* ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಬರೋಡ ಕ್ರಿಕೆಟ್ ತಂಡ ಪ್ರಕಟ* ರಣಜಿ ಟ್ರೋಫಿ ಟೂರ್ನಿಯಿಂದ ಹೊರಗುಳಿಯಲು ತೀರ್ಮಾನಿಸಿದ ಹಾರ್ದಿಕ್ ಪಾಂಡ್ಯ* ಬರೋಡ ಕ್ರಿಕೆಟ್ ತಂಡದ ಆಯ್ಕೆಗೆ ಹಾರ್ದಿಕ್ ಪಾಂಡ್ಯ ಅಲಭ್ಯ

ಬರೋಡ(ಫೆ.07): ಟೀಂ ಇಂಡಿಯಾಗೆ (Team India) ಕಮ್‌ಬ್ಯಾಕ್ ಮಾಡುವ ಪ್ರಯತ್ನದಲ್ಲಿರುವ ಹಾರ್ದಿಕ್‌ ಪಾಂಡ್ಯ(Hardik Pandya), ಫಿಟ್ನೆಸ್ ಕಾಪಾಡಿಕೊಳ್ಳುವತ್ತ ದಿಟ್ಟ ಹೆಜ್ಜೆಯನ್ನಿಡುತ್ತಿದ್ದಾರೆ. ಇದೆಲ್ಲದರ ಹೊರತಾಗಿಯೂ 2021-22ನೇ ಸಾಲಿನ ರಣಜಿ ಟ್ರೋಫಿ (Ranji Trophy 2021-22) ಟೂರ್ನಿಯು ಇದೇ ಗುರುವಾರ(ಫೆ.10)ದಿಂದ ಆರಂಭವಾಗುತ್ತಿದೆ. ಇಧೀಗ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ರಣಜಿ ಟ್ರೋಫಿ ಟೂರ್ನಿಯಿಂದ ಹೊರಗುಳಿಯಲು ತೀರ್ಮಾನಿಸಿದ್ದಾರೆ. ಹೀಗಾಗಿ ಬರೋಡ ಕ್ರಿಕೆಟ್ ತಂಡದ (Baroda Cricket Team) ಆಯ್ಕೆಗೆ ಹಾರ್ದಿಕ್ ಪಾಂಡ್ಯ ಅಲಭ್ಯರಾಗಿದ್ದಾರೆ.

ಯುಎಇನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರುವ ಮೂಲಕ ಭಾರತ ತಂಡದ ಹೊರಬಿದ್ದಿರುವ ಹಾರ್ದಿಕ್ ಪಾಂಡ್ಯ, ಇದೀಗ ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಕಮ್‌ ಬ್ಯಾಕ್‌ ಮಾಡಲು ಚಿತ್ತ ನೆಟ್ಟಿದ್ದಾರೆ. ಇದೀಗ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಬರೋಡ ಕ್ರಿಕೆಟ್ ತಂಡ ಪ್ರಕಟವಾಗಿದ್ದು, ಕೇದಾರ್ ದೇವ್‌ಧರ್ ಬರೋಡ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಇನ್ನು ವಿಷ್ಣು ಸೋಲಂಕಿ ಉಪನಾಯಕರಾಗಿ ನೇಮಕವಾಗಿದ್ದಾರೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಹಾರ್ದಿಕ್ ಪಾಂಡ್ಯ ಪೂರ್ಣ ಪ್ರಮಾಣದ ಆಲ್ರೌಂಡರ್ ಎನಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಹಾರ್ದಿಕ್ ಪಾಂಡ್ಯ 2020ರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದಾದ ಬಳಿಕ ವೇಗದ ಬೌಲಿಂಗ್ ಮಾಡುವುದಕ್ಕೆ ಹಾರ್ದಿಕ್ ಪಾಂಡ್ಯ ಹಿಂದೇಟು ಹಾಕುತ್ತಿದ್ದಾರೆ. ಹೀಗಿದ್ದೂ ಹಾರ್ದಿಕ್ ಪಾಂಡ್ಯ ಪದೇ ಪದೇ ಬೆನ್ನು ನೋವಿಗೆ ಒಳಗಾಗುತ್ತಿದ್ದು, ಮತ್ತೊಮ್ಮೆ ಪುನಶ್ಚೇತನ ಶಿಬಿರದಲ್ಲಿ ಹಾರ್ದಿಕ್ ಪಾಂಡ್ಯ ಪಾಲ್ಗೊಂಡಿದ್ದಾರೆ. ಹಾರ್ದಿಕ್ ಪಾಂಡ್ಯ ತಾವು ಪೂರ್ಣ ಪ್ರಮಾಣದಲ್ಲಿ ಬೌಲಿಂಗ್ ಮಾಡುವಷ್ಟು ಫಿಟ್ನೆಸ್ ಗಳಿಸಿಕೊಂಡ ಬಳಿಕವಷ್ಟೇ ಟೀಂ ಇಂಡಿಯಾ ಆಯ್ಕೆಗೆ ಲಭ್ಯವಿರುವುದಾಗಿ ತಿಳಿಸಿದ್ದಾರೆ.

Ranji Trophy:ದೇಶಿ ಕ್ರಿಕೆಟ್ ಟೂರ್ನಿ ರಣಜಿ ಟ್ರೋಫಿಗೆ ಡೇಟ್ ಫಿಕ್ಸ್‌..!

ಗಾಯದ ಸಮಸ್ಯೆಯಿಂದಾಗಿ ಹಾರ್ದಿಕ್ ಪಾಂಡ್ಯ 2018ರಿಂದಲೇ ರೆಡ್‌ ಬಾಲ್ ಕ್ರಿಕೆಟ್‌ನಿಂದ ದೂರವೆ ಉಳಿದಿದ್ದಾರೆ. ಮುಂಬರುವ 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ವೇಳೆಗೆ ಹಾರ್ದಿಕ್‌ ಪಾಂಡ್ಯ ಸಂಪೂರ್ಣ ಆಲ್ರೌಂಡರ್ ಆಗಿ ಕಣಕ್ಕಿಳಿಯಲು ಎದುರು ನೋಡುತ್ತಿದ್ದಾರೆ. 2022ರ ಐಪಿಎಲ್ ಟೂರ್ನಿಯಲ್ಲಿ ಹಾರ್ದಿಕ್‌ ಪಾಂಡ್ಯ ಅಹಮದಾಬಾದ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. ಹಾರ್ದಿಕ್‌ ಪಾಂಡ್ಯ ಸಹೋದರ ಕೃನಾಲ್ ಪಾಂಡ್ಯ (Krunal Pandya) ರಣಜಿ ಟೂರ್ನಿಗೆ ಬರೋಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

Lucknow Super Giants: ಕೆ.ಎಲ್‌. ರಾಹುಲ್ ನೇತೃತ್ವದ ಹೊಸ ಐಪಿಎಲ್ ತಂಡದ ಹೆಸರು ಅನಾವರಣ..!

ಅಹಮದಾಬಾದ್ ಫ್ರಾಂಚೈಸಿಯು ಐಪಿಎಲ್‌ ಮೆಗಾ ಹರಾಜಿಗೂ ಮುನ್ನ ಹಾರ್ದಿಕ್ ಪಾಂಡ್ಯ, ರಶೀದ್ ಖಾನ್‌ಗೆ (Rashid Khan) ತಲಾ 15 ಕೋಟಿ ರುಪಾಯಿ ಹಾಗೂ ಶುಭ್‌ಮನ್ ಗಿಲ್‌ಗೆ 8 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. 2022ನೇ ಸಾಲಿನ ಐಪಿಎಲ್ ಆಟಗಾರರ ಹರಾಜು ಫೆಬ್ರವರಿ 12 ಹಾಗೂ 13ರಂದು ಬೆಂಗಳೂರಿನಲ್ಲಿ ನಡೆಯಲಿದೆ.

2021-22ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಗೆ ಬರೋಡ ತಂಡ ಹೀಗಿದೆ ನೋಡಿ:

ಕೇದಾರ್ ಜಾಧವ್(ನಾಯಕ), ವಿಷ್ಣು ಸೋಲಂಕಿ(ವಿಕೆಟ್ ಕೀಪರ್), ಪ್ರತ್ಯೂಶ್ ಕುಮಾರ್, ಶಿವಾಲಿಕ್ ಶರ್ಮಾ, ಕೃನಾಲ್ ಪಾಂಡ್ಯ, ಅಭಿಮನ್ಯುಸಿಂಗ್ ರಜಪೂತ್, ಧೃವ್ ಪಟೇಲ್, ಮಿತೇಶ್ ಪಟೇಲ್, ಲುಕ್ಮನ್ ಮೆರಿವಾಲಾ, ಬಾಬಾಶಫಿಖಾನ್ ಪಠಾಣ್(ವಿಕೆಟ್ ಕೀಪರ್), ಆತಿತ್ ಶೇಠ್, ಭಾರ್ಗವ್ ಭಟ್, ಪಾರ್ತ್ ಕೊಹ್ಲಿ, ಶಾಸ್ವತ್ ರಾವತ್, ಸೋಯೆಬ್ ಸೋಪರಿಯಾ, ಕಾರ್ತಿಕ್ ಕಾಕಡೆ, ಗುರ್ಜಿಂಧರ್ ಸಿಂಗ್ ಮನ್‌, ಜೋತ್ಸಿಲ್ ಸಿಂಗ್, ನಿನಾದ್ ರತ್ವಾ ಹಾಗೂ ಅಕ್ಷಯ್ ಮೋರೆ.