ಮೆಲ್ಬರ್ನ್(ಜ.04)‌: ಜನವರಿ 7ರಿಂದ 3ನೇ ಟೆಸ್ಟ್‌ ಆರಂಭಗೊಳ್ಳಲಿದ್ದು, ಸೋಮವಾರ ಭಾರತ ಹಾಗೂ ಆಸ್ಪ್ರೇಲಿಯಾ ತಂಡಗಳು ಮೆಲ್ಬರ್ನ್‌ನಿಂದ ಸಿಡ್ನಿಗೆ ಪ್ರಯಾಣಿಸಲಿವೆ. ಸಿಡ್ನಿಯಲ್ಲಿ ಉಭಯ ತಂಡಗಳಿಗೆ ಕೇವಲ 2 ದಿನಗಳು ಮಾತ್ರ ಅಭ್ಯಾಸ ನಡೆಸಲು ಸಮಯ ಸಿಗಲಿದೆ. ಇದೇ ವೇಳೆ ಭಾನುವಾರ ಭಾರತ ತಂಡದ ಅಭ್ಯಾಸಕ್ಕೆ ಮಳೆ ಅಡ್ಡಿಯಾಯಿತು. ಆಟಗಾರರು ಒಳಾಂಗಣ ಅಭ್ಯಾಸದ ಜೊತೆಗೆ ಜಿಮ್‌ನಲ್ಲಿ ಫಿಟ್ನೆಸ್‌ ಟ್ರೈನಿಂಗ್‌ ಕಡೆಗೆ ಹೆಚ್ಚು ಗಮನ ಹರಿಸಿದರು.

ರೋಹಿತ್‌, ಗಿಲ್‌ ಕಣಕ್ಕೆ?: ರೆಸ್ಟೋರೆಂಟ್‌ನಲ್ಲಿ ಅಭಿಮಾನಿಯೊಬ್ಬನ ಸಂಪರ್ಕಕ್ಕೆ ಬಂದಿರುವುದಾಗಿ ಆರೋಪಿಸಿರುವ ಕ್ರಿಕೆಟ್‌ ಆಸ್ಪ್ರೇಲಿಯಾ, ಬಿಸಿಸಿಐ ಮೇಲೂ ಒತ್ತಡ ಹೇರಿ ಜಂಟಿ ತನಿಖೆಗೆ ಮುಂದಾಗಿದೆ. ರೋಹಿತ್‌ ಶರ್ಮಾ, ಶುಭ್‌ಮನ್‌ ಗಿಲ್‌, ರಿಷಭ್‌ ಪಂತ್‌, ಪೃಥ್ವಿ ಶಾ ಹಾಗೂ ನವ್‌ದೀಪ್‌ ಸೈನಿಯನ್ನು ಸದ್ಯ ಪ್ರತ್ಯೇಕಗೊಳಿಸಲಾಗಿದ್ದು, ತಂಡದೊಂದಿಗೆ ಅಭ್ಯಾಸ ನಡೆಸದಿರಲು ಸೂಚಿಸಲಾಗಿದೆ. ಈ ಆಟಗಾರರು ಹೆಚ್ಚುವರಿ ಕೋವಿಡ್‌ ಪರೀಕ್ಷೆಗೆ ಒಳಪಡುವ ಸಾಧ್ಯತೆ ಇದೆ.

ನಿಯಮ ಪಾಲಿಸಲು ಆಗಲ್ಲ ಅಂದ್ರೆ ಇಲ್ಲಿಗೆ ಬರಬೇಡಿ; ಟೀಂ ಇಂಡಿಯಾ ಆಟಗಾರರಿಗೆ ಖಡಕ್ ವಾರ್ನಿಂಗ್

ಕ್ರಿಕೆಟ್‌ ಆಸ್ಪ್ರೇಲಿಯಾ ಅನಗತ್ಯವಾಗಿ ವಿವಾದ ಸೃಷ್ಟಿಸುತ್ತಿದೆ ಎಂದು ಬಿಸಿಸಿಐ ಅಧಿಕಾರಿಗಳು ಆರೋಪಿಸಿದ್ದು, ಐವರು ಆಟಗಾರರನ್ನು ಬೆಂಬಲಿಸಲು ನಿರ್ಧರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಸದ್ಯದ ಮಟ್ಟಿಗೆ ಆಟಗಾರರು ಪಂದ್ಯದಲ್ಲಿ ಆಡಲು ಯಾವುದೇ ಸಮಸ್ಯೆ ಇಲ್ಲ ಎನ್ನಲಾಗಿದೆ. ರೋಹಿತ್‌, ಗಿಲ್‌ ಹಾಗೂ ಪಂತ್‌ಗೆ ಆಡುವ ಹನ್ನೊಂದರಲ್ಲಿ ಸ್ಥಾನ ಸಿಗುವುದು ಖಚಿತ ಎಂದೇ ಹೇಳಲಾಗಿದೆ.