Asianet Suvarna News Asianet Suvarna News

Bangladesh Vs Pakistan Series: ಕುತೂಹಲ ಘಟ್ಟಕ್ಕೆ ಬಾಂಗ್ಲಾ-ಪಾಕ್‌ ಮೊದಲ ಟೆಸ್ಟ್‌..!

* ಪಾಕಿಸ್ತಾನ ಎದುರು ಮೊದಲ ಇನಿಂಗ್ಸ್‌ನಲ್ಲಿ ಅಲ್ಪ ಮುನ್ನಡೆ ಪಡೆದ ಬಾಂಗ್ಲಾದೇಶ

* ಉತ್ತಮ ಆರಂಭದ ಹೊರತಾಗಿಯೂ ನಾಟಕೀಯ ಕುಸಿತ ಕಂಡ ಪಾಕಿಸ್ತಾನ

* ಬಾಂಗ್ಲಾದೇಶ ಪರ 7 ವಿಕೆಟ್ ಕಬಳಿಸಿದ ತೈಜುಲ್ ಇಸ್ಲಾಂ

Taijul Islam Sensational Performance Helps Bangladesh lead over Pakistan in 1st Test match kvn
Author
Bengaluru, First Published Nov 29, 2021, 9:39 AM IST

ಚಿತ್ತಗಾಂಗ್(ನ.29)‌: ಪಾಕಿಸ್ತಾನ ಹಾಗೂ ಬಾಂಗ್ಲಾದೇಶ (Pakistan vs Bangladesh) ನಡುವಿನ ಮೊದಲ ಟೆಸ್ಟ್‌ ಪಂದ್ಯ ಕುತೂಹಲದ ಘಟ್ಟಕ್ಕೆ ತಲುಪಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 44 ರನ್‌ ಮುನ್ನಡೆ ಪಡೆದಿರುವ ಆತಿಥೇಯ ಬಾಂಗ್ಲಾ 2ನೇ ಇನ್ನಿಂಗ್ಸ್‌ನಲ್ಲಿ ಆರಂಭಿಕ ಕುಸಿತಕ್ಕೆ ಒಳಗಾಗಿದೆ. 3ನೇ ದಿನದಂತ್ಯಕ್ಕೆ 4 ವಿಕೆಟ್‌ ನಷ್ಟಕ್ಕೆ ಕೇವಲ 39 ರನ್‌ ಗಳಿಸಿದ್ದು, 83 ರನ್‌ ಮುನ್ನಡೆಯಲ್ಲಿದೆ. ಮುಷ್ಫಿಕುರ್‌ ರಹೀಂ 12, ಯಾಸಿರ್‌ ಅಲಿ 4ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಬಾಂಗ್ಲಾದೇಶ ತಂಡವು (Bangladesh Cricket Team) ಪಾಕ್‌ ವೇಗಿಗಳ ಮಾರಕ ದಾಳಿಗೆ ತತ್ತರಿಸಿ ಕೇವಲ 49 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಐದನೇ ವಿಕೆಟ್‌ಗೆ ಲಿಟನ್ ದಾಸ್ (Liton Das) ಹಾಗೂ ಅನುಭವಿ ಬ್ಯಾಟರ್ ಮುಷ್ಫಿಕುರ್ ರಹೀಮ್ ಜೋಡಿ 206 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಮುಷ್ಪಿಕುರ್ 91 ರನ್ ಬಾರಿಸಿ ಕೇವಲ 9 ರನ್‌ಗಳಿಂದ ಶತಕ ವಂಚಿತರಾದರೆ, ಲಿಟನ್ ದಾಸ್ 114 ರನ್‌ ಬಾರಿಸಿ ಹಸನ್‌ ಅಲಿಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಬಾಂಗ್ಲಾದೇಶ ತಂಡವು ಮೊದಲ ಇನಿಂಗ್ಸ್‌ನಲ್ಲಿ 330 ರನ್ ಬಾರಿಸಿ ಸರ್ವಪತನ ಕಂಡಿತು. 

ಪಾಕಿಸ್ತಾನ ತಂಡದ ಪರ ವೇಗಿ ಹಸನ್ ಅಲಿ (Hasan Ali) 51 ರನ್ ನೀಡಿ 5 ವಿಕೆಟ್ ಪಡೆದರೆ, ಶಾಹೀನ್ ಅಫ್ರಿದಿ (Shaheen Afridi), ಫಾಹಿಮ್ ಅಶ್ರಫ್ ತಲಾ 2 ವಿಕೆಟ್ ಪಡೆದರು. ಇನ್ನು ಸಾಜಿದ್ ಖಾನ್ ಒಂದು ವಿಕೆಟ್ ಪಡೆದರು.  330 ರನ್‌ ಗಳಿಸಿದ್ದ ಬಾಂಗ್ಲಾಗೆ ಉತ್ತರವಾಗಿ ಬ್ಯಾಟ್‌ ಮಾಡಿದ ಪಾಕ್‌, ಉತ್ತಮ ಆರಂಭವನ್ನೇ ಪಡೆದಿತ್ತು. ಮೊದಲ ವಿಕೆಟ್‌ಗೆ  ಆಬಿದ್‌ ಅಲಿ ಹಾಗೂ ಶಫೀಖ್‌ ಜೋಡಿ 146 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಆಬಿದ್‌ ಅಲಿ 133, ಶಫೀಖ್‌ 52 ರನ್‌ ಗಳಿಸಿದರು. ಇದಾದ ಬಳಿಕ ತೈಜುಲ್‌ ಇಸ್ಲಾಂ ಮಾರಕ ದಾಳಿಗೆ ತತ್ತರಿಸಿದ ಪಾಕಿಸ್ತಾನ ಕೇವಲ 286 ರನ್‌ಗಳಿಗೆ ಸರ್ವಪತನ ಕಂಡಿತು. 

Ind vs NZ Kanpur Test: ಹರ್ಭಜನ್ ಸಿಂಗ್ ವಿಕೆಟ್‌ ದಾಖಲೆ ಸರಿಗಟ್ಟಿದ ರವಿಚಂದ್ರನ್ ಅಶ್ವಿನ್‌..!

ಬಾಂಗ್ಲಾದೇಶ ಕ್ರಿಕೆಟ್ ತಂಡದ ಪರ ತೈಜುಲ್‌ ಇಸ್ಲಾಂ  116 ರನ್‌ ನೀಡಿ 7 ವಿಕೆಟ್ ಕಬಳಿಸುವ ಮೂಲಕ ಪಾಕ್‌ ಬ್ಯಾಟರ್‌ಗಳನ್ನು ಕಾಡಿದರು. ಇನ್ನು ಇಬಾದತ್ ಹೊಸೈನ್ 2 ಹಾಗೂ ಮೆಹದಿ ಹಸನ್ ಒಂದು ವಿಕೆಟ್ ಪಡೆದರು.

ಸ್ಕೋರ್‌: ಬಾಂಗ್ಲಾ ಮೊದಲ ಇನ್ನಿಂಗ್ಸ್‌ 330/10 
ಪಾಕ್‌ ಮೊದಲ ಇನ್ನಿಂಗ್ಸ್‌ 286/10
ಬಾಂಗ್ಲಾ 2ನೇ ಇನ್ನಿಂಗ್ಸ್‌ 39/4

(* ನಾಲ್ಕನೇ ದಿನದಾಟದಂತ್ಯದ ವೇಳೆಗೆ)

ಶ್ರೀಲಂಕಾದ 6 ಕ್ರಿಕೆಟ್‌ ಆಟಗಾರ್ತಿಯರಿಗೆ ಸೋಂಕು

ಹರಾರೆ: ಜಿಂಬಾಬ್ವೆಯ ಹರಾರೆಯಲ್ಲಿ ನಡೆಯುತ್ತಿದ್ದ ಮಹಿಳಾ ಏಕದಿನ ವಿಶ್ವಕಪ್‌ನ ಅರ್ಹತಾ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಶ್ರೀಲಂಕಾದ 6 ಆಟಗಾರ್ತಿಯರಿಗೆ ಕೋವಿಡ್‌ ಸೋಂಕು (Coronavirus) ದೃಢಪಟ್ಟಿದೆ. ಈ ಬಗ್ಗೆ ಭಾನುವಾರ ಮಾಹಿತಿ ನೀಡಿದ ಲಂಕಾ ಕ್ರಿಕೆಟ್‌ ಮಂಡಳಿ (Sri Lanka Cricket Board), ತಂಡದ 6 ಆಟಗಾರ್ತಿಯರು ಕೋವಿಡ್‌ಗೆ ತುತ್ತಾಗಿದ್ದಾರೆ. 

ಜಿಂಬಾಬ್ವೆಯಿಂದ ನಮ್ಮ ತಂಡದ ಆಟಗಾರ್ತಿಯರನ್ನು ಶ್ರೀಲಂಕಾಕ್ಕೆ ಕರೆ ತರಲು ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ. ಆಫ್ರಿಕಾ ಭಾಗದಲ್ಲಿ ಕೋವಿಡ್‌ ವೈರಸ್‌ನ ಹೊಸ ರೂಪಾಂತರಿ ಕಾಣಿಸಿಕೊಂಡ ಕಾರಣ ಅರ್ಹತಾ ಪಂದ್ಯಾವಳಿಯನ್ನು ಐಸಿಸಿ ಶನಿವಾರ ಅರ್ಧಕ್ಕೆ ಮೊಟಕುಗೊಳಿಸಿತ್ತು.

Follow Us:
Download App:
  • android
  • ios