ಸೋತ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ
ರೋಹಿತ್ ಶರ್ಮಾ ಟೆಸ್ಟ್ ನಾಯಕತ್ವದ ಮೇಲೆ ಅನುಮಾನದ ತೂಗುಗತ್ತಿ
ರೋಹಿತ್ ಶರ್ಮಾ ಬ್ಯಾಟಿಂಗ್ ಪ್ರದರ್ಶನದ ಮೇಲೆ ಕಣ್ಣಿಟ್ಟಿರುವ ಆಯ್ಕೆ ಸಮಿತಿ
ನವದೆಹಲಿ(ಜೂ.14): ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲಲು ವಿಫಲರಾಗಿದ್ದಲ್ಲದೇ ಬ್ಯಾಟಿಂಗ್ನಲ್ಲೂ ಕಳಪೆ ಪ್ರದರ್ಶನ ನೀಡುತ್ತಿರುವ ರೋಹಿತ್ ಶರ್ಮಾರ ಟೆಸ್ಟ್ ನಾಯಕತ್ವಕ್ಕೆ ವೆಸ್ಟ್ಇಂಡೀಸ್ ಸರಣಿ ಬಳಿಕ ಕುತ್ತು ಬರುವ ಸಾಧ್ಯತೆ ಇದೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಜುಲೈ 12ರಿಂದ ಆರಂಭವಾಗಲಿರುವ 2 ಪಂದ್ಯಗಳ ಸರಣಿಗೆ ರೋಹಿತ್ ಶರ್ಮಾ ಅವರೇ ನಾಯಕತ್ವ ವಹಿಸುವುದು ಬಹುತೇಕ ಖಚಿತ. ಆದರೆ ಸರಣಿಯಲ್ಲಿ ಅವರು ಮತ್ತೆ ಬ್ಯಾಟಿಂಗ್ನಲ್ಲಿ ವಿಫಲರಾದರೆ ನಾಯಕತ್ವದಿಂದ ಅವರನ್ನು ಬಿಸಿಸಿಐ ಕೆಳಗಿಳಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಆದರೆ ಏಕದಿನ ಅವರ ನಾಯಕತ್ವದಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆಯಾಗುವ ಸಾಧ್ಯತೆ ಕಡಿಮೆ ಎಂದು ತಿಳಿದುಬಂದಿದೆ.
"ರೋಹಿತ್ ಶರ್ಮಾ ಅವರನ್ನು ಟೆಸ್ಟ್ ನಾಯಕತ್ವದಿಂದ ಕೆಳಗಿಳಿಸಲಾಗುತ್ತಿದೆ ಎನ್ನುವ ಗಾಳಿಸುದ್ದಿಯು ಆಧಾರರಹಿತವಾದದ್ದು. ರೋಹಿತ್ ಶರ್ಮಾ ಮುಂದಿನ ಎರಡು ವರ್ಷಗಳ ಅವಧಿಯ ಟೆಸ್ಟ್ ನಾಯಕರಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆಯೇ ಎನ್ನುವುದು ಸದ್ಯ ನಮ್ಮ ಮುಂದಿರುವ ಪ್ರಶ್ನೆ. ಯಾಕೆಂದರೆ 2025ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ವೇಳೆಗೆ ರೋಹಿತ್ ಶರ್ಮಾ ಅವರಿಗೆ 38 ವರ್ಷ ವಯಸ್ಸಾಗಿರಲಿದೆ" ಎಂದು ಬಿಸಿಸಿಐ ಮೂಲಗಳು ತಿಳಿಸಿವೆ ಎಂದು ಪಿಟಿಐ ವರದಿ ಮಾಡಿದೆ.
"ಸದ್ಯದ ಮಟ್ಟಿಗೆ ಶಿವಸುಂದರ್ ದಾಸ್ ಹಾಗೂ ಅವರ ಸಹೋದ್ಯೋಗಿಗಳು ಮುಂದಿನ ಎರಡು ಟೆಸ್ಟ್ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಪ್ರದರ್ಶನವನ್ನು ಗಮನಿಸಿ ಮುಂದಿನ ತೀರ್ಮಾನವನ್ನು ತೆಗೆದುಕೊಳ್ಳಲಿದ್ದಾರೆ" ಎಂದು ಬಿಸಿಸಿಐ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.
TNPL 2023 ದುಬಾರಿ ಎಸೆತ: ಒಂದು ಎಸೆತದಲ್ಲಿ 18 ರನ್ ಚಚ್ಚಿಸಿಕೊಂಡ ಬೌಲರ್..! ವಿಡಿಯೋ ವೈರಲ್
ವೆಸ್ಟ್ ಇಂಡೀಸ್ ಪ್ರವಾಸದ ಬಳಿಕ ಟೀಂ ಇಂಡಿಯಾವು, ಡಿಸೆಂಬರ್ ಅಂತ್ಯದ ವರೆಗೆ ಯಾವುದೇ ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡುತ್ತಿಲ್ಲ. ಡಿಸೆಂಬರ್ ಅಂತ್ಯದ ವೇಳೆಗೆ ಭಾರತ ಕ್ರಿಕೆಟ್ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಭಾಗವಾಗಿ ಟೆಸ್ಟ್ ಸರಣಿಯನ್ನಾಡಲು ದಕ್ಷಿಣ ಆಫ್ರಿಕಾ ಪ್ರವಾಸವನ್ನು ಮಾಡಲಿದೆ. ಹೀಗಾಗಿ ಭವಿಷ್ಯದ ಟೆಸ್ಟ್ ನಾಯಕನ ಆಯ್ಕೆ ಕುರಿತಂತೆ ತೀರ್ಮಾನ ತೆಗೆದುಕೊಳ್ಳಲು ಬಿಸಿಸಿಐ ಆಯ್ಕೆ ಸಮಿತಿಗೆ ಸಾಕಷ್ಟು ಕಾಲಾವಕಾಶವಿರಲಿದೆ ಎಂದು ಮೂಲಗಳ ತಿಳಿಸಿವೆ.
2021ರ ಕೊನೆಯಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿತ್ತು. ಟೀಂ ಇಂಡಿಯಾ, ಟೆಸ್ಟ್ ಸರಣಿಯನ್ನು ಸೋತ ಬೆನ್ನಲ್ಲೇ ವಿರಾಟ್ ಕೊಹ್ಲಿ, ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ವಿರಾಟ್ ಕೊಹ್ಲಿಯಿಂದ ತೆರವಾದ ಸ್ಥಾನಕ್ಕೆ ರೋಹಿತ್ ಶರ್ಮಾ ಅವರಿಗೆ ಭಾರತ ಟೆಸ್ಟ್ ತಂಡದ ನಾಯಕ ಪಟ್ಟ ಕಟ್ಟಲಾಗಿತ್ತು.
ರೋಹಿತ್ ಶರ್ಮಾ 2022ರಲ್ಲಿ ನಾಯಕರಾದ ಬಳಿಕ ಭಾರತ ತಂಡವು 10 ಟೆಸ್ಟ್ ಪಂದ್ಯಗಳನ್ನಾಡಿದ್ದು, ವಿವಿಧ ಕಾರಣಗಳಿಂದ ಮೂರು ಪಂದ್ಯಗಳಿಂದ ರೋಹಿತ್ ಶರ್ಮಾ, ಆಯ್ಕೆಗೆ ಅಲಭ್ಯರಾಗಿದ್ದರು. 7 ಟೆಸ್ಟ್ ಪಂದ್ಯಗಳ 11 ಇನಿಂಗ್ಸ್‌ಗಳಿಂದ ರೋಹಿತ್ ಶರ್ಮಾ ಕೇವಲ 35.45ರ ಬ್ಯಾಟಿಂಗ್ ಸರಾಸರಿಯಲ್ಲಿ 390 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಅವಧಿಯಲ್ಲಿ ರೋಹಿತ್ ಶರ್ಮಾ ಏಕೈಕ ಶತಕ ಸಿಡಿಸಿದ್ದು, ಯಾವುದೇ ಅರ್ಧಶತಕ ಬಾರಿಸಲು ಹಿಟ್‌ಮ್ಯಾನ್‌ಗೆ ಸಾಧ್ಯವಾಗಿಲ್ಲ. ಇನ್ನೊಂದೆಡೆ ಇದೇ ಅವಧಿಯಲ್ಲಿ ವಿರಾಟ್ ಕೊಹ್ಲಿ ಎಲ್ಲಾ 10 ಟೆಸ್ಟ್ ಪಂದ್ಯಗಳನ್ನಾಡಿ 17 ಇನಿಂಗ್ಸ್‌ಗಳಿಂದ 517 ರನ್ ಬಾರಿಸಿ ಮಿಂಚಿದ್ದಾರೆ.