ಅಲಿಬಾಗ್‌ನಲ್ಲಿ ಕೋಟ್ಯಾಂತರ ಮೌಲ್ಯದ ಐಶಾರಾಮಿ ವಿಲ್ಲಾ ಖರೀದಿಸಿದ ವಿರಾಟ್ ಕೊಹ್ಲಿ..! ಏನಿದರ ವಿಶೇಷತೆ?

ಮಹಾರಾಷ್ಟ್ರದ ಅಲಿಭಾಗ್‌ನಲ್ಲಿ ಐಶಾರಾಮಿ ವಿಲ್ಲಾ ಖರೀದಿಸಿದ ವಿರಾಟ್ ಕೊಹ್ಲಿ
ಸುಮಾರು 6 ಕೋಟಿ ರುಪಾಯಿ ಮೌಲ್ಯದ ವಿಲ್ಲಾ ಖರೀದಿಸಿದ ಮಾಜಿ ನಾಯಕ ವಿರಾಟ್
ಕೊಹ್ಲಿ ಅನುಪಸ್ಥಿತಿಯಲ್ಲಿ ಅವರ ಸಹೋದರ ವಿಕಾಸ್ ಕೊಹ್ಲಿ ವ್ಯವಹಾರ ಪ್ರಕ್ರಿಯೆ ಪೂರ್ಣ

Team India Cricketer Virat Kohli buys luxurious villa worth 6 crore rupees in Alibaug says Reports kvn

ಮುಂಬೈ(ಫೆ.25): ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಮಹಾರಾಷ್ಟ್ರದ ಆಲಿಭಾಗ್‌ನಲ್ಲಿ ಸುಮಾರು 6 ಕೋಟಿ ರುಪಾಯಿ ಮೌಲ್ಯದ ಐಶಾರಾಮಿ ವಿಲ್ಲಾವನ್ನು ಖರೀದಿಸಿದ್ದಾರೆ. ವಿರಾಟ್ ಕೊಹ್ಲಿ ಸದ್ಯ ಬಾರ್ಡರ್‌-ಗವಾಸ್ಕರ್ ಟೆಸ್ಟ್‌ ಸರಣಿಯಲ್ಲಿ ಪಾಲ್ಗೊಂಡಿರುವ ಹಿನ್ನಲೆಯಲ್ಲಿ ಅವರ ಸಹೋದರ ವಿಕಾಸ್ ಕೊಹ್ಲಿ, ಹಣಕಾಸು ಹಾಗೂ ಇತರೆ ಪ್ರಕ್ರಿಯೆಗಳನ್ನು ಮುಗಿಸಿದ್ದಾರೆ.

ಜಗತ್ತಿನ ಅತ್ಯಂತ ಶ್ರೀಮಂತ ಅಥ್ಲೀಟ್‌ಗಳಲ್ಲಿ ವಿರಾಟ್ ಕೊಹ್ಲಿ ಕೂಡಾ ಒಬ್ಬರೆನಿಸಿಕೊಂಡಿದ್ದಾರೆ. ಬಿಸಿಸಿಐನ ಕೇಂದ್ರೀಯ ಗುತ್ತಿಗೆಯಲ್ಲಿ A+ ಶ್ರೇಣಿ ಹೊಂದಿರುವ ವಿರಾಟ್ ಕೊಹ್ಲಿ, ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದಿಂದಲೂ ವಾರ್ಷಿಕ ಕೋಟ್ಯಾಂತರ ಹಣ ಗಳಿಸುತ್ತಾರೆ. ಇದಷ್ಟೇ ಅಲ್ಲದೇ, ಜಾಹೀರಾತುಗಳಿಂದಲೂ ವಿರಾಟ್ ಕೊಹ್ಲಿ ನೂರಾರು ಕೋಟಿ ರುಪಾಯಿಗಳನ್ನು ಪ್ರತಿವರ್ಷ ಜೇಬಿಗಿಳಿಸಿಕೊಳ್ಳುತ್ತಾರೆ.

ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಅತಿಹೆಚ್ಚು ಫಾಲೋವರ್ಸ್‌ ಹೊಂದಿದ ಏಷ್ಯಾದ ಸೆಲಿಬ್ರಿಟಿ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ, ಇನ್‌ಸ್ಟಾಗ್ರಾಂನಲ್ಲೂ ಹಾಕುವ ಕೆಲವೊಂದು ಪ್ರೊಮೇಷನ್ ಪೋಸ್ಟ್‌ಗಳಿಂದಲೂ ಲಕ್ಷಾಂತರ ರುಪಾಯಿ ಪಡೆದುಕೊಳ್ಳುತ್ತಾರೆ.

ಈ ವಿಲ್ಲಾದ ವಿಶೇಷತೆಗಳೇನು..?

ಹಿಂದೂಸ್ಥಾನ್ ಟೈಮ್ಸ್‌ ವರದಿಯ ಪ್ರಕಾರ, ವಿರಾಟ್ ಕೊಹ್ಲಿ ಸುಮಾರು 2,000 ಚದರಡಿಯ ಐಶಾರಾಮಿ ವಿಲ್ಲಾವನ್ನು ಖರೀದಿಸಿದ್ದಾರೆ. ಅಲಿಭಾಗ್‌ನ ಆವಾಸ್‌ ಲಕ್ಸುರಿ ಬಂಗ್ಲೋ ಪ್ರಾಜೆಕ್ಟ್‌ನ ಆವಾಸ್ ಲಿವಿಂಗ್‌ ಹೆಸರಿನ ವಿಲ್ಲಾ ಖರೀದಿಸಿದ್ದಾರೆ. ಅಡ್ವೋಕೇಟ್‌ ಮಹೇಶ್ ಮೆಹ್ತ್ರಾರೆ, ಅಲಿಭಾಗ್‌ನ ಆವಾಸ್ ಲಿವಿಂಗ್‌ನ ಕಾನೂನು ಸಲಹೆಗಾರರಾಗಿದ್ದು, ವಿಲ್ಲಾದ ಕುರಿತಂತೆ ಈ ರೀತಿ ಮಾಹಿತಿ ನೀಡಿದ್ದಾರೆ. 

"ನೈಸರ್ಗಿಕ ಸೌಂದರ್ಯದ ದೃಷ್ಟಿಯಿಂದ ಆವಾಸ್‌ ಅತ್ಯುತ್ತಮವಾದ ಆಯ್ಕೆಯಾಗಿದೆ. ಮಾಂಡ್ವಾ ಜೆಟ್ಟಿಯು ಆವಾಸ್‌ನಿಂದ ಕೇವಲ 5 ನಿಮಿಷದ ಪ್ರಯಾಣವಷ್ಟೇ. ಇನ್ನು ಸ್ಪೀಡ್‌ ಬೋಟ್‌ಗಳಿಂದಾಗಿ ಮುಂಬೈಗೆ ತಲುಪುವುದನ್ನು 15 ನಿಮಿಷಕ್ಕೆ ಇಳಿಸಿದೆ" ಎಂದು ಹೇಳಿದ್ದಾರೆ.

ಕ್ರಿಕೆಟಿಗ ಆಸ್ಟ್ರೇಲಿಯಾ ಎದುರಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಬ್ಯುಸಿಯಾಗಿರುವುದರಿಂದ ಅವರ ಸಹೋದರ ವಿಕಾಸ್ ಕೊಹ್ಲಿ, ಅಲಿಭಾಗ್ ಸಬ್‌-ರಿಜಿಸ್ಟರ್ ಕಚೇರಿಗೆ ಭೇಟಿ ನೀಡಿ ನೋಂದಣಿ ಪ್ರಕ್ರಿಯೆಯನ್ನು ಮುಗಿಸಿದ್ದಾರೆ ಎಂದು ಅಡ್ವೊಕೇಟ್ ಮಹೇಶ್‌ ತಿಳಿಸಿದ್ದಾರೆ.

ಮಾರ್ಚ್‌ 01ರಂದು ಮೈದಾನಕ್ಕಿಳಿಯಲು ಸಜ್ಜಾದ ವಿರಾಟ್ ಕೊಹ್ಲಿ: 

ಆಸ್ಟ್ರೇಲಿಯಾ ಎದುರಿನ ಎರಡನೇ ಟೆಸ್ಟ್‌ ಪಂದ್ಯವನ್ನು ಕೇವಲ ಎರಡೂವರೆ ದಿನದಲ್ಲೇ ಗೆದ್ದು ಬೀಗಿರುವ ಟೀಂ ಇಂಡಿಯಾ, ಇದೀಗ ಮೂರನೇ ಟೆಸ್ಟ್‌ ಪಂದ್ಯ ಆರಂಭಕ್ಕೂ ಮುನ್ನ ಕೆಲಕಾಲ ಬಿಡುವಿನ ಸಮಯವನ್ನು ಬಿಂದಾಸ್ ಆಗಿಯೇ ಎಂಜಾಯ್ ಮಾಡುತ್ತಿದ್ದಾರೆ. ಹೀಗಾಗಿ ಮೂರನೇ ಟೆಸ್ಟ್‌ ಪಂದ್ಯವು ಮಾರ್ಚ್‌ 01ರಿಂದ ಆರಂಭವಾಗಲಿದ್ದು, ಅಲ್ಲಿಯವರೆಗೆ ಬಿಡುವಿನ ಸಮಯವನ್ನು ಆಟಗಾರರು ಎಂಜಾಯ್ ಮಾಡುತ್ತಿದ್ದಾರೆ.

ಮೂರನೇ ಟೆಸ್ಟ್‌ ಪಂದ್ಯವು ಇಂದೋರ್‌ನ ಹೋಲ್ಕರ್‌ ಸ್ಟೇಡಿಯಂ ಆತಿಥ್ಯವನ್ನು ವಹಿಸಿದೆ. ಕೊನೆಯ ಬಾರಿಗೆ ವಿರಾಟ್ ಕೊಹ್ಲಿ ಈ ಮೈದಾನದಲ್ಲಿ ಟೆಸ್ಟ್‌ ಪಂದ್ಯವನ್ನಾಡಿದ್ದಾಗ ಆಕರ್ಷಕ ದ್ವಿಶತಕ ಚಚ್ಚಿದ್ದರು. ಅಂತಹದ್ದೇ ಮತ್ತೊಂದು ಇನಿಂಗ್ಸ್‌ ಅನ್ನು ಈ ಮೈದಾನದಲ್ಲಿ ವಿರಾಟ್ ಕೊಹ್ಲಿ ಆಡುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್‌-ಗವಾಸ್ಕರ್ ಟೆಸ್ಟ್‌ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಅನಾಯಾಸವಾದ ಗೆಲುವು ದಾಖಲಿಸುವ ಮೂಲಕ ಸರಣಿಯಲ್ಲಿ 2-0 ಮುನ್ನಡೆ ಕಾಯ್ದುಕೊಂಡಿದೆ. ಇನ್ನು ಮೂರನೇ ಟೆಸ್ಟ್ ಪಂದ್ಯವನ್ನು ಗೆದ್ದು, ಸತತ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೇರುವ ಕನಸು ಕಾಣುತ್ತಿದೆ ಟೀಂ ಇಂಡಿಯಾ. ಇನ್ನೊಂದೆಡೆ ಪ್ಯಾಟ್ ಕಮಿನ್ಸ್‌ ಅನುಪಸ್ಥಿತಿಯಲ್ಲಿ ಸ್ಟೀವ್ ಸ್ಮಿತ್ ತಂಡವನ್ನು ಮುನ್ನಡೆಸುತ್ತಿದ್ದಾರೆ.

Latest Videos
Follow Us:
Download App:
  • android
  • ios