10ನೇ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನವೇ ಹಾಲಿ ಚಾಂಪಿಯನ್ ಭಾರತ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಪ್ರತಿಭಾನ್ವಿತ ಆಲ್ರೌಂಡರ್ ಹರ್ಷಿತ್ ರಾಣಾ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಬೀಳುವ ಸಾಧ್ಯತೆಯಿದ್ದು, ಅವರ ಬದಲಿಗೆ ಮೊಹಮ್ಮದ್ ಸಿರಾಜ್ ತಂಡ ಸೇರಬಹುದು ಎಂದು ವರದಿಯಾಗಿದೆ.
ಬೆಂಗಳೂರು: ಬಹುನಿರೀಕ್ಷಿತ 10ನೇ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಹೀಗಿರುವಾಗಲೇ ಹಾಲಿ ಚಾಂಪಿಯನ್ ಭಾರತ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ತಂಡದ ಪ್ರತಿಭಾನ್ವಿತ ಬೌಲಿಂಗ್ ಆಲ್ರೌಂಡರ್ ಹರ್ಷಿತ್ ರಾಣಾ ಗಾಯದ ಸಮಸ್ಯೆಯಿಂದ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ ಎಂದು ವರದಿಯಾಗಿದೆ. ಇದು ಟೀಂ ಇಂಡಿಯಾ ಪಾಲಿಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸುವ ಸಾಧ್ಯತೆಯಿದೆ.
ಹರ್ಷಿತ್ ರಾಣಾಗೆ ಗಾಯ; ಟೂರ್ನಿಯಿಂದ ಔಟ್?
ಹೌದು, ಕಳೆದ ಒಂದು ವರ್ಷದಿಂದಲೂ ಟೀಂ ಇಂಡಿಯಾ ಮೂರೂ ಮಾದರಿಯಲ್ಲೂ ಮಿಂಚುತ್ತಾ ಬಂದಿರುವ ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಪಾಲಿನ ನೀಲಿಗಣ್ಣಿನ ಹುಡುಗ, ಇದೀಗ ದಕ್ಷಿಣ ಆಫ್ರಿಕಾ ಎದುರಿನ ಅಭ್ಯಾಸ ಪಂದ್ಯದ ವೇಳೆ ಗಾಯಗೊಂಡಿದ್ದರು. ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಫೆಬ್ರವರಿ 04ರಂದು ನಡೆದ ಅಭ್ಯಾಸ ಪಂದ್ಯ ವೇಳೆಯಲ್ಲಿ ಹರ್ಷಿತ್ ರಾಣಾ ಗಾಯಗೊಂಡಿದ್ದರು. ಹೀಗಾಗಿ ಕೇವಲ ಒಂದು ಓವರ್ ಬೌಲಿಂಗ್ ಮಾಡಿ ಮೊಣಕಾಲು ನೋವಿನಿಂದ ಕುಂಟುತ್ತಲೇ ಮೈದಾನ ತೊರೆದರು. ರಾಣಾ, ಹರಿಣಗಳೆದುರಿನ ಅಭ್ಯಾಸ ಪಂದ್ಯದಲ್ಲಿ ಗಾಯಗೊಂಡಿದ್ದರು.
ಗಾಯಗೊಂಡ ಹರ್ಷಿತ್ ರಾಣಾ ಸ್ಕ್ಯಾನ್‌ಗೆ ಒಳಗಾಗಿದ್ದರು. ಇದಾದ ಬಳಿಕ ಗಾಯದ ಪ್ರಮಾಣವನ್ನು ವಿಶ್ಲೇಷಣೆ ಮಾಡಿದ ಬಿಸಿಸಿಐ ವೈದ್ಯಕೀಯ ಸಿಬ್ಬಂದಿಗಳು ಬಲಮೊಣಕಾಲಿನಲ್ಲಿ ಗಂಭೀರ್ ಗಾಯವಾಗಿರುವುದು ಬೆಳಕಿಗೆ ಬಂದಿದೆ.
ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ, ಶನಿವಾರ, ಯುಎಸ್‌ಎ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಇನ್ನು ಹರ್ಷಿತ್ ರಾಣಾ ಗಾಯದ ಬಗ್ಗೆ ಪ್ರತಿಕ್ರಿಯಿಸಿರುವ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, 'ಹರ್ಷಿತ್ ರಾಣಾ ಅವರ ಅಷ್ಟೊಂದು ಸಮರ್ಪಕವಾಗಿಲ್ಲ. ಅವರಿಗೆ ಏನಾಗಿದೆ ಎಂದು ಇಂದು ತಿಳಿಯಲಿದೆ' ಎಂದು ಹೇಳಿದ್ದಾರೆ.
ಒಂದು ವೇಳೆ ಹರ್ಷಿತ್ ರಾಣಾ ಟೂರ್ನಿಯಿಂದಲೇ ಹೊರಬಿದ್ದರೇ, ಅದು ದೊಡ್ಡ ಹೊಡೆತ ಎನಿಸಲಿದೆ. ಹಾಗೇನಾದರೂ ಆದರೆ ನಾವು ಹೊಸ ಕಾಂಬಿನೇಷನ್ ಮಾಡುವ ಬಗ್ಗೆ ಆಲೋಚಿಸಲಿದ್ದೇವೆ. ಆದ್ರೆ ಸದ್ಯಕ್ಕೆ ನಮ್ಮ ತಂಡದ ಬೆಂಚ್ ಸ್ಟ್ರೆಂಥ್ ಉತ್ತಮವಾಗಿದೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.
ಮೊಹಮ್ಮದ್ ಸಿರಾಜ್‌ಗೆ ಸಿಗುತ್ತಾ ಬುಲಾವ್:
ಇನ್ನು ಒಂದು ವೇಳೆ ಹರ್ಷಿತ್ ರಾಣಾ ಟೀಂ ಇಂಡಿಯಾದಿಂದ ಹೊರಬಿದ್ದರೇ, ಅವರ ಬದಲಿ ಆಟಗಾರ ಯಾರಾಗಬಹುದು ಎನ್ನುವ ಚರ್ಚೆ ಕೂಡಾ ಜೋರಾಗಿದೆ. ಹೀಗಾದಲ್ಲಿ ಅನುಭವಿ ವೇಗಿ ಮೊಹಮ್ಮದ್ ಸಿರಾಜ್‌ಗೆ ಬಿಸಿಸಿಐ ಆಯ್ಕೆ ಸಮಿತಿ ಬುಲಾವ್ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಯಾಕೆಂದರೆ ಮೊಹಮ್ಮದ್ ಸಿರಾಜ್ ದೇಶಿ ಕ್ರಿಕೆಟ್‌ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ಮಿಂಚಿದ್ದು, ಒಳ್ಳೆಯ ಲಯದಲ್ಲಿದ್ದಾರೆ. ಇದಷ್ಟೇ ಅಲ್ಲದೇ ಐಸಿಸಿಯಂತಹ ಟೂರ್ನಿಗಳನ್ನು ಆಡಿದ ಅನುಭವ ಇರುವ ಸಿರಾಜ್ ತಂಡ ಕೂಡಿಕೊಳ್ಳಬಹುದು ಎನ್ನುವ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ.
ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡ ಹೀಗಿದೆ:
ಸೂರ್ಯಕುಮಾರ್ ಯಾದವ್(ನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಇಶಾನ್ ಕಿಶನ್(ವಿಕೆಟ್ ಕೀಪರ್), ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅರ್ಶದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರಿಂಕು ಸಿಂಗ್.


