ಸೂರ್ಯಕುಮಾರ್ ಯಾದವ್ ಐಪಿಎಲ್ 2025ರಲ್ಲಿ 717 ರನ್ ಗಳಿಸಿ ನಾನ್ ಓಪನರ್ ಆಗಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಬರೆದಿದ್ದಾರೆ. ಇದರೊಂದಿಗೆ 9 ವರ್ಷಗಳಿಂದ ಎಬಿ ಡಿವಿಲಿಯರ್ಸ್ ಹೆಸರಿನಲ್ಲಿದ್ದ ದಾಖಲೆ ಮುರಿದಿದ್ದಾರೆ. 

ಬೆಂಗಳೂರು: ಈ ಐಪಿಎಲ್ ಸೀಸನ್‌ನಲ್ಲಿ ಸೂರ್ಯಕುಮಾರ್ ಬ್ಯಾಟ್ ಚೆನ್ನಾಗಿ ಮಾತಾಡಿದೆ. ಒಂದಕ್ಕಿಂತ ಒಂದು ದೊಡ್ಡ ದಾಖಲೆಗಳನ್ನ ಬರೆದಿದ್ದಾರೆ. ಅವರ ಈ ಭರ್ಜರಿ ಬ್ಯಾಟಿಂಗ್ ದೊಡ್ಡ ದಾಖಲೆಗಳನ್ನೇ ಮುರಿದಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಕ್ವಾಲಿಫೈಯರ್ 2ರಲ್ಲಿ 44 ರನ್ ಗಳಿಸಿ 9 ವರ್ಷ ಹಳೆಯ ಎಬಿ ಡಿವಿಲಿಯರ್ಸ್ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಮುರಿದ್ರು. ಅಷ್ಟಕ್ಕೂ ಭಾರತದ ಮಿಸ್ಟರ್ 360 ಖ್ಯಾತಿಯ ಸೂರ್ಯಕುಮಾರ್ ದಾಖಲೆ ಏನೆಂದು ನೋಡೋಣ ಬನ್ನಿ

ಐಪಿಎಲ್‌ನಲ್ಲಿ ಹೆಚ್ಚಿನ ರನ್‌ಗಳನ್ನ ಓಪನರ್‌ಗಳೇ ಗಳಿಸೋದು. ಆರೆಂಜ್ ಕ್ಯಾಪ್ ರೇಸ್‌ನಲ್ಲೂ ಓಪನರ್‌ಗಳೇ ಮುಂದಿರುತ್ತಾರೆ. ಆದ್ರೆ ಈ ಸಲ ಡಿಫರೆಂಟ್ ಆಗಿತ್ತು. ಸಾಯಿ ಸುದರ್ಶನ್, ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಮಿಚೆಲ್ ಮಾರ್ಷ್ ತರ ಓಪನರ್‌ಗಳು ಭರ್ಜರಿ ರನ್ ಗಳಿಸಿದ್ರು. ಮತ್ತೊಂದೆಡೆ ಮಿಡಲ್ ಆರ್ಡರ್‌ನಲ್ಲಿ ಸೂರ್ಯಕುಮಾರ್ ಕಮಾಲ್ ಮಾಡಿದ್ರು. ಟೂರ್ನಿಯುದ್ದಕ್ಕೂ ಮುಂಬೈ ಇಂಡಿಯನ್ಸ್ ಪರ ಸೂರ್ಯಕುಮಾರ್ ಯಾದವ್ ಸ್ಥಿರ ಪ್ರದರ್ಶನ ತೋರಿದರು. ಈ ಕಾರಣಕ್ಕಾಗಿಯೇ ಮುಂಬೈ ಇಂಡಿಯನ್ಸ್ ಎರಡನೇ ಕ್ವಾಲಿಫೈಯರ್ ಹಂತಕ್ಕೆ ಲಗ್ಗೆಯಿಟ್ಟಿತ್ತು.

ಎಬಿ ಡಿವಿಲಿಯರ್ಸ್ ದಾಖಲೆ ಮುರಿದ ಸೂರ್ಯಕುಮಾರ್ ಯಾದವ್

ಸೂರ್ಯಕುಮಾರ್ ಬರೆದ ಹೊಸ ದಾಖಲೆ ಇತಿಹಾಸದ ಪುಟ ಸೇರಿದೆ. ನಾನ್ ಓಪನರ್ ಆಗಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿ ಇದೀಗ ಸೂರ್ಯಕುಮಾರ್ ಯಾದವ್ ಹೊರಹೊಮ್ಮಿದ್ದಾರೆ. ಹೌದು, ಈ ಮೊದಲು ಆರ್‌ಸಿಬಿಯ ಆಪತ್ಬಾಂಧವ ಎಂದೇ ಗುರುತಿಸಿಕೊಂಡಿದ್ದ ಎಬಿ ಡಿವಿಲಿಯರ್ಸ್ ಐಪಿಎಲ್ ಆವೃತ್ತಿಯೊಂದರಲ್ಲಿ ಅತಿಹೆಚ್ಚು ರನ್‌ ಗಳಿಸಿದ ನಾನ್ ಓಪನ್ನರ್ ಬ್ಯಾಟರ್ ಎನಿಸಿಕೊಂಡಿದ್ದರು. ಎಬಿಡಿ 2016ರ ಐಪಿಎಲ್‌ನಲ್ಲಿ ಆರ್‌ಸಿಬಿ ಪರ 687 ರನ್ ಸಿಡಿಸಿದ್ದರು. ಆದರೆ ಇದೀಗ 2025ರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಸೂರ್ಯಕುಮಾರ್ ಯಾದವ್ 717 ರನ್ ಸಿಡಿಸುವ ಮೂಲಕ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ಇದರ ಜತೆಗೆ ಎಬಿ ಡಿವಿಲಿಯರ್ಸ್ ಹೆಸರಿನಲ್ಲಿ ಕಳೆದ 9 ವರ್ಷಗಳಿಂದ ಭದ್ರವಾಗಿದ್ದ ಅಪರೂಪದ ದಾಖಲೆಯನ್ನು ಬ್ರೇಕ್ ಮಾಡುವಲ್ಲಿ ಸೂರ್ಯ ಯಶಸ್ವಿಯಾಗಿದ್ದಾರೆ.

Scroll to load tweet…

ಐಪಿಎಲ್ 2025ರಲ್ಲಿ ಸೂರ್ಯಕುಮಾರ್ ಭರ್ಜರಿ ಬ್ಯಾಟಿಂಗ್

ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸೂರ್ಯಕುಮಾರ್ ಯಾದವ್ ಕ್ವಾಲಿಫೈಯರ್ 2 ಪಂದ್ಯದ ಅಂತ್ಯದ ವೇಳೆಗೆ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಿಯಾಗಿ ತಮ್ಮ ಅಭಿಯಾನ ಮುಗಿಸಿದ್ದಾರೆ. ಸೂರ್ಯ ಮುಂಬೈ ಪರ 16 ಪಂದ್ಯಗಳನ್ನಾಡಿ 65.18ರ ಬ್ಯಾಟಿಂಗ್ ಸರಾಸರಿಯಲ್ಲಿ 5 ಅರ್ಧಶತಕ ಸಹಿತ 717 ರನ್ ಸಿಡಿಸಿದ್ದಾರೆ. ಇನ್ನು ಸೂರ್ಯಕುಮಾರ್ ಯಾದವ್ ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ತಾನಾಡಿದ ಎಲ್ಲಾ 16 ಪಂದ್ಯಗಳಲ್ಲೂ 25 ರನ್ ಬಾರಿಸುವ ಮೂಲಕ ಹೊಸ ಮೈಲಿಗಲ್ಲು ನೆಡುವಲ್ಲಿ ಯಶಸ್ವಿಯಾಗಿದ್ದಾರೆ.

ಮುಂಬೈ ಪರ 700 ರನ್ ಬಾರಿಸಿದ ಮೊದಲಿಗ ಸೂರ್ಯ:

ಸ್ಥಿರ ಆಟಕ್ಕೆ ಹೆಸರುವಾಸಿಯಾಗಿರುವ ಸೂರ್ಯಕುಮಾರ್ ಯಾದವ್, ಇದೀಗ ಐಪಿಎಲ್ ಆವೃತ್ತಿಯೊಂದರಲ್ಲಿ ಮುಂಬೈ ಇಂಡಿಯನ್ಸ್ ಪರ 700 ರನ್ ಬಾರಿಸಿದ ಮೊದಲ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. 5 ಬಾರಿಯ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡದಲ್ಲಿ ಇದುವರೆಗೂ ಯಾವೊಬ್ಬ ಬ್ಯಾಟರ್ ಕೂಡಾ 700 ರನ್ ಬಾರಿಸಿರಲಿಲ್ಲ. ಆದರೆ ಇದೀಗ ಮುಂಬೈನ ಅತ್ಯಂತ ನಂಬಿಗಸ್ಥ ಬ್ಯಾಟರ್ ಸೂರ್ಯ ಟೂರ್ನಿಯಲ್ಲಿ 717 ರನ್ ಸಿಡಿಸುವ ಮೂಲಕ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ಸೂರ್ಯಕುಮಾರ್ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಹೊರತಾಗಿಯೂ ಮುಂಬೈ ಇಂಡಿಯನ್ಸ್, ಕ್ವಾಲಿಫೈಯರ್ 2 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು 5 ವಿಕೆಟ್ ಅಂತರದ ಸೋಲು ಅನುಭವಿಸುವ ಮೂಲಕ ತನ್ನ ಅಭಿಯಾನವನ್ನು ಮುಗಿಸಿದೆ.