T20 World Cup: ಆಸೀಸ್ ಎದುರಿನ ಅಭ್ಯಾಸ ಪಂದ್ಯದಲ್ಲೇ ಅಬ್ಬರಿಸಿ ಬೊಬ್ಬಿರಿದ ಸೂರ್ಯ, ರಾಹುಲ್..!
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಅಬ್ಬರ
ಸ್ಪೋಟಕ ಅರ್ಧಶತಕ ಸಿಡಿಸಿ ಸಂಭ್ರಮಿಸಿದ ಕೆ ಎಲ್ ರಾಹುಲ್, ಸೂರ್ಯಕುಮಾರ್ ಯಾದವ್
ಮೊದಲು ಬ್ಯಾಟ್ ಮಾಡಿ 186 ರನ್ ಕಲೆಹಾಕಿದ ರೋಹಿತ್ ಶರ್ಮಾ ಪಡೆ
ಬ್ರಿಸ್ಬೇನ್(ಆ.17): ಆರಂಭಿಕ ಬ್ಯಾಟರ್ ಕೆ ಎಲ್ ರಾಹುಲ್ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬೆನ್ನೆಲುಬು ಸೂರ್ಯಕುಮಾರ್ ಯಾದವ್ ಬಾರಿಸಿದ ಸ್ಪೋಟಕ ಅರ್ಧಶತಕಗಳ ನೆರವಿನಿಂದ ಆಸ್ಟ್ರೇಲಿಯಾ ಎದುರಿನ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಕಳೆದುಕೊಂಡು 186 ರನ್ ಬಾರಿಸಿದೆ. ಈ ಮೂಲಕ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಟೀಂ ಇಂಡಿಯಾ ಬ್ಯಾಟಿಂಗ್‌ನಲ್ಲಿ ಭರ್ಜರಿ ತಾಲೀಮು ನಡೆಸಿದ್ದು, ಬೌಲಿಂಗ್‌ನಲ್ಲಿ ಯಾವ ರೀತಿ ಪ್ರದರ್ಶನ ತೋರಲಿದೆ ಎನ್ನುವ ಕುತೂಹಲ ಜೋರಾಗಿದೆ.
ಇಲ್ಲಿನ ಗಾಬಾ ಮೈದಾನದಲ್ಲಿ ಆರಂಭವಾದ ಅಭ್ಯಾಸ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಆರೋನ್ ಫಿಂಚ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾಗೆ ನಾಯಕ ರೋಹಿತ್ ಶರ್ಮಾ ಹಾಗೂ ಕೆ ಎಲ್ ರಾಹುಲ್ ಸ್ಪೋಟಕ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 7.3 ಓವರ್‌ಗಳಲ್ಲಿ 78 ರನ್‌ಗಳ ಜತೆಯಾಟವಾಡಿತು. ಅದರಲ್ಲೂ ಮೈಚಳಿ ಬಿಟ್ಟು ಬ್ಯಾಟ್ ಬೀಸಿದ ಕೆ ಎಲ್ ರಾಹುಲ್ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಮಿಂಚಿದರು. ರಾಹುಲ್ 33 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಆಕರ್ಷಕ 57 ರನ್ ಬಾರಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ನಾಯಕ ರೋಹಿತ್ ಶರ್ಮಾ 14 ಎಸೆತಗಳಲ್ಲಿ ತಲಾ ಒಂದು ಬೌಂಡರಿ ಹಾಗೂ ಸಿಕ್ಸರ್ ಸಹಿತ 15 ರನ್ ಬಾರಿಸಿ ಆಸ್ಟನ್ ಏಗರ್‌ಗೆ ವಿಕೆಟ್ ಒಪ್ಪಿಸಿದರು.
ಇನ್ನು ಮಧ್ಯಮ ಕ್ರಮಾಂಕದಲ್ಲಿ ಚುರುಕಿನ ಬ್ಯಾಟಿಂಗ್ ನಡೆಸಿದ ವಿರಾಟ್ ಕೊಹ್ಲಿ ಕೇವಲ 13 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 19 ರನ್ ಬಾರಿಸಿ ಮಿಚೆಲ್ ಸ್ಟಾರ್ಕ್ ಬೌಲಿಂಗ್‌ನಲ್ಲಿ ಫುಲ್ ಮಾಡುವ ಯತ್ನದಲ್ಲಿ ವಿಕೆಟ್ ಒಪ್ಪಿಸಿದರು. ಇನ್ನು ಟೀಂ ಇಂಡಿಯಾ ಬ್ಯಾಟಿಂಗ್ ಬೆನ್ನೆಲುಬು ಎನಿಸಿಕೊಂಡಿರುವ ಸೂರ್ಯಕುಮಾರ್ ಯಾದವ್, ತಮ್ಮ ಬ್ಯಾಟಿಂಗ್ ಲಯವನ್ನು ಮತ್ತೊಮ್ಮೆ ಮುಂದುವರೆಸಿದ್ದು, ಅಭ್ಯಾಸ ಪಂದ್ಯದಲ್ಲೂ ಆಸೀಸ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಕೇವಲ 33 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 50 ರನ್ ಬಾರಿಸಿ ಕೇನ್ ರಿಚರ್ಡ್‌ಸನ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಕೊನೆಯಲ್ಲಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ 14 ಎಸೆತಗಳಲ್ಲಿ 20 ರನ್ ಬಾರಿಸುವ ಮೂಲಕ ತಂಡಕ್ಕೆ ಉಪಯುಕ್ತ ರನ್ ಕಾಣಿಕೆ ನೀಡಿದರು.
T20 World Cup ಅಭ್ಯಾಸ ಪಂದ್ಯದಲ್ಲಿ ಸ್ಪೋಟಕ ಆರಂಭ ಪಡೆದ ಟೀಂ ಇಂಡಿಯಾ
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪರ ಮಾರಕ ದಾಳಿ ನಡೆಸಿದ ಕೇನ್ ರಿಚರ್ಡ್‌ಸನ್ 30 ರನ್ ನೀಡಿ 4 ವಿಕೆಟ್ ಪಡೆದರೆ, ಮಿಚೆಲ್ ಸ್ಟಾರ್ಕ್, ಗ್ಲೆನ್ ಮ್ಯಾಕ್ಸ್ ಹಾಗೂ ಆಸ್ಟನ್ ಏಗರ್ ತಲಾ ಒಂದೊಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಭಾರತ:186/7
ಕೆ ಎಲ್ ರಾಹುಲ್: 57
ಸೂರ್ಯಕುಮಾರ್ ಯಾದವ್: 50
ಕೇನ್ ರಿಚರ್ಡ್‌ಸನ್: 30/4
(* ಭಾರತದ ಬ್ಯಾಟಿಂಗ್ ಮುಕ್ತಾಯದ ವೇಳೆಗೆ)