Asianet Suvarna News Asianet Suvarna News

T20 World Cup: ಕ್ಯಾಚ್‌ ಬಿಟ್ಟ ಹಸನ್ ಅಲಿ ವ್ಯಾಪಕ ಟ್ರೋಲ್; ಮ್ಯಾಚ್ ಫಿಕ್ಸಿಂಗ್ ಆರೋಪ..!

* ಆಸ್ಟ್ರೇಲಿಯಾ ಎದುರು ರೋಚಕ ಸೋಲು ಕಂಡ ಪಾಕಿಸ್ತಾನ

* ಮಹತ್ವದ ಘಟ್ಟದಲ್ಲಿ ಕ್ಯಾಚ್ ಚೆಲ್ಲಿ ವಿಲನ್ ಆದ ಹಸನ್ ಅಲಿ

* ಹಸನ್ ಅಲಿ ವಿರುದ್ದ ಮುಗಿಬಿದ್ದ ಪಾಕ್ ಕ್ರಿಕೆಟ್ ಫ್ಯಾನ್ಸ್

T20 World Cup Hasan Ali faces abuse being a Shia Muslim blame him for match loss against Australia kvn
Author
Bengaluru, First Published Nov 13, 2021, 8:15 AM IST
  • Facebook
  • Twitter
  • Whatsapp

ದುಬೈ(ನ.13): ಐಸಿಸಿ ಟಿ20 ವಿಶ್ವಕಪ್‌ (ICC T20 World Cup) ಸೆಮಿಫೈನಲ್‌ನಲ್ಲಿ ಆಸ್ಪ್ರೇಲಿಯಾ ವಿರುದ್ಧ ಪಾಕಿಸ್ತಾನ ಸೋತ ಬಳಿಕ ತಂಡದ ವೇಗದ ಬೌಲರ್‌ ಹಸನ್‌ ಅಲಿ (Hasan Ali) ಭಾರಿ ಟೀಕೆ, ನಿಂದನೆಗೆ ಗುರಿಯಾಗಿದ್ದಾರೆ. ಪಾಕ್‌ ವಿರುದ್ಧ ಭಾರತ ಸೋತ ಬಳಿಕ ವೇಗಿ ಮೊಹಮದ್‌ ಶಮಿಯನ್ನು ನಿಂದಿಸಿದ ರೀತಿಯಲ್ಲೇ ಹಸನ್‌ರನ್ನೂ ನಿಂದಿಸಲಾಗಿದೆ.

ಗುರುವಾರ ನಡೆದ ಪಂದ್ಯದ 19ನೇ ಓವರ್‌ನಲ್ಲಿ ಮ್ಯಾಥ್ಯೂ ವೇಡ್‌ ನೀಡಿದ್ದ ಕ್ಯಾಚ್‌ ಹಿಡಿಯಲು ಅಲಿ ವಿಫಲರಾಗಿದ್ದರು. ಮುಂದಿನ 3 ಎಸೆತಗಳಲ್ಲಿ ಸತತ ಸಿಕ್ಸರ್‌ ಸಿಡಿಸಿದ ವೇಡ್‌ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಪಂದ್ಯದ ಬಳಿಕ ಅಲಿ ಪಾಕ್‌ ಅಭಿಮಾನಿಗಳಿಂದ ತೀವ್ರ ಟೀಕೆಯನ್ನು ಎದುರಿಸಿದ್ದು, ಸಾಮಾಜಿಕ ತಾಣಗಳಲ್ಲಿ ಮೀಮ್ಸ್‌, ವಿಡಿಯೋ, ಪೋಟೋ ಮೂಲಕ ವೈಯಕ್ತಿಕ ನಿಂದನೆ ಮಾಡಿದ್ದಾರೆ. ಕೆಲವರು ಶಿಯಾ ಮುಸ್ಲಿಂ ಎಂಬ ಕಾರಣಕ್ಕೆ ಅಲಿಯನ್ನು ಗುರಿಯಾಗಿಸಿದ್ದರೆ, ಇನ್ನೂ ಕೆಲವರು ಅಲಿ ಅವರ ಪತ್ನಿ ಭಾರತೀಯಳು. ಅವರು ಮ್ಯಾಚ್‌ ಫಿಕ್ಸಿಂಗ್‌ (Match Fixing) ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

T20 World Cup: Aus vs Pak: ಪಾಕ್‌ ವಿಶ್ವಕಪ್‌ ವ್ಯಥೆ, 3 ದಶಕಗಳಿಂದ ಪಾಕ್‌ಗೆ ಆಸೀಸ್‌ ನಾಕೌಟ್ ಪಂಚ್‌..!

ಇದರ ಬೆನ್ನಲ್ಲೇ ಹಲವರು ಅಲಿಯನ್ನು ಬೆಂಬಲಿಸಿ ಪೋಸ್ಟ್‌, ಕಮೆಂಟ್‌ಗಳನ್ನು ಮಾಡಿದ್ದಾರೆ. ತಂಡದ ನಾಯಕ ಬಾಬರ್‌ ಆಜಂ (Babar Azam) ಕೂಡಾ ಹಸನ್‌ರ ಬೆನ್ನಿಗೆ ನಿಂತಿದ್ದು, ಆಟಗಾರರು ಕ್ಯಾಚ್‌ ಕೈ ಚೆಲ್ಲುವುದು ಕ್ರಿಕೆಟ್‌ನಲ್ಲಿ ಸಾಮಾನ್ಯ ಎಂದಿದ್ದಾರೆ. ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ್ದ ಬಾಬರ್ ಅಜಂ, ಅದೊಂದು ಕ್ಯಾಚ್ ಹಿಡಿದಿದ್ದರೆ, ಪಂದ್ಯದ ಲೆಕ್ಕಾಚಾರವೇ ತಲೆಕೆಳಗೆ ಆಗುತ್ತಿತ್ತು ಎಂದಿದ್ದರು. ಇದಾದ ಬಳಿಕ ಡ್ರೆಸ್ಸಿಂಗ್‌ ರೂಂನಲ್ಲಿ ಈ ಸೋಲಿಗೆ ಯಾರೊಬ್ಬರನ್ನು ಹೊಣೆ ಮಾಡುವುದು ಬೇಡ ಎಂದು ನಾಯಕ, ಹಸನ್ ಅಲಿ ಬೆಂಬಲಕ್ಕೆ ನಿಂತಿದ್ದರು. ಆಸ್ಟ್ರೇಲಿಯಾ ಎದುರು 4 ಓವರ್‌ ಎಸೆದು 44 ರನ್‌ ನೀಡಿ ಅಲಿ ಬೌಲಿಂಗ್‌ನಲ್ಲೂ ದುಬಾರಿಯಾಗಿದ್ದರು.

ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ಪಾಕ್:

ಯುಎಇನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದಲ್ಲಿ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡವು (Pakistan Cricket Team) ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಅಮೋಘ ಪ್ರದರ್ಶನ ತೋರುವ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತ್ತು. ಅದರಲ್ಲೂ ಪಾಕ್ ತಾನಾಡಿದ ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾ (Team India) ವಿರುದ್ದ 10 ವಿಕೆಟ್‌ಗಳ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು. ಈ ಮೂಲಕ ವಿಶ್ವಕಪ್ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತ ವಿರುದ್ದ ಪಾಕಿಸ್ತಾನ ಗೆಲುವಿನ ರುಚಿ ಕಂಡಿತ್ತು. ಇದಾದ ಬಳಿಕ ನ್ಯೂಜಿಲೆಂಡ್ ಸೇರಿದಂತೆ ಸೂಪರ್ 12 ಹಂತದ ಎಲ್ಲಾ 5 ತಂಡಗಳ ಮೇಲು ಭರ್ಜರಿ ಗೆಲುವು ಸಾಧಿಸಿ ಅಜೇಯವಾಗಿ ಸೆಮೀಸ್‌ಗೆ ಲಗ್ಗೆಯಿಟ್ಟಿತ್ತು.

ಇನ್ನು ಸೆಮೀಸ್‌ನಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಾಕಿಸ್ತಾನ ತಂಡವು ಮೊಹಮ್ಮದ್ ರಿಜ್ವಾನ್, ಫಖರ್ ಜಮಾನ್ ಅವರ ಸ್ಪೋಟಕ ಅರ್ಧಶತಕದ ನೆರವಿನಿಂದ 4 ವಿಕೆಟ್ ಕಳೆದುಕೊಂಡು 176 ರನ್‌ ಬಾರಿಸಿತ್ತು. ಬಳಿಕ ಈ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು ಇನ್ನೂ ಒಂದು ಓವರ್‌ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿತು. ಇದರೊಂದಿಗೆ ಎರಡನೇ ಐಸಿಸಿ ಟಿ20 ವಿಶ್ವಕಪ್ ಗೆಲ್ಲುವ ಪಾಕಿಸ್ತಾನದ ಕನಸು ಭಗ್ನವಾಗಿದೆ.

Follow Us:
Download App:
  • android
  • ios