ವಿರಾಟ್ ಕೊಹ್ಲಿಗಾಗಿ T20 World Cup ಗೆಲ್ಲಿ: ಸುರೇಶ್ ರೈನಾ ಸಂದೇಶ
* ಟೀಂ ಇಂಡಿಯಾ ಆಟಗಾರರಿಗೆ ವಿಶೇಷ ಸಂದೇಶ ರವಾನಿಸಿದ ಸುರೇಶ್ ರೈನಾ
* ವಿರಾಟ್ ಕೊಹ್ಲಿಗಾಗಿ ಟಿ20 ವಿಶ್ವಕಪ್ ಗೆಲ್ಲಿ ಎಂದ ಮಾಜಿ ಕ್ರಿಕೆಟಿಗ
* ಈ ವಿಶ್ವಕಪ್ ಬಳಿಕ ಟೀಂ ಇಂಡಿಯಾ ಟಿ20 ನಾಯಕತ್ವದಿಂದ ಕೆಳಗಿಳಿಯಲಿರುವ ವಿರಾಟ್ ಕೊಹ್ಲಿ
ದುಬೈ(ಅ.18): ಐಸಿಸಿ ಟಿ20 ವಿಶ್ವಕಪ್ (ICC T20 World Cup) ಗೆಲ್ಲುವ ಮೂಲಕ ಟಿ20 ನಾಯಕತ್ವಕ್ಕೆ ತೆರೆ ಎಳೆಯಲು ವಿರಾಟ್ ಕೊಹ್ಲಿ (Virat Kohli) ಅರ್ಹರಿದ್ದಾರೆ ಎಂದು ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ (Suresh Raina) ಹೇಳಿದ್ದಾರೆ.
‘ಐಸಿಸಿ ಟಿ20 ವಿಶ್ವಕಪ್ ಆಡುತ್ತಿರುವ ಭಾರತೀಯ ಆಟಗಾರರಿಗೆ ಒಂದು ಸಂದೇಶವಿದೆ. ನೀವು ಕೊಹ್ಲಿಗಾಗಿ ವಿಶ್ವಕಪ್ ಗೆಲ್ಲಬೇಕು. ಇದು ಅವರು ನಾಯಕರಾಗಿರುವ ಕೊನೆಯ ಟಿ20 ಟೂರ್ನಿ. ಹೀಗಾಗಿ ವಿಶ್ವಕಪ್ ಗೆಲ್ಲಲು ಸಾಧ್ಯವಿದೆ ಎಂದು ಎಲ್ಲರನ್ನೂ ನಂಬುವಂತೆ ಮಾಡುವುದು ಕೊಹ್ಲಿಗೆ ಅಗತ್ಯ ಹಾಗೂ ಅವರ ಹಿಂದೆ ಹೋಗುವುದು ನಮಗೆ ಅಗತ್ಯವಿದೆ’ ಎಂದು ಐಸಿಸಿಗೆ ಬರೆದಿರುವ ಅಂಕಣದಲ್ಲಿ ತಿಳಿಸಿದ್ದಾರೆ. ‘ತಂಡದಲ್ಲಿರುವ ಎಲ್ಲಾ ಆಟಗಾರರು ಯುಎಇಯಲ್ಲಿ ಈಗಾಗಲೇ ಐಪಿಎಲ್ ಆಡಿದ್ದಾರೆ. ಹೀಗಾಗಿ ವಿಶ್ವಕಪ್ ಗೆಲ್ಲಲು ಭಾರತವೇ ಫೇವರಿಟ್’ ಎಂದಿದ್ದಾರೆ.
T20 World Cup: ಅಭ್ಯಾಸ ಪಂದ್ಯದಲ್ಲಿಂದು ಟೀಂ ಇಂಡಿಯಾಗೆ ಇಂಗ್ಲೆಂಡ್ ಸವಾಲು..!
ಯುಎಇನಲ್ಲಿ ನಡೆದ ಐಪಿಎಲ್ (IPL 2021) ಟೂರ್ನಿಯಲ್ಲಿ ಟಿ20 ವಿಶ್ವಕಪ್‌ಗೆ ಸ್ಥಾನ ಪಡೆದ ಭಾರತದ ಎಲ್ಲಾ ಆಟಗಾರರು ಕಣಕ್ಕಿಳಿದು, ಇಲ್ಲಿನ ವಾತಾವರಣವನ್ನು ಅರ್ಥ ಮಾಡಿಕೊಂಡಿದ್ದಾರೆ. ಇದು ಉಳಿದೆಲ್ಲ ತಂಡಗಳಿಗಿಂತ ಹೆಚ್ಚು ಟೀಂ ಇಂಡಿಯಾಗೆ ನೆರವಾಗಲಿದೆ ಎಂದು ಸುರೇಶ್ ರೈನಾ ಅಭಿಪ್ರಾಯಪಟ್ಟಿದ್ದಾರೆ. ಯುಎಇನಲ್ಲಿನ ವಾತಾವರಣವು ಭಾರತ ಹಾಗೂ ಪಾಕಿಸ್ತಾನದಲ್ಲಿರುವಂತ ವಾತಾವರಣವೇ ಇದೆ. ಹೀಗಾಗಿ ಏಷ್ಯಾದ ಆಟಗಾರರು ತಮ್ಮ ಸಹಜ ಆಟವನ್ನು ಪ್ರದರ್ಶಿಸಿದರೆ ಉತ್ತಮ ಫಲಿತಾಂಶ ಪಡೆಯಬಹುದು ಎಂದು ಸುರೇಶ್ ರೈನಾ ಹೇಳಿದ್ದಾರೆ.
ಟೀಂ ಇಂಡಿಯಾದ ಅಗ್ರ ಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ (Rohit Sharma), ವಿರಾಟ್ ಕೊಹ್ಲಿ (Virat Kohli) ಹಾಗೂ ಕೆ.ಎಲ್. ರಾಹುಲ್ (KL Rahul) ಈ ಮೂವರು ಬ್ಯಾಟ್ಸ್‌ಮನ್‌ಗಳ ಪೈಕಿ ಒಬ್ಬ ಬ್ಯಾಟ್ಸ್‌ಮನ್ ಕನಿಷ್ಠ 15 ಓವರ್ ತನಕ ಕ್ರೀಸ್‌ನಲ್ಲಿದ್ದರೆ, ಒಳ್ಳೆಯ ಮೊತ್ತ ಕಲೆಹಾಕಬಹುದು. ಇನ್ನು ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್ (Rishabh Pant) ಹಾಗೂ ಹಾರ್ದಿಕ್ ಪಾಂಡ್ಯ (Hardik Pandya) ಸ್ಪೋಟಕ ಬ್ಯಾಟಿಂಗ್ ನಡೆಸುವುದು ಕೂಡಾ ತಂಡದ ಪಾಲಿಗೆ ಮಹತ್ವದ್ದಾಗಲಿದೆ ಎಂದು ರೈನಾ ಹೇಳಿದ್ದಾರೆ. ಇನ್ನು ಯುಎಇ ಪಿಚ್‌ನಲ್ಲಿ ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಮಿಂಚಬಹುದು ಎಂದು ರೈನಾ ಭವಿಷ್ಯ ನುಡಿದಿದ್ದಾರೆ.
'ಪಾಠ ಶುರು ಮಾಡಿದ ಮೇಸ್ಟ್ರು' ಟೀಂ ಇಂಡಿಯಾಕ್ಕೆ ಧೋನಿ ಮೆಂಟರಿಂಗ್ ಶುರು!
ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನವೇ ನಾಯಕ ವಿರಾಟ್ ಕೊಹ್ಲಿ 2021ರ ವಿಶ್ವಕಪ್ ಮುಕ್ತಾಯದ ಬಳಿಕ ಟೀಂ ಇಂಡಿಯಾ ಟಿ20 ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದಾರೆ. ವಿರಾಟ್ ಕೊಹ್ಲಿ ನಾಯಕನಾಗಿ ಅಂಡರ್ 19 ವಿಶ್ವಕಪ್ ಹೊರತುಪಡಿಸಿ, ಉಳಿದ್ಯಾವುದೇ ಐಸಿಸಿ ಟ್ರೋಫಿಯನ್ನು ಇದುವರೆಗೂ ಜಯಿಸಿಲ್ಲ. ಹೀಗಾಗಿ ಈ ಬಾರಿ ಐಸಿಸಿ ಟಿ20 ವಿಶ್ವಕಪ್ ಟ್ರೋಫಿ ಜಯಿಸಲು ಕೊಹ್ಲಿ ಮೆಂಟರ್ ಮಹೇಂದ್ರ ಸಿಂಗ್ ಧೋನಿ ಜತೆಗೂಡಿ ರಣತಂತ್ರ ಹೆಣೆಯುತ್ತಿದ್ದಾರೆ.
2007ರಲ್ಲಿ ನಡೆದ ಚೊಚ್ಚಲ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ (MS Dhoni) ನೇತೃತ್ವದ ಭಾರತೀಯ ಕ್ರಿಕೆಟ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಪಾಕಿಸ್ತಾನ ವಿರುದ್ದ ನಡೆದ ಫೈನಲ್ ಪಂದ್ಯದಲ್ಲಿ ಧೋನಿ ಪಡೆ ಗೆದ್ದು ಬೀಗುವ ಮೂಲಕ ಚೊಚ್ಚಲ ಆವೃತ್ತಿಯ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿತ್ತು. ಇದಾದ ಬಳಿಕ ಟೀಂ ಇಂಡಿಯಾ ಟಿ20 ವಿಶ್ವಕಪ್ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಇದೇ ಮೊದಲ ಬಾರಿಗೆ ವಿರಾಟ್ ಕೊಹ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿದ್ದು, ಟ್ರೋಫಿ ಗೆದ್ದು ನಾಯಕತ್ವದಿಂದ ಕೆಳಗಿಳಿಯಲು ಎದುರು ನೋಡುತ್ತಿದ್ದಾರೆ.