T20 World Cup ಕೊಹ್ಲಿ, ರೋಹಿತ್, ಸೂರ್ಯ ಫಿಫ್ಟಿ; ನೆದರ್‌ಲೆಂಡ್ಸ್‌ಗೆ ಸವಾಲಿನ ಗುರಿ ನೀಡಿದ ಟೀಂ ಇಂಡಿಯಾ..!
ನೆದರ್‌ಲೆಂಡ್ ಎದುರು ಬೃಹತ್ ಮೊತ್ತ ಕಲೆಹಾಕಿದ ಟೀಂ ಇಂಡಿಯಾ
ಆಕರ್ಷಕ ಅರ್ಧಶತಕ ಚಚ್ಚಿದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್
ನೆದರ್‌ಲೆಂಡ್ಸ್‌ಗೆ ಗೆಲ್ಲಲು 180 ರನ್‌ಗಳ ಕಠಿಣ ಗುರಿ ನೀಡಿದ ಟೀಂ ಇಂಡಿಯಾ
ಸಿಡ್ನಿ(ಅ.27): ನಾಯಕ ರೋಹಿತ್ ಶರ್ಮಾ(53), ವಿರಾಟ್ ಕೊಹ್ಲಿ(62*) ಹಾಗೂ ಸೂರ್ಯಕುಮಾರ್ ಯಾದವ್(51*) ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ ಟೀಂ ಇಂಡಿಯಾ ಕೇವಲ 2 ವಿಕೆಟ್ ಕಳೆದುಕೊಂಡು 179 ರನ್ ಬಾರಿಸಿದ್ದು, ಗೆಲ್ಲಲು ನೆದರ್‌ಲೆಂಡ್ಸ್ ತಂಡಕ್ಕೆ ಕಠಿಣ ಗುರಿ ನೀಡಿದೆ. ಐಸಿಸಿ ಟಿ20 ವಿಶ್ವಕಪ್ ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದಲ್ಲಿ ಈಗಾಗಲೇ ಮೊದಲ ಗೆಲುವು ದಾಖಲಿಸಿ ಬೀಗುತ್ತಿರುವ ಟೀಂ ಇಂಡಿಯಾ, ಇದೀಗ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ.
ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಕನ್ನಡಿಗ ಕೆ ಎಲ್ ರಾಹುಲ್ ನೆದರ್‌ಲೆಂಡ್ಸ್ ವಿರುದ್ದ ಸಿಡಿಯಬಹುದು ಎನ್ನುವ ನಿರೀಕ್ಷೆ ಮತ್ತೊಮ್ಮೆ ಹುಸಿಯಾಯಿತು. ಕೆ ಎಲ್ ರಾಹುಲ್ 12 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಸಹಿತ ಕೇವಲ 9 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ರೋಹಿತ್-ವಿರಾಟ್-ಸೂರ್ಯ ಆಕರ್ಷಕ ಫಿಫ್ಟಿ: ಟೀಂ ಇಂಡಿಯಾ 11 ರನ್‌ಗಳಿಸುವಷ್ಟರಲ್ಲೇ ಕೆ ಎಲ್ ರಾಹುಲ್ ವಿಕೆಟ್ ಕಳೆದುಕೊಂಡಿತು. ಆದರೆ ಎರಡನೇ ವಿಕೆಟ್‌ಗೆ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಆಕರ್ಷಕ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಮೊದಲ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದ ನಾಯಕ ರೋಹಿತ್ ಶರ್ಮಾ, ಎರಡನೇ ಪಂದ್ಯದಲ್ಲಿ ಆಕರ್ಷಕ ಬ್ಯಾಟಿಂಗ್ ನಡೆಸುವ ಮೂಲಕ ಗಮನ ಸೆಳೆದರು. ಎರಡನೇ ವಿಕೆಟ್‌ಗೆ ವಿರಾಟ್ ಕೊಹ್ಲಿ ಜತೆಗೂಡಿ 73 ರನ್‌ಗಳ ಜತೆಯಾಟವಾಡಿದರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ರೋಹಿತ್ ಶರ್ಮಾ ಕೇವಲ 39 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಆಕರ್ಷಕ 53 ರನ್ ಬಾರಿಸಿ ಫ್ರಿಡ್ ಕ್ಲಾಸೆನ್‌ಗೆ ವಿಕೆಟ್ ಒಪ್ಪಿಸಿದರು.
BCCI ಐತಿಹಾಸಿಕ ತೀರ್ಮಾನ; ಭಾರತ ಪುರುಷ-ಮಹಿಳಾ ಕ್ರಿಕೆಟಿಗರಿಗೆ ಸಮಾನ ಸಂಭಾವನೆ..!
12ನೇ ಓವರ್‌ನ ಕೊನೆಯ ಎಸೆತದಲ್ಲಿ ರೋಹಿತ್ ಶರ್ಮಾ ವಿಕೆಟ್ ಒಪ್ಪಿಸಿದರು. ರೋಹಿತ್ ಅಬ್ಬರಿಸುವವರೆಗೂ ಶಾಂತ ರೀತಿಯಲ್ಲಿ ಬ್ಯಾಟ್ ಬೀಸಿದ ಮಾಜಿ ನಾಯಕ ವಿರಾಟ್ ಕೊಹ್ಲಿ, ರೋಹಿತ್ ವಿಕೆಟ್ ಪತನದ ಬಳಿಕ ಸೂರ್ಯಕುಮಾರ್ ಯಾದವ್ ಜತೆಗೂಡಿ ಟೀಂ ಇಂಡಿಯಾ ರನ್ ವೇಗಕ್ಕೆ ಚುರುಕು ಮುಟ್ಟಿಸಿದ್ದರು. ಮೂರನೇ ವಿಕೆಟ್‌ಗೆ ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಕೊನೆಯ 8 ಓವರ್‌ಗಳಲ್ಲಿ ಮುರಿಯದ 95 ರನ್‌ಗಳ ಜತೆಯಾಟ ನಿಭಾಯಿಸಿದರು. ಪಾಕಿಸ್ತಾನ ವಿರುದ್ದ ಅಜೇಯ 82 ರನ್ ಬಾರಿಸಿದ್ದ ವಿರಾಟ್ ಕೊಹ್ಲಿ, ಇದೀಗ ನೆದರ್‌ಲೆಂಡ್ಸ್ ಎದುರು ಕೇವಲ 44 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 62 ರನ್ ಸಿಡಿಸಿದರು. ಇನ್ನು ಕೊನೆಯಲ್ಲಿ ವಿಸ್ಪೋಟಕ ಬ್ಯಾಟಿಂಗ್ ನಡೆಸಿದ ಸೂರ್ಯಕುಮಾರ್ ಯಾದವ್ ಕೇವಲ 25 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 51 ರನ್ ಬಾರಿಸಿ ಮಿಂಚಿದರು. ಸೂರ್ಯಕುಮಾರ್ ಯಾದವ್ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಟಿ20 ವಿಶ್ವಕಪ್‌ನಲ್ಲಿ ಮೊದಲ ಅರ್ಧಶತಕ ಬಾರಿಸಿ ಸಂಭ್ರಮಿಸಿದರು.