ಸೂರ್ಯಕುಮಾರ್‌ ಯಾದವ್‌ ನಾಯಕತ್ವದಲ್ಲಿ ಸರಣಿಯಲ್ಲಿ ಕಣಕ್ಕಿಳಿದಿರುವ ಟೀಂ ಇಂಡಿಯಾ, ಸುಲಭವಾಗಿ ಗೆಲ್ಲಬಹುದಾಗಿದ್ದ ಆರಂಭಿಕ ಪಂದ್ಯದಲ್ಲಿ ಕೊನೆವರೆಗೆ ತಿಣುಕಾಡಿ ಜಯ ಸಾಧಿಸಿತ್ತು. ಪಂದ್ಯದಲ್ಲಿ ಬ್ಯಾಟರ್‌ಗಳು ಅಬ್ಬರಿಸಿದ್ದರೂ, ಬೌಲರ್‌ಗಳು ತೀರಾ ಕಳಪೆ ಪ್ರದರ್ಶನ ತೋರಿದ್ದರು.

ತಿರುವನಂತಪುರಂ(ನ.26): 2024ರ ಟಿ20 ವಿಶ್ವಕಪ್‌ಗೆ ಈಗಾಗಲೇ ಸಿದ್ಧತೆ ಆರಂಭಿಸಿರುವ ಟೀಂ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧ ಮತ್ತೊಂದು ಟಿ20 ಗೆಲುವಿನ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಳ್ಳುವ ತವಕದಲ್ಲಿದೆ. ಪಂದ್ಯಕ್ಕೆ ತಿರುವನಂತಪುರಂ ಕ್ರೀಡಾಂಗಣ ಆತಿಥ್ಯ ವಹಿಸಲಿದ್ದು, ಆಸೀಸ್‌ ಸರಣಿ ಸಮಬಲಕ್ಕೆ ಎದುರು ನೋಡುತ್ತಿದೆ.

ಸೂರ್ಯಕುಮಾರ್‌ ಯಾದವ್‌ ನಾಯಕತ್ವದಲ್ಲಿ ಸರಣಿಯಲ್ಲಿ ಕಣಕ್ಕಿಳಿದಿರುವ ಟೀಂ ಇಂಡಿಯಾ, ಸುಲಭವಾಗಿ ಗೆಲ್ಲಬಹುದಾಗಿದ್ದ ಆರಂಭಿಕ ಪಂದ್ಯದಲ್ಲಿ ಕೊನೆವರೆಗೆ ತಿಣುಕಾಡಿ ಜಯ ಸಾಧಿಸಿತ್ತು. ಪಂದ್ಯದಲ್ಲಿ ಬ್ಯಾಟರ್‌ಗಳು ಅಬ್ಬರಿಸಿದ್ದರೂ, ಬೌಲರ್‌ಗಳು ತೀರಾ ಕಳಪೆ ಪ್ರದರ್ಶನ ತೋರಿದ್ದರು. ಹೀಗಾಗಿ ಭಾನುವಾರದ ಪಂದ್ಯದಲ್ಲಿ ಬೌಲಿಂಗ್‌ ವಿಭಾಗದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾದ ಅನಿವಾರ್ಯತೆ ಟೀಂ ಇಂಡಿಯಾದ ಮುಂದಿದೆ.

ಪ್ರಮುಖವಾಗಿ ಅರ್ಶ್‌ದೀಪ್‌ ಸಿಂಗ್, ಪ್ರಸಿದ್ಧ್‌ ಕೃಷ್ಣ, ರವಿ ಬಿಷ್ಣೋಯ್‌ ಭಾರತ ತಂಡದಲ್ಲಿ ಸ್ಥಾನ ಗಟ್ಟಿಸಿಗೊಳಿಸಬೇಕಿದ್ದರೆ ಈಗಿಂದಲೇ ಮೊನಚು ದಾಳಿ ಮೂಲಕ ಆಯ್ಕೆ ಸಮಿತಿಯ ಗಮನ ಸೆಳೆಯಬೇಕಿದೆ. ಆಸೀಸ್‌ ಬ್ಯಾಟರ್‌ಗಳು ಅಭೂತಪೂರ್ವ ಪ್ರದರ್ಶನ ನೀಡುತ್ತಿದ್ದು, ಅವರನ್ನು ಕಟ್ಟಿಹಾಕುವ ಜವಾಬ್ದಾರಿ ಭಾರತೀಯ ಬೌಲರ್‌ಗಳ ಮೇಲಿದೆ. ಇನ್ನು ಸೂರ್ಯ ಜೊತೆಗೆ ಇಶಾನ್‌ ಕಿಶನ್‌ ಆರಂಭಿಕ ಪಂದ್ಯದಲ್ಲಿ ಅಬ್ಬರಿಸಿದ್ದು, ಸಿಕ್ಕ ಅವಕಾಶ ಬಾಚಿಕೊಳ್ಳುತ್ತಿದ್ದಾರೆ. ಅವರ ಜೊತೆಗೆ ಯಶಸ್ವಿ ಜೈಸ್ವಾಲ್‌, ಋತುರಾಜ್‌, ತಿಲಕ್‌ ವರ್ಮಾ ಬ್ಯಾಟ್‌ನಿಂದ ದೊಡ್ಡ ಮೊತ್ತ ಹರಿದುಬರಬೇಕಿದೆ. ರಿಂಕು ಸಿಂಗ್‌ ಮೇಲೆ ಭಾರೀ ನಿರೀಕ್ಷೆ ಇಡಲಾಗಿದೆ.

ಪುಟಿದೇಳುತ್ತಾ ಆಸೀಸ್‌?: ಆರಂಭಿಕ ಪಂದ್ಯದಲ್ಲಿ ಸೋತ ಹೊರತಾಗಿಯೂ ಆಸೀಸ್‌, ಭಾರತಕ್ಕೆ ಮತ್ತೊಮ್ಮೆ ಕಠಿಣ ಸ್ಪರ್ಧೆ ನೀಡುವುದರಲ್ಲಿ ಅನುಮಾನವಿಲ್ಲ. ಜೋಸ್‌ ಇಂಗ್ಲಿಸ್‌, ಸ್ಟೀವ್‌ ಸ್ಮಿತ್‌ ಮತ್ತೆ ಅಬ್ಬರಿಸಲು ಕಾಯುತ್ತಿದ್ದು, ಮಾರ್ಕಸ್‌ ಸ್ಟೋಯ್ನಿಸ್‌, ಟಿಮ್‌ ಡೇವಿಡ್‌ ನಿರೀಕ್ಷೆ ಉಳಿಸಿಕೊಳ್ಳಬೇಕಿದೆ.

ಒಟ್ಟು ಮುಖಾಮುಖಿ: 27

ಭಾರತ: 16

ಆಸ್ಟ್ರೇಲಿಯಾ: 10

ಫಲಿತಾಂಶವಿಲ್ಲ: 01

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಯಶಸ್ವಿ ಜೈಸ್ವಾಲ್‌, ಋತುರಾಜ್‌ ಗಾಯಕ್ವಾಡ್, ಇಶಾನ್‌ ಕಿಶನ್, ಸೂರ್ಯಕುಮಾರ್‌ ಕುಮಾರ್(ನಾಯಕ), ತಿಲಕ್‌ ವರ್ಮಾ, ರಿಂಕು ಸಿಂಗ್‌, ಅಕ್ಷರ್‌ ಪಟೇಲ್, ರವಿ ಬಿಷ್ಣೋಯ್‌, ಅರ್ಶ್‌ದೀಪ್‌ ಸಿಂಗ್, ಪ್ರಸಿದ್ಧ್‌ ಕೃಷ್ಣ, ಮುಕೇಶ್‌ ಕುಮಾರ್.

ಆಸ್ಟ್ರೇಲಿಯಾ: ಸ್ಟೀವ್ ಸ್ಮಿತ್‌, ಶಾರ್ಟ್‌, ಜೋಶ್ ಇಂಗ್ಲಿಸ್‌, ಆ್ಯರೋನ್‌ ಹಾರ್ಡಿ, ಮಾರ್ಕಸ್ ಸ್ಟೋಯ್ನಿಸ್‌, ಟಿಮ್ ಡೇವಿಡ್‌, ಮ್ಯಾಥ್ಯೂ ವೇಡ್‌(ನಾಯಕ), ಶಾನ್ ಅಬ್ಬಾಟ್‌, ಎಲ್ಲೀಸ್‌, ಜೇಸನ್ ಬೆಹ್ರೆನ್‌ಡಾರ್ಫ್‌, ತನ್ವೀರ್‌.

ಪಂದ್ಯ ಆರಂಭ: ಸಂಜೆ 7ಕ್ಕೆ, ನೇರ ಪ್ರಸಾರ: ಸ್ಪೋರ್ಟ್ಸ್‌ 18, ಜಿಯೋ ಸಿನಿಮಾ

ಪಂದ್ಯಕ್ಕೆ ಮಳೆ ಭೀತಿ

ಭಾನುವಾರದ 2ನೇ ಟಿ20 ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಹೆಚ್ಚಿದೆ. ಶನಿವಾರ ಧಾರಾಕಾರ ಮಳೆ ಸುರಿದ ಕಾರಣ ಅಭ್ಯಾಸಕ್ಕೆ ತೊಂದರೆಯಾಗಿತ್ತು. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಭಾನುವಾರ ಮಳೆ ಸುರಿಯುವ ಸಾಧ್ಯತೆ ಶೇ.25ರಷ್ಟು ಇದ್ದು, ಪಂದ್ಯಕ್ಕೆ ಅಡ್ಡಿಯಾಗಬಹುದು.