Ind vs WI ವೆಸ್ಟ್ ಇಂಡೀಸ್ ಎದುರು ಭಾರತಕ್ಕೆ ಸತತ 13ನೇ ಸರಣಿ ಗುರಿ..!

ಇಂದು ಭಾರತ-ವೆಸ್ಟ್ ಇಂಡೀಸ್ ಎರಡನೇ ಏಕದಿನ ಪಂದ್ಯ
ವೆಸ್ಟ್ ಇಂಡೀಸ್ ಎದುರು ಈಗಾಗಲೇ ಸತತ 12 ಏಕದಿನ ಸರಣಿ ಗೆದ್ದಿರುವ ಭಾರತ
ಸಂಜು ಸ್ಯಾಮ್ಸನ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುವ ಸಾಧ್ಯತೆ

Team India eyes on 13 consecutive Series win against West Indies kvn

ಬಾರ್ಬಡೋಸ್(ಜು.29): 2 ದಿನ ಹಿಂದೆ ನಡೆದ ಮೊದಲ ಏಕದಿನ ಪಂದ್ಯ ಒಟ್ಟಾರೆ 46 ಓವರ್ (45.5) ಸಹ ದಾಟಲಿಲ್ಲ. ಶನಿವಾರ ಉಭಯ ತಂಡಗಳ ನಡುವೆ 2ನೇ ಏಕದಿನ ಪಂದ್ಯ ನಡೆಯಲಿದ್ದು, ಭಾರತ ಅನಗತ್ಯ ಪ್ರಯೋಗಗಳನ್ನು ಬದಿಗೊತ್ತಿ ಸರಣಿ ವಶಪಡಿಸಿಕೊಳ್ಳುವುದರ ಜೊತೆಗೆ ವಿಶ್ವಕಪ್‌ಗೆ ಅಗತ್ಯ ಸಿದ್ಧತೆ ನಡೆಸಲು ಎದುರು ನೋಡುತ್ತಿದೆ. ಮತ್ತೊಂದೆಡೆ ವಿಂಡೀಸ್ ವಿಶ್ವಕಪ್‌ಗೆ ಅರ್ಹತೆ ಸಿಗದ ಆಘಾತದಿಂದ ಹೊರ ಬಂದಂತೆ ಕಾಣುತ್ತಿಲ್ಲ. 

ತವರಿನಲ್ಲಿ ಸತತ 5 ಸರಣಿ ಸೋತಿರುವ ವಿಂಡೀಸ್ 6ನೇ ಸೋಲಿನಿಂದ ಪಾರಾಗಲು ದಾರಿ ಹುಡುಕುತ್ತಿದ್ದರೆ, ವಿಂಡೀಸ್ ವಿರುದ್ಧ ಭಾರತ ಸತತ 13ನೇ ಏಕದಿನ ಸರಣಿ ಗೆಲ್ಲುವ ತವಕದಲ್ಲಿದೆ. ಪ್ರಮುಖ ವೇಗಿಗಳ ಅನುಪಸ್ಥಿತಿಯಲ್ಲಿಯೂ ಮೊದಲ ಪಂದ್ಯದಲ್ಲಿ ಭಾರತದ ಯುವ ವೇಗಿಗಳ ಪಡೆ ಉತ್ತಮ ಪ್ರದರ್ಶನ ನೀಡಿತ್ತು. ಜಡೇಜಾ ಹಾಗೂ ಕುಲ್ದೀಪ್ ದಾಳಿ ಎದುರು ಉದುರಿದ್ದ ವಿಂಡೀಸ್‌ಗೆ, ಈ ಪಂದ್ಯದಲ್ಲಿ ಚಹಲ್ ರನ್ನು ಎದುರಿಸಬೇಕಾದ ಪರಿಸ್ಥಿತಿಯೂ ಎದುರಾಗಬಹುದು. ಬಹುತೇಕ ಅದೇ ಪಿಚ್‌ನಲ್ಲೇ ಪಂದ್ಯ ನಡೆಯುವ ಸಾಧ್ಯತೆ ಇರುವ ಕಾರಣ, ಎರಡೂ ತಂಡಗಳು ಹೆಚ್ಚುವರಿ ಸ್ಪಿನ್ನರ್‌ನನ್ನು ಕಣಕ್ಕಿಳಿಸಿದರೆ ಅಚ್ಚರಿಯಿಲ್ಲ. 

ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ಮೊದಲ ಪಂದ್ಯದಂತೆ ಪ್ರಯೋಗ ಮಾಡದೆ, ಆರಂಭಿಕರಾದ ರೋಹಿತ್ ಹಾಗೂ 3ನೇ ಕ್ರಮಾಂಕದಲ್ಲಿ ಕೊಹ್ಲಿ ಆಡುವ ನಿರೀಕ್ಷೆ ಇದೆ. ವಿಶ್ವಕಪ್‌ಗೂ ಮುನ್ನ ಕೆಲವೇ ಪಂದ್ಯಗಳು ಬಾಕಿ ಇದ್ದು, ಅವುಗಳ ಸಂಪೂರ್ಣ ಲಾಭ ಪಡೆಯುವಂತೆ ತಜ್ಞರು ಟೀಂ ಇಂಡಿಯಾಗೆ ಸಲಹೆ ನೀಡಿದ್ದಾರೆ. ಇನ್ನು ಸೂರ್ಯಕುಮಾರ್ ಸತತ ವೈಫಲ್ಯ ಕಾಣುತ್ತಿದ್ದು, ಸಂಜು ಸ್ಯಾಮ್ಸನ್‌ಗೆ ಅವಕಾಶ ಸಿಗಬಹುದೇ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.  

ಸಂಭಾವ್ಯ ತಂಡಗಳು ಹೀಗಿವೆ

ಭಾರತ:
ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್/ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಉಮ್ರಾನ್ ಮಲಿಕ್, ಮುಕೇಶ್ ಕುಮಾರ್. 

ವೆಸ್ಟ್ ಇಂಡೀಸ್:
ಬ್ರೆಂಡನ್ ಕಿಂಗ್, ಕೈಲ್ ಮೇಯರ್ಸ್, ಅಥನಾಜ್, ಶಾಯ್ ಹೋಪ್ (ನಾಯಕ), ಶಿಮ್ರೊನ್ ಹೆಟ್ಮೇಯರ್, ರೋವ್ಮನ್ ಪೋವೆಲ್/ ಕಾರ್ಟಿ, ರೊಮ್ಯಾರಿಯಾ ಶೆಫರ್ಡ್, ಡ್ರೇಕ್ಸ್‌, ಕರಿಹಾ, ಗುಡಾಕೇಶ್, ಜೇಡನ್ ಸೀಲ್ಸ್/ಅಲ್ಜಾರಿ ಜೋಸೆಫ್.  

ಪಿಚ್ ರಿಪೋರ್ಟ್‌:
ಮೊದಲ ಪಂದ್ಯದಲ್ಲಿ ಬಾರ್ಬಡೋಸ್‌ನ ಪಿಚ್ ವರ್ತಿಸಿದ ರೀತಿ ನೋಡಿ ರೋಹಿತ್ ಹಾಗೂ ಹೋಪ್ ಇಬ್ಬರೂ ಅಚ್ಚರಿ ವ್ಯಕ್ತಪಡಿಸಿದ್ದರು. ಎರಡೂ ತಂಡಗಳು ಹೆಚ್ಚುವರಿ ಸ್ಪಿನ್ನರ್ ಅನ್ನು ಆಡಿಸಬಹುದು. ಶನಿವಾರ 50% ಮಳೆ ಬೀಳುವ ಸಾಧ್ಯತೆ ಇದ್ದು, ಪಂದ್ಯಕ್ಕೆ ಅಡ್ಡಿಯಾಗಬಹುದು.  

ಪಂದ್ಯ ಆರಂಭ: ಸಂಜೆ 7 ಗಂಟೆ
ನೇರ ಪ್ರವಾರ: ಜಿಯೊ ಸಿನಿಮಾ, ಡಿಡಿ ಚಂದನ, ಡಿಡಿ ಸ್ಪೋರ್ಟ್ಸ್

Latest Videos
Follow Us:
Download App:
  • android
  • ios