* ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆಯಿಟ್ಟ ಕರ್ನಾಟಕ* ಸೆಮಿಫೈನಲ್‌ನಲ್ಲಿ ವಿದರ್ಭ ಎದುರು 4 ರನ್‌ಗಳ ರೋಚಕ ಜಯ* ಫೈನಲ್‌ನಲ್ಲಿ ಪ್ರಶಸ್ತಿಗಾಗಿ ತಮಿಳುನಾಡು ವಿರುದ್ದ ಸೆಣಸಾಟ

ದೆಹಲಿ(ನ.20): ಮತ್ತೊಮ್ಮೆ ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿ ಪಂದ್ಯ ಗೆಲ್ಲುವಲ್ಲಿ ಕರ್ನಾಟಕ ತಂಡವು ಯಶಸ್ವಿಯಾಗಿದೆ. ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಸೆಮಿಫೈನಲ್‌ನಲ್ಲಿ ಬಲಿಷ್ಠ ವಿದರ್ಭ ತಂಡದ ಎದುರು 4 ರನ್‌ಗಳ ರೋಚಕ ಜಯ ಸಾಧಿಸಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಇದೀಗ ಫೈನಲ್‌ನಲ್ಲಿ ದಕ್ಷಿಣ ಭಾರತದ ಎರಡು ಬಲಿಷ್ಠ ತಂಡಗಳಾದ ಕರ್ನಾಟಕ ಹಾಗೂ ತಮಿಳುನಾಡು ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. 

ಕರ್ನಾಟಕ ನೀಡಿದ್ದ 177 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ವಿದರ್ಭ ತಂಡವು ಸ್ಪೋಟಕ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಗಣೇಶ್ ಸತೀಶ್ ಹಾಗೂ ಅತರ್ವ್ ತೈಡೆ ಜೋಡಿ 4.6 ಓವರ್‌ಗಳಲ್ಲಿ 43 ರನ್‌ಗಳ ಜತೆಯಾಟ ನಿಭಾಯಿಸಿತು. ಅಥರ್ವ ತೈಡೆ 16 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್‌ ಸಹಿತ 32 ರನ್ ಬಾರಿಸಿ ಕರಿಯಪ್ಪ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಎಚ್ಚರಿಕೆಯ ಬ್ಯಾಟಿಂಗ್‌ ನಡೆಸಿದ ಗಣೇಶ್ ಸತೀಷ್ 27 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ 1 ಸಿಕ್ಸರ್‌ ಸಹಿತ 31 ರನ್‌ ಬಾರಿಸಿ ಸುಚಿನ್ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದರು.

Scroll to load tweet…
Scroll to load tweet…

ಇನ್ನು ಮಧ್ಯಮ ಕ್ರಮಾಂಕದಲ್ಲಿ ನಾಯಕ ಅಕ್ಷಯ್ ವಾಡೆಕರ್ 15 ರನ್‌ ಬಾರಿಸಿ ಕರುಣ್ ನಾಯರ್ ಬೌಲಿಂಗ್‌ನಲ್ಲಿ ಕ್ಲೀನ್‌ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಶುಭಂ ದುಬೆ 16 ಎಸೆತಗಳನ್ನು ಎದುರಿಸಿ 24 ರನ್‌ ಬಾರಿಸಿ ಕರಿಯಪ್ಪಗೆ ಎರಡನೇ ಬಲಿಯಾದರು. ಜಿತೇಶ್ ಶರ್ಮಾ 12 ಬಾರಿಸಿ ವಿಕೆಟ್ ಒಪ್ಪಿಸಿದರು. ಈ ವೇಳೆ ವಿದರ್ಭ 14.5 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 122 ರನ್‌ ಬಾರಿಸಿತ್ತು.

Syed Mushtaq Ali Trophy: ಪಾಂಡೆ-ಕದಂ ಅಬ್ಬರ, ವಿದರ್ಭಗೆ ಕಠಿಣ ಗುರಿ ನೀಡಿದ ಕರ್ನಾಟಕ

ಇನ್ನು ಆರನೇ ವಿಕೆಟ್‌ಗೆ ಅಪೂರ್ವ್ ವಾಂಖಡೆ ಹಾಗೂ ಅಕ್ಷಯ್‌ ಕಾರ್ನೆವರ್ 41 ರನ್‌ಗಳ ಜತೆಯಾಟವಾಡುವ ಮೂಲಕ ವಿದರ್ಭ ತಂಡಕ್ಕೆ ಗೆಲುವಿನ ಆಸೆ ಮೂಡಿಸಿದರು. ಕೊನೆಯ ಓವರ್‌ನಲ್ಲಿ ವಿದರ್ಭ ಗೆಲ್ಲಲು ಕೇವಲ 14 ರನ್‌ಗಳ ಅಗತ್ಯವಿತ್ತು. ವಿದ್ಯಾಧರ್ ಪಾಟೀಲ್ ಮೊದಲ ಎಸೆತದಲ್ಲೇ ಅಕ್ಷಯ್ ಕಾರ್ನೆವರ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಕಾರ್ನೆವರ್ 12 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 22 ರನ್ ಬಾರಿಸಿ ಪೆವಿಲಿಯನ್ ಸೇರಿದರು. ಮತ್ತೊಂದು ತುದಿಯಲ್ಲಿ ಅಪೂರ್ವ್‌ ವಾಂಖಡೆ ಅಜೇಯ 27 ರನ್ ಬಾರಿಸಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ವಿಫಲರಾದರು.

ಕರ್ನಾಟಕ ಪರ ಕೆ.ಸಿ ಕರಿಯಪ್ಪ 2 ವಿಕೆಟ್ ಪಡೆದರೆ, ದರ್ಶನ್‌, ಸುಚಿತ್, ವಿದ್ಯಾಧರ್ ಹಾಗೂ ಕರುಣ್ ನಾಯರ್ ತಲಾ ಒಂದೊಂದು ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕರ್ನಾಟಕ ತಂಡಕ್ಕೆ ನಾಯಕ ಮನೀಶ್ ಪಾಂಡೆ ಹಾಗೂ ರೋಹನ್ ಕದಂ ಉತ್ತಮ ಆರಂಭವನ್ನೇ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 132 ರನ್‌ಗಳ ಜತೆಯಾಟ ನಿಭಾಯಿಸಿತು. ರೋಹನ್ ಕದಂ 87 ರನ್ ಬಾರಿಸಿದರೆ, ಮನೀಶ್ ಪಾಂಡೆ 54 ರನ್ ಚಚ್ಚಿದರು. ಇನ್ನು ಅಭಿನವ್ ಮನೋಹರ್ ಕೇವಲ 13 ಎಸೆತಗಳಲ್ಲಿ 27 ರನ್ ಸಿಡಿಸುವ ಮೂಲಕ ಉಪಯುಕ್ತ ಕಾಣಿಕೆ ನೀಡಿದರು.

ಇನ್ನು ವಿದರ್ಭ ಪರ 20 ಓವರ್‌ ಬೌಲಿಂಗ್‌ ಮಾಡಿದ ದರ್ಶನ್‌ ನಾಲ್ಕಂಡೆ ಕೇವಲ ಒಂದು ರನ್ ನೀಡಿ ಹ್ಯಾಟ್ರಿಕ್ ಸಹಿತ ಸತತ 4 ವಿಕೆಟ್ ಕಬಳಿಸಿ ಮಿಂಚಿದರು.