*  ಭಾರತ-ದಕ್ಷಿಣ ಆಫ್ರಿಕಾ ಟಿ20 ಸರಣಿ ಮುಕ್ತಾಯವಾದ ಬೆನ್ನಲ್ಲೇ ನೂತನ ಟಿ20 ರ‍್ಯಾಂಕಿಂಗ್‌‌ ಪ್ರಕಟ* ನಂ.1 ಸ್ಥಾನಕ್ಕೆ ಮತ್ತಷ್ಟು ಹತ್ತಿರವಾದ ಸೂರ್ಯಕುಮಾರ್ ಯಾದವ್* ಮೊದಲ ಸ್ಥಾನದಲ್ಲೇ ಮುಂದುವರೆದ ಮೊಹಮ್ಮದ್ ರಿಜ್ವಾನ್

ದುಬೈ(ಅ.05): ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದ ರೆಡ್ ಹಾಟ್‌ ಫಾರ್ಮ್‌ನಲ್ಲಿರುವ ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟರ್ ಸೂರ್ಯಕುಮಾರ್ ಯಾದವ್, ಐಸಿಸಿ ಟಿ20 ಬ್ಯಾಟರ್‌ಗಳ ಶ್ರೇಯಾಂಕದಲ್ಲಿ ನಂ.1 ಶ್ರೇಯಾಂಕದತ್ತ ದಾಪುಗಾಲು ಹಾಕುತ್ತಿದ್ದಾರೆ. ಟಿ20 ಬ್ಯಾಟರ್‌ಗಳ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿರುವ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಹಾಗೂ ಸೂರ್ಯಕುಮಾರ್ ಯಾದವ್ ನಡುವೆ ಕೇವಲ 16 ರೇಟಿಂಗ್ ಪಾಯಿಂಟ್‌ಗಳ ವ್ಯತ್ಯಾಸವಿದೆ.

ಸೂರ್ಯಕುಮಾರ್ ಯಾದವ್‌, ಸದ್ಯ 838 ರೇಟಿಂಗ್ ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್‌ 854 ರೇಟಿಂಗ್ ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿಯೇ ಮುಂದುವರೆದಿದ್ದಾರೆ. ಮೊಹಮ್ಮದ್ ರಿಜ್ವಾನ್‌ಗೆ ತಮ್ಮ ರೇಟಿಂಗ್ ಪಾಯಿಂಟ್ಸ್‌ ಹೆಚ್ಚಿಸಿಕೊಳ್ಳುವ ಅವಕಾಶವಿತ್ತು. ಆದರೆ ಇಂಗ್ಲೆಂಡ್ ಎದುರಿನ ಆರನೇ ಟಿ20 ಪಂದ್ಯದಿಂದ ವಿಶ್ರಾಂತಿ ನೀಡಲಾಗಿತ್ತು. ಇನ್ನು ಏಳನೇ ಹಾಗೂ ನಿರ್ಣಾಯಕ ಟಿ20 ಪಂದ್ಯದಲ್ಲಿ ಮೊಹಮ್ಮದ್ ರಿಜ್ವಾನ್ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದ್ದರು. 

ಇನ್ನೊಂದೆಡೆ ಸೂರ್ಯಕುಮಾರ್ ಯಾದವ್, ದಕ್ಷಿಣ ಆಫ್ರಿಕಾ ಎದುರಿನ ಮೊದಲೆರಡು ಟಿ20 ಪಂದ್ಯಗಳಲ್ಲಿ ಸ್ಪೋಟಕ ಅರ್ಧಶತಕ ಚಚ್ಚುವ ಮೂಲಕ ಗಮನ ಸೆಳೆದಿದ್ದರು. ಮೂರನೆ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಕೇವಲ 8 ರನ್‌ಗೆ ವಿಕೆಟ್‌ ಒಪ್ಪಿಸುವ ಮೂಲಕ ನಂ.1 ಸ್ಥಾನಕ್ಕೇರುವ ಅವಕಾಶವನ್ನು ಕೈಚೆಲ್ಲಿದ್ದರು. ಮುಂಬರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಮೊಹಮ್ಮದ್ ರಿಜ್ವಾನ್ ಅವರಿಗಿಂತ ಸೂರ್ಯಕುಮಾರ್ ಯಾದವ್ ಉತ್ತಮ ಪ್ರದರ್ಶನ ತೋರಿದರೆ ಮೊದಲ ಬಾರಿಗೆ ನಂ.1 ಸ್ಥಾನಕ್ಕೇರುವ ಅವಕಾಶ ಕೂಡಿ ಬರಲಿದೆ.

ಇನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ 801 ರೇಟಿಂಗ್ ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿಯೇ ಮುಂದುವರೆದಿದ್ದಾರೆ. ಪಾಕ್ ನಾಯಕ ಕೂಡಾ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಮತ್ತೆ ನಂ.1 ಸ್ಥಾನಕ್ಕೆ ಲಗ್ಗೆಯಿಡಲು ಎದುರು ನೋಡುತ್ತಿದ್ದಾರೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಪಾಕಿಸ್ತಾನ ತಂಡವು, ನ್ಯೂಜಿಲೆಂಡ್‌ನಲ್ಲಿ ಬಾಂಗ್ಲಾದೇಶ ಜತೆಗೂಡಿ ತ್ರಿಪಕ್ಷೀಯ ಟಿ20 ಸರಣಿಯನ್ನಾಡಲಿದೆ.

T20 World Cup ಟೂರ್ನಿಯಲ್ಲಿ ಅಬ್ಬರಿಸಲು ಎದುರು ನೋಡುತ್ತಿದ್ದೇನೆಂದ ಸೂರ್ಯಕುಮಾರ್ ಯಾದವ್..!

ದಕ್ಷಿಣ ಆಫ್ರಿಕಾದ ಏಯ್ಡನ್‌ ಮಾರ್ಕ್‌ರಮ್‌ 777 ರೇಟಿಂಗ್ ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್‌ನ ಡೇವಿಡ್ ಮಲಾನ್‌ ಒಂದು ಸ್ಥಾನ ಜಿಗಿತ ಕಂಡು 733 ರೇಟಿಂಗ್ ಅಂಕಗಳೊಂದಿಗೆ 5ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನುಳಿದಂತೆ ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ಕೆ ಎಲ್ ರಾಹುಲ್, ದಕ್ಷಿಣ ಆಫ್ರಿಕಾ ಎದುರಿನ ಮೊದಲೆರಡು ಟಿ20 ಪಂದ್ಯಗಳಲ್ಲಿ ಅರ್ಧಶತಕ ಸಹಿತ ಒಟ್ಟಾರೆ 108 ರನ್ ಬಾರಿಸಿದ್ದು, ಬ್ಯಾಟರ್‌ಗಳ ಶ್ರೇಯಾಂಕದಲ್ಲಿ 3 ಸ್ಥಾನ ಜಿಗಿತ ಕಂಡು 14ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾದ ತ್ರಿವಳಿ ಆಟಗಾರರಾದ ಕ್ವಿಂಟನ್ ಡಿ ಕಾಕ್ 8 ಸ್ಥಾನ ಜಿಗಿದು 12ನೇ ಸ್ಥಾನ ತಲುಪಿದರೆ, ಕೊನೆಯ ಟಿ20 ಪಂದ್ಯದಲ್ಲಿ ಅಜೇಯ ಶತಕ ಸಿಡಿಸಿದ ರಿಲೇ ರೂಸ್ಸೋ 23 ಸ್ಥಾನ ಜಿಗಿದು 20ನೇ ಸ್ಥಾನಕ್ಕೆ ಹಾಗೂ ಡೇವಿಡ್ ಮಿಲ್ಲರ್ 10 ಸ್ಥಾನ ಜಿಗಿದು 29ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.