ಬೆಂಗಳೂರು(ಏ.21): ಭಾರತ ಕ್ರಿಕೆಟ್‌ ತಂಡದ ಬ್ಯಾಟ್ಸ್‌ಮನ್‌, ಕರ್ನಾಟಕದ ಕೆ.ಎಲ್‌.ರಾಹುಲ್‌ ಬಡ ಮಕ್ಕಳ ಕಲ್ಯಾಣ ನಿಧಿಗೆ ಹಣ ಸಹಾಯ ಮಾಡಲು ಮುಂದಾಗಿದ್ದು, ಕಳೆದ ವರ್ಷ ವಿಶ್ವಕಪ್‌ನಲ್ಲಿ ತಾವು ಬಳಸಿದ ಬ್ಯಾಟ್‌ ಹರಾಜು ಮಾಡಲು ನಿರ್ಧರಿಸಿದ್ದಾರೆ. 

ಭಾರತ್‌ ಆರ್ಮಿ ಎನ್ನುವ ಸಂಸ್ಥೆ ಜತೆ ಕೈಜೋಡಿಸಿರುವ ರಾಹುಲ್‌, ಬ್ಯಾಟ್‌, ಏಕದಿನ, ಟೆಸ್ಟ್‌, ಟಿ20 ಜೆರ್ಸಿಗಳು, ಹೆಲ್ಮೆಟ್‌ ಹಾಗೂ ಗ್ಲೌಸ್‌ಗಳನ್ನು ಆನ್‌ಲೈನ್‌ನಲ್ಲಿ ಹರಾಜು ಮಾಡಿ ಅದರಿಂದ ಬರುವ ಹಣವನ್ನು ಬಡ ಮಕ್ಕಳ ಕ್ಷೇಮಾಭಿವೃದ್ಧಿಗೆ ನೀಡುವುದಾಗಿ ಟ್ವೀಟರ್‌ನಲ್ಲಿ ತಿಳಿಸಿದ್ದಾರೆ.

ಕೆ.ಎಲ್ ರಾಹುಲ್ ತಮ್ಮ ಹುಟ್ಟುಹಬ್ಬದ ದಿನದಂದೇ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಸೋಮವಾರದಿಂದಲೇ ಹರಾಜು ಪ್ರಕ್ರಿಯೆ ಆರಂಭವಾಗಿದೆ. 2019ರ ವಿಶ್ವಕಪ್‌ನಲ್ಲಿ ಬಳಸಿದ ಬ್ಯಾಟ್(ಬ್ಯಾಟ್ ಮೇಲೆ ರಾಹುಲ್ ಹಸ್ತಾಕ್ಷರವಿದೆ), ಟೆಸ್ಟ್, ಏಕದಿನ ಹಾಗೂ ಟಿ20 ಪಂದ್ಯದಲ್ಲಿ ಧರಿಸಿದ್ದ ಜೆರ್ಸಿ ಹಾಗೂ ಬ್ಯಾಟಿಂಗ್ ಗ್ಲೌಸ್, ಹೆಲ್ಮೆಟ್ ಹಾಗೂ ಪ್ಯಾಡ್ಸ್‌ಗಳು ಹರಾಜಿನಲ್ಲಿ ಲಭ್ಯವಿವೆ.

ಹರಾಜಿನಲ್ಲಿ ಭಾಗವಹಿಸಿ ನನ್ನ ಹಾಗೂ ಮಕ್ಕಳ ಮೇಲೆ ಸ್ವಲ್ಪ ಪ್ರೀತಿ ತೋರಿ. ಇಂತಹ ಸಂಕಷ್ಟದ ಸಮಯದಲ್ಲಿ ಎಲ್ಲರೂ ಒಂದಾಗಿ ಕೊರೋನಾ ವಿರುದ್ಧ ಹೋರಾಡೋಣ, ಇನ್ನಷ್ಟು ಬಲಿಷ್ಠರಾಗೋಣ ಎಂದು ರಾಹುಲ್ ಹೇಳಿದ್ದಾರೆ.

ನನ್ನವನಿಗೆ ಹುಟ್ಟು ಹಬ್ಬದ ಶುಭಾಶಯ, ಕೆಎಲ್ ರಾಹುಲ್‌ಗೆ ಅತಿಯಾ ಶೆಟ್ಟಿ ಹಾರೈಕೆ!
 
ಜಾಗತಿಕ ಹೆಮ್ಮಾರಿ ಕೊರೋನಾ ವೈರಸ್‌ಗೆ ವಿಶ್ವದಾದ್ಯಂತ 24 ಲಕ್ಷ ಜನ ತುತ್ತಾಗಿದ್ದು, ಒಂದು ಲಕ್ಷಕ್ಕೂ ಅಧಿಕ ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಇನ್ನು ಭಾರತದಲ್ಲೂ ಕೋವಿಡ್ 19 ಪೀಡಿತರ ಸಂಖ್ಯೆ 17 ಸಾವಿರದ ಗಡಿ ದಾಟಿದೆ. ಹಲವು ಕ್ರೀಡಾತಾರೆಯಲ್ಲಿ ಈಗಾಗಲೇ ತಮ್ಮ ಕೈಲಾದ ಆರ್ಥಿಕ ಸಹಾಯವನ್ನು ಮಾಡಿದ್ದಾರೆ. ಇದರ ಜತೆಗೆ ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.